ಬಂಟ್ವಾಳ: ಅಮ್ಮುಂಜೆ ಗ್ರಾಮದ ಕಲಾಯಿ ಮತ್ತು ಮಲ್ಲೂರು ಪ್ರದೇಶದಲ್ಲಿ 6 ಮಂದಿಗೆ ಹುಚ್ಚುನಾಯಿ ಕಚ್ಚಿ ಗಾಯಗೊಳಿಸಿದೆ.
ಮನುಷ್ಯರನ್ನಲ್ಲದೆ ಜಾನುವಾರುಗಳಿಗೂ ತೊಂದರೆ ಉಂಟು ಮಾಡುತ್ತಿರುವ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಶುಕ್ರವಾರ ಇಲ್ಲಿನ ಶಂಕರ್ ಎಂಬವರ ಪುತ್ರ ತಮ್ಮು, ಮೋನಪ್ಪ ಪೂಜಾರಿ ಪುತ್ರಿ ಅನಿತ, ಶಫೀಯ ಎಂಬವರ ಸಹಿತ ನಾಲ್ಕು ಮಂದಿಗೆ ಹಾಗೂ ಶನಿವಾರ ಇಬ್ಬರು ಶಾಲಾ ಮಕ್ಕಳಿಗೆ ಹುಚ್ಚು ನಾಯಿ ಕಡಿದಿದ್ದು ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ನಡುವೆ ಬಶೀರ್, ರಜಿತ್ ಶೆಟ್ಟಿ, ಹನೀಫ್ ಎಂಬವರಿಗೆ ಸೇರಿದ ಜಾನುವಾರುಗಳಿಗೂ ಈ ಹುಚ್ಚು ನಾಯಿಗಳು ಕಡಿದು ಗಾಯಗೊಳಿಸಿದೆ ಎಂದು ತಿಳಿದು ಬಂದಿದೆ.
ಗ್ರಾಮದ ಕಲಾಯಿ ಮತ್ತು ಮಲ್ಲೂರು ಪರಿಸರದಲ್ಲಿ ಸುಮಾರು 4 ರಿಂದ 5 ಹುಚ್ಚು ನಾಯಿಗಳು ಓಡಾಡುತ್ತಿವೆ.
ಒಂದು ನಾಯಿಯನ್ನು ಸಾರ್ವಜನಿಕರು ಹೊಡೆದು ಕೊಂದು ಹಾಕಿದ್ದಾರೆ. ಹುಚ್ಚು ನಾಯಿ ಹಾವಳಿಯ ಬಗ್ಗೆ ಸ್ಥಳೀಯ ಪಂಚಾಯತ್‌ಗೆ ಗ್ರಾಮಸ್ಥರು ದೂರು ನೀಡಿದ್ದರೂ ಪಂಚಾಯತ್ ಇದಕ್ಕೆ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು ಈ ಬಗ್ಗೆ ಬಂಟ್ವಾಳ ತಹಶೀಲ್ದಾರರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.