ಬಂಟ್ವಾಳ: ಗ್ರಾಮವಿಕಾಸ ಯೋಜನೆಯನ್ವಯ ಬಂಟ್ವಾಳ ತಾಲೂಕಿನ ಐದು ಗ್ರಾಮಗಳು ಆಯ್ಕೆಯಾಗಿದ್ದು, ಆದ್ಯತೆ ಮೇರೆಗೆ ಸೂಚಿತ ಕಾಮಗಾರಿಯನ್ನು ಕೈಗೆತ್ತಿಕೊಳ್ಳಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೂಚಿಸಿದ್ದಾರೆ.
ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಶನಿವಾರ ಮಧ್ಯಾಹ್ನ ಯೋಜನೆಗೆ ಆಯ್ಕೆಯಾದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಪಿಡಿಒಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಯೋಜನೆಯನ್ವಯ ಪ್ರತಿ ಗ್ರಾಮಕ್ಕೆ 75 ಲಕ್ಷಗಳು ನಿಗದಿಯಾಗಿದ್ದು, ಅವುಗಳಲ್ಲಿ 38.5 ಲಕ್ಷ ರೂಪಾಯಿಗಳು ಬಿಡುಗಡೆಗೊಂಡಿವೆ. ಮಾರ್ಗಸೂಚಿಯಲ್ಲಿರುವಂತೆ ರಂಗಮಂದಿರ, ಕ್ರೀಡಾಂಗಣ, ಜಿಮ್, ಸೆಟಲೈಟ್ ಸಂಪರ್ಕ ಸಹಿತ ಪ್ರಮುಖ ವಿಚಾರಗಳನ್ನು ಆದ್ಯತೆ ಮೇಲೆ ಕೈಗೊಳ್ಳಿ. ನಿಗದಿತ ದಿನಾಂಕದಂದೇ ಮುಗಿಸಿ ಎಂದು ಸಲಹೆ ನೀಡಿದರು.
ಗ್ರಾಮವಿಕಾಸ ಹೀಗಿದೆ
ಗ್ರಾಮದೊಳಗಿನ ಪರಿಸರವನ್ನು ಉತ್ತಮಪಡಿಸಲು ರಸ್ತೆ, ಚರಂಡಿ(ಸ್ಥಳೀಯ ಅವಶ್ಯಕತೆ ಆಧರಿಸಿ ಸಿಸಿ ರಸ್ತೆ, ಕಲ್ಲುಚಪ್ಪಡಿ ರಸ್ತೆಗಳನ್ನು ಗ್ರಾಮ ಪಂಚಾಯಿತಿಗಳು ನಿರ್ಧರಿಸಿದ ಮಾದರಿಯಲ್ಲಿ)ಗೆ ಅಂದಾಜು ಮೊತ್ತ 37.5 ಲಕ್ಷ ರೂಪಾಯಿ. ಗ್ರಂಥಾಲಯ, ಸಾಹಿತಿ, ಕಲಾವಿದರ ಸ್ಮಾರಕ, ಸಭಾಭವನ ಅಥವಾ ಬಯಲು ರಂಗಮಂದಿರ ನಿರ್ಮಾಣಕ್ಕೆ 9 ಲಕ್ಷ ರೂಪಾಯಿ. ಯುವಕ, ಯುವತಿ ಮಂಡಳಿಗಳ ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿಗೆ ಜಿಮ್, ಗರಡಿಮನೆ, ಫ್ಲಡ್ ಲೈಟ್ ಆಟದ ಮೈದಾನ, ದೇಶಿ ಕ್ರೀಡೆ ಅಭಿವೃದ್ಧಿ ಚಟುವಟಿಕೆಗಳಿಗೆ 9 ಲಕ್ಷ ರೂಪಾಯಿ. ಸೌರ ಬೆಳಕು ದೀಪಗಳ ಅಳವಡಿಕೆಗೆ 2.25 ಲಕ್ಷ ರೂಪಾಯಿ, ತಿಪ್ಪೆಗುಂಡಿಗಳ ವೈಜ್ಞಾನಿಕ ಸಂಸ್ಕರಣಾ ಘಟಕ ನಿರ್ಮಾಣಕ್ಕೆ 7.5 ಲಕ್ಷ ರೂಪಾಯಿ, ಗ್ರಾಮ ಪಂಚಾಯಿತಿ ನಡವಳಿಗಳನ್ನು ಟೆಲಿವಿಷನ್ ಮೂಲಕ ನೇರ ಪ್ರಸಾರ ಮಾಡುವ ಮೂಲಸೌಕರ್ಯಕ್ಕೆ 1.5 ಲಕ್ಷ. ರೂ, ಗುಡಿ, ಮಸೀದಿ, ಚರ್ಚ್, ಜೀರ್ಣೋದ್ಧಾರ, ಕಟ್ಟಡ ನಿರ್ಮಾಣಕ್ಕೆ 4.5 ಲಕ್ಷ ರೂಪಾಯಿ ಹಾಗೂ ಫ್ಲೆಕ್ಸಿ ಫಂಡ್ 3.75 ಲಕ್ಷ ರೂಪಾಯಿ ಒಟ್ಟು 75 ಲಕ್ಷ ರೂಪಾಯಿ ಕಾಮಗಾರಿಗಳನ್ನು ಗ್ರಾಮವಿಕಾಸ ಯೋಜನೆಯಡಿ ಮಾಡಬಹುದು ಎಂದು ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನರೇಂದ್ರಬಾಬು ಮಾಹಿತಿ ನೀಡಿದರು.
ಪ್ರತಿ ತಿಂಗಳೂ ಈ ಕುರಿತು ಸಭೆಯನ್ನು ಕರೆದು ಪ್ರಗತಿ ಪರಿಶೀಲನೆ ನಡೆಸಬೇಕು, ಸಮರ್ಪಕ ಅನುಷ್ಠಾನ ಕುರಿತು ಆಯಾ ಗ್ರಾಮಗಳಿಂದ ಆದ್ಯತೆ ಪಟ್ಟಿ ನೀಡಬೇಕು ಎಂದು ಅವರು ಕೋರಿದರು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಐದು ಗ್ರಾಮಗಳನ್ನು ಆದ್ಯತೆ ಮೇರೆಗೆ ಆಯ್ಕೆ ಮಾಡಿಕೊಂಡು ಅಲ್ಲಿ ಗ್ರಾಮವಿಕಾಸ ಯೋಜನೆ ಜಾರಿಗೆ ಮುಂದಿನ ಮಾರ್ಚ್ ಒಳಗೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಬಂಟ್ವಾಳ ತಾಲೂಕಿನಲ್ಲಿ ಅಜ್ಜಿಬೆಟ್ಟು, ಬಡಗಬೆಳ್ಳೂರು, ಕಾವಳಮುಡೂರು, ಸಾಲೆತ್ತೂರು, ಕೊಯ್ಲ ಗ್ರಾಮಗಳು ಆಯ್ಕೆಯಾಗಿವೆ. ಅಜ್ಜಿಬೆಟ್ಟುವಿನಲ್ಲಿ 2460, ಬಡಗಬೆಳ್ಳೂರಿನಲ್ಲಿ 3874, ಕಾವಳಮುಡೂರಿನಲ್ಲಿ 4642, ಸಾಲೆತ್ತೂರಿನಲ್ಲಿ 2698 ಹಾಗೂ ಕೊಯ್ಲದಲ್ಲಿ 2083 ಜನಸಂಖ್ಯೆಯಿದ್ದು ಒಟ್ಟು 15757 ಮಂದಿ ಇದರ ಫಲಾನುಭವಿಗಳಾಗಿರುತ್ತಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.
ಈ ಸಂದರ್ಭ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಮಂಗಳೂರು ವಿಭಾಗದ ಲೋಕೋಪಯೋಗಿ, ಬಂದರು, ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಗಣೇಶ್ ಅರಳೀಕಟ್ಟಿ , ಬಂಟ್ವಾಳ ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್, ಆಯ್ಕೆಗೊಂಡ ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಸಹಿತ ಅಧಿಕಾರಿಗಳು ಉಪಸ್ಥಿತರಿದ್ದರು.