ಬಂಟ್ವಾಳ: ಒಬ್ಬನೇ ಪುತ್ರನಾಗಿ ತಂದೆ, ತಾಯಿಗೆ ಆಧಾರಸ್ತಂಭವಾಗಿದ್ದ ಪಾಣೆಮಂಗಳೂರು ಸಮೀಪ ಬೋಳಂಗಡಿ ನಿವಾಸಿ ಸುದರ್ಶನ ಶೆಣೈ ಅಪಘಾತಕ್ಕೆ ಬಲಿಯಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೆಲ್ಕಾರ್ ಸಮೀಪದ ಬೋಳಂಗಡಿ ನಿವಾಸಿ ದೇವದಾಸ್ ಶೆಣೈ ಅವರ ಪುತ್ರ ಸುದರ್ಶನ್ ಶೆಣೈ(28) ಪುತ್ತೂರಿನಿಂದ ಮಂಗಳೂರಿಗೆ ತನ್ನ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಟಿಪ್ಪರ್ ಢಿಕ್ಕಿ ಹೊಡೆದಿದ್ದು ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ.
ಮೂಲತ ಬೋಳಂಗಡಿ ನಿವಾಸಿಯಾಗಿರುವ ಮೃತ ಸುದರ್ಶನ್ ತಂದೆ ಹಾಗೂ ತಾಯಿ ಪುತ್ತೂರಿನಲ್ಲಿ ವಾಸ್ತವ್ಯವಿದ್ದಾರೆ. ಸುದರ್ಶನ್ ಮಂಗಳೂರಿನ ಸಿಟಿ ಸೆಂಟರ್‌ನಲ್ಲಿರುವ ಐಡಿಯಲ್ ಐಸ್‌ಕ್ರೀಂ ಪಾರ್ಲರ್‌ನಲ್ಲಿ ನೌಕರಿ ಹೊಂದಿದ್ದಾನೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಕೆಲಸಕ್ಕೆಂದು ಪುತ್ತೂರಿನಿಂದ ಮಂಗಳೂರಿಗೆ ತನ್ನ ಬೈಕ್‌ನಲ್ಲಿ ಹೊರಟಿದ್ದು ಕುದ್ರೆಬೆಟ್ಟು ತಲುಪಿದಾಗ ಈ ಅಪಘಾತ ಸಂಭವಿಸಿದೆ. ಘಟನೆಯ ಸುದ್ದಿ ತಿಳಿದ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಧಾವಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಮುಂದಿನ ಕ್ರಮ ಕೈಗೊಂಡರು.
ದೇವದಾಸ ಶೆಣೈ ಇಬ್ಬರು ಮಕ್ಕಳ ಪೈಕಿ ಸುದರ್ಶನ್ ಓರ್ವನೇ ಪುತ್ರನಾಗಿದ್ದು ತಂದೆ ತಾಯಿಗೆ ಆಧಾರ ಸ್ತಂಭನಾಗಿದ್ದ. ಇವರ ಸಹೋದರಿಯನ್ನು ಮೆಲ್ಕಾರಿನ ಸಾಮಾಜಿಕ ಕಾರ್ಯಕರ್ತ ರವಳನಾಥ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿದೆ.
ಸುದರ್ಶನ್ ಅವರ ಅಕಾಲಿಕ ಸಾವಿನಿಂದ ಮೆಲ್ಕಾರ್ ಪರಿಸರದಲ್ಲಿ ಸೂತಕದ ಛಾಯೆ ಆವರಿಸಿದೆ. ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಬಳಿಕೆ ಭಾವ ರವಳನಾಥ್ ಅವರ ನಿವಾಸಕ್ಕೆ ತರಲಾಯಿತು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪಾಡಿ ಗುತ್ತು, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಮೊದಲಾದವರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನವನ್ನು ಪಡೆದರು.
ಘಟನೆಯ ಬಗ್ಗೆ ಬಂಟ್ವಾಳ ಟ್ರಾಫಿಕ್ ಠಾಣೆಯ ಎಸ್ಸೈ ಚಂದ್ರಶೇಖರಯ್ಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.