ಬಂಟ್ವಾಳ: ನೂತನ ವೆಂಟೆಡ್ ಡ್ಯಾಂನಲ್ಲಿ ಸದ್ಯಕ್ಕೆ 5 ಮೀಟರ್‌ನಷ್ಟು ಎತ್ತರಕ್ಕೆ ನೀರು ಸಂಗ್ರಹಿಸಲು ನಿರ್ಧರಿಸಲಾಗಿದ್ದು ಇದರಿಂದ ಮುಳುಗಡೆಯಾಗಲಿರುವ ಜಮೀನನ್ನು ಸ್ವಾಧೀನಪಡಿಸುವ ನಿಟ್ಟಿನಲ್ಲಿ ಸರ್ವೇ ಕಾರ್ಯ ಪೂರ್ಣಗೊಂಡಿದೆ ಎಂದು ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್ ಹೇಳಿದ್ದಾರೆ.
ಮಂಗಳೂರು ಮಹಾ ನಗರ ಪಾಲಿಕೆಗೆ ಕುಡಿಯುವ ನೀರು ಪೂರೈಕೆಗಾಗಿ ತುಂಬೆಯಲ್ಲಿ ನೇತ್ರಾವತಿ ನದಿಗೆ ನಿರ್ಮಿಸಲಾದ ಹೊಸ ವೆಂಟೆಡ್ ಡ್ಯಾಂನಿಂದ ಮುಳುಗಡೆಯಾಗುವ ಜಮೀನು ಸಂತ್ರಸ್ತರ ಸಭೆ ಮಂಗಳೂರು ಸಹಾಯಕ ಕಮೀಷನರ್ ಅವರ ಬಂಟ್ವಾಳ ತಾಲೂಕು ಕಚೇರಿಯಲ್ಲಿರುವ ನ್ಯಾಯಾಲದ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಇದು ರಹಸ್ಯ ಸಭೆ ಎಂದು ಸಂತ್ರಸ್ತರ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಸಹಾಯಕ ಕಮೀಷನರ್ ರೇಣುಕಾ ಪ್ರಶಾದ್ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಈ ಸಭೆಯಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಗ್ರಾಮ ಕರಣಿಕರು ಹಾಗೂ ಕಳ್ಳಿಗೆ, ಸಜೀಪ ಮುನ್ನೂರು, ಪಾಣೆಮಂಗಳೂರು, ಬಿ.ಮೂಡ, ಶಂಭೂರು ಗ್ರಾಮಗಳ ಸಂತ್ರಸ್ತರನ್ನು ಕೂರಿಸಿ ಸಂಧಾನ ಸಭೆ ನಡೆಸಿದರು ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಈ ಸಭೆಯನ್ನು ಆಯೋಜಿಸಲಾಗಿತ್ತು.
ಮಾಹಿತಿ ತಿಳಿದ ಸಮಿತಿಯ ಪದಾಧಿಕಾರಿಗಳಾದ ಸುಬ್ರಹ್ಮಣ್ಯ ಭಟ್, ಸುದೇಶ್ ಮಯ್ಯ, ಶರತ್ ಕುಮಾರ್ ಮೊದಲಾದವರು ಸಭೆಗೆ ತೆರಳಿದ್ದರಾದರೂ ಅವರನ್ನು ಒಳ ಪ್ರವೇಶಕ್ಕೆ ನಿರಾಕರಿಸಲಾಯಿತು. ಈ ಸಂದರ್ಭ ತಾಲೂಕು ಕಚೇರಿಯಲ್ಲಿದ್ದ ಜಿಪಂ ಸದಸ್ಯ ತುಂಗಪ್ಪ ಬಂಗೇರ ಅವರು ಮಾಹಿತಿ ತಿಳಿದು ಸಂತ್ರಸ್ತರ ಸಭೆ ನಡೆಯುತ್ತಿದ್ದ ಸಭಾಂಗಣಕ್ಕೆ ತೆರಳಿ ಸಹಾಯಕ ಕಮೀಷನರ್ ಅವರನ್ನು ತರಾಟೆಗೆ ತೆಗೆದುಕೊಂಡರು.ತಕ್ಷಣ ಸಹಾಯಕ ಕಮೀಷನ್ ಅವರು ಪೊಲೀಸರನ್ನು ಕರೆಸಿ ಸಭಾಂಗಣದ ಸುತ್ತಾ ಬಂದೋ ಬಸ್ತ್ ಏರ್ಪಡಿಸಿದರು.
ಮುಳುಗಡೆಯಾಗುವ ಜಮೀನನ್ನು ಮಾರ್ಗ ಸೂಚಿ ದರದಲ್ಲಿ ಕ್ರಯಕ್ಕೆ ಪಡೆಯುವುದು, ಭೂಸ್ವಾಧೀನ ಪಡಿಸುವುದು ಹಾಗೆಯೇ ಲೀಸ್ ಮೂಲಕ ಪಡೆದುಕೊಳ್ಳುವುದು ಈ ಮೂರು ವಿಧದಲ್ಲಿ ಜಮೀನನ್ನು ವಶಪಡಿಸಿಕೊಳ್ಳಲು ಸರಕಾರ ಆಯ್ಕೆ ನೀಡಿದೆ ಎಂದು ಎಸಿ ತಿಳಿಸಿದರು. ಸಂತ್ರಸ್ತೆ ಬಿ.ಮೂಡದ ಶೋಭಾ ಶೆಟ್ಟಿ , ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ , ಶ್ರೀನಿವಾಸ್ ಪೈ ಅಭಿಪ್ರಾಯವ್ಯಕ್ತಪಡಿಸಿದರು. ಕೊನೆಗೆ ಮುಳುಗಡೆಯಾಗುವ ಜಮೀನಿಗೆ ರಾ.ಹೆ. ಭೂಸ್ವಾಧೀನ ಪಡಿಸಿದ ವೇಳೆ ನಿಗದಿಪಡಿಸಿದ ಪರಿಹಾರ ಧನದಂತೆ ಪರಿಹಾರ ನೀಡಿದಲ್ಲಿ ಜಮೀನು ಬಿಟ್ಟು ಕೊಡಲು ಸಭೆಯಲ್ಲಿ ಸಂತ್ರಸ್ತರು ಒಪ್ಪಿಗೆ ಸೂಚಿಸಿದರು.
ಸಂತ್ರಸ್ತ ರೈತರು ಯಾವುದೇ ಸಮಸ್ಯೆ ಇಲ್ಲವೇ ಮಾಹಿತಿ ಬೇಕಾದಲ್ಲಿ ಮಧ್ಯವರ್ತಿಗಳನ್ನು ಕರೆದುಕೊಂಡು ಬಾರದೆ ನೇರವಾಗಿ ತಹಶೀಲ್ದಾರರನ್ನು ಸಂಪರ್ಕಿಸುವಂತೆ ಸಹಾಯಕ ಕಮೀಷನರ್ ಅವರು ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಸಂತ್ರಸ್ತ ರೈತರಿಗೆ ಸೂಚಿಸಿದರು. ಮುಂದಿನ ಸಭೆ ಜಿಲ್ಲಾಧಿಕಾರಿಯವರ ಸಮಕ್ಷಮದಲ್ಲಿ ನಡೆಯಲಿದ್ದು ದೂರವಾಣಿ ಇಲ್ಲವೇ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಸಂತ್ರಸ್ತರಾದ ಪ್ರಕಾಶ್ ಆಚಾರ್ಯ, ಬೋಜಶೆಟ್ಟಿ ಕುಪ್ಪಿಲ, ರಾಮಚಂದ್ರ ಶೆಟ್ಟಿ, ಸಂಜೀವ ಮೂಲ್ಯ, ಮನೋಹರ್ ಮೂಲ್ಯ, ಕರುಣಾಕರ ಶೆಟ್ಟಿ, ಮೋಹನ್ ರೈ, ಸವಿತ, ನಾಗೇಶ್ ಗಟ್ಟಿ, ಸಂದೇಶ್, ರಾಮಚಂದ್ರ ಶೆಣೈ ಉಪಸ್ಥಿತರಿದ್ದರು.
ಹೋರಾಟ ಸಮಿತಿ ಖಂಡನೆ:
ಪೊಲೀಸ್ ಬಂದೋಬಸ್ತ್‌ನಲ್ಲಿ ಸಹಾಯಕ ಕಮಿಷನರ್ ರೇಣುಕಾ ಪ್ರಸಾದ್, ತಹಶೀಲ್ದಾರ್ ಪುರಂದರ ಹೆಗ್ಡೆ, ಬಂಟ್ವಾಳ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವರವರ ಉಪಸ್ಥಿತಿಯಲ್ಲಿ 5 ಗ್ರಾಮಗಳ ಬೆರಳೆಣಿಕೆಯ ಸಂತ್ರಸ್ತರ ಸಭೆಯನ್ನು ಗುಟ್ಟಾಗಿ ನಡೆಸಿರುವುದನ್ನು ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ಹೋರಾಟ ಸಮಿತಿ ಖಂಡಿಸಿದೆ.
ಸಂತ್ರಸ್ತರಲ್ಲದ ವ್ಯಕ್ತಿಗಳನ್ನು ಕುಳ್ಳಿರಿಸಿದರೂ ಸಂತ್ರಸ್ತರು ನಿಯೋಜಿತ ಗ್ರಾಮ ಪ್ರತಿನಿಧಿಗಳಾದ ಎಂ.ಸುಬ್ರಹ್ಮಣ್ಯ ಭಟ್,ಸುದೇಶ್ ಮಯ್ಯ ಸಭೆಯಿಂದ ಹೊರ ಹಾಕಿರುವುದು ತಾಲೂಕು ಆಡಳಿತದ ತುಘಲಕ್ ದರ್ಬಾರ್ ಆಗಿದೆ ಎಂದು ಆರೋಪಿಸಿದ ಸಮಿತಿಯ ಪದಾಧಿಕಾರಿಗಳು ಒಡೆದು ಆಳುವ ತಂತ್ರವನ್ನು ಅನುಸರಿಸಿ ರೈತರನ್ನು ವ್ಯವಸ್ಥಿತವಾಗಿ ವಂಚನೆ ಮಾಡುವ ಈ ಪ್ರವೃತ್ತಿಯನ್ನು ರೈತರು ಖಂಡಿಸಿದ್ದಾರೆ.