ವಿಟ್ಲ: ಸುಮಾರು 50 ಮಂದಿಗೆ ವಿವಿಧ ರೀತಿಯಲ್ಲಿ ಒಟ್ಟು 3 ಕೋಟಿ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿದಿದ್ದ ಪುರಂದರ ಸೇರಾಜೆ (39) ಕೊನೆಗೂ ಗುರುವಾರ ಬೊಬ್ಬೆಕೇರಿಯಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿ ಪೊಲೀಸ್ ಅತಿಥಿಯಾಗಿದ್ದಾನೆ.
ಕೆಲವು ಸಮಯದಿಂದ ನಾಗರಿಕರ ಮುಂದೆ ಕಾಣಿಸಿಕೊಳ್ಳದ ಈತ ಗುರುವಾರ ಬೊಬ್ಬೆಕೇರಿಯಲ್ಲಿರುವ ತಮ್ಮ ಹೋಟೇಲ್‌ನಿಂದ ವಸ್ತುಗಳನ್ನು ಸಾಗಾಟ ಮಾಡಲು ಯತ್ನಿಸಿದಾಗ ನಾಗರೀಕರು ಗಮನಿಸಿ ಹಿಡಿದು ವಿಟ್ಲ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು.
ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ ಅವರಿಗೆ ಸುಮಾರು 50 ಮಂದಿ ನೀಡಿದ ದೂರಿನ ಹಿನ್ನಲೆಯಲ್ಲಿ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದಾರೆ.
ವಂಚನೆ ನಡೆಸಿದ ಪುರಂದರ ಪೊಲೀಸ್ ವಶದಲ್ಲಿದ್ದಾನೆಂಬ ಸುದ್ದಿ ತಿಳಿಯುತ್ತಿದ್ದಂತೆ ಲಕ್ಷ ಲಕ್ಷ ಹಣ ಕಳೆದುಕೊಂಡು ಜನರು ಠಾಣೆಗೆ ಆಗಮಿಸಿ ಎಟಿಎಂ ಮುಂದು ನೋಟಿಗಾಗಿ ಸಾಲು ನಿಂತಂತೆ ಠಾಣೆಯ ಮುಂದೆ ಹಣಕ್ಕಾಗಿ ಸಾಲು ನಿಂತು ತಮ್ಮ ಹಣದ ವಿಚಾರವನ್ನು ಹೇಳಿಕೊಳ್ಳಲಾರಂಭಿಸಿದರು. ಕೆಲವರಂತೂ ಆತನಲ್ಲೇ ಹೋಗಿ ನಮ್ಮ ಹಣ ಯಾರ ಕೈಗೆ ನೀಡಿದೆ, ನಿನ್ನ ಹಿಂದೆ ಪ್ರಭಾವಿಗಳಿದ್ದಾರಾ, ನಿನ್ನ ಹಣ ಅವರಲ್ಲಿದೆಯಾ, ನೀನು ಸತ್ಯ ಹೇಳಿದರೆ ನಾವು ನಿನಗೆ ಸಹಕರಿಸುತ್ತೇವೆ ಎಂದೆಲ್ಲಾ ಹೇಳಿಕೊಳ್ಳುತ್ತಿದ್ದರು.
ಲಕ್ಷಗಟ್ಟಲೆ ಹಣ ಬಂದು ಹೋಗುತ್ತಿದ್ದುದರಿಂದ ಮೂರು, ನಾಲ್ಕು ಕಾರುಗಳನ್ನಿಟ್ಟು ಈತ ತಿರುಗಾಡುತ್ತಿದ್ದ. ಕೆಲವೊಂದು ಹೋಟೇಲುಗಳಲ್ಲಿ ಪಾರ್ಟಿಗಳನ್ನು ಮಾಡಿಕೊಂಡು 25 ಸಾವಿರ ವರೆಗಿನ ಬಿಲ್ಲುಗಳನ್ನು ಒಬ್ಬರೇ ಪಾವತಿಸುತ್ತಿದ್ದ ಎಂದು ಸಾರ್ವಜನಿಕರು ದೂರಿದ್ದಾರೆ.