ಬಂಟ್ವಾಳ: 78 ವರ್ಷಗಳ ಇತಿಹಾಸ ಇರುವ ಕರ್ನಾಟಕದ ಏಕೈಕ ಸರ್ಕಸ್ ಕಂಪನಿ ಎಂಬ ಖ್ಯಾತಿಯ ಗ್ರೇಟ್ ಪ್ರಭಾತ್ ಸರ್ಕಸ್ ಬಿ.ಸಿ.ರೋಡಿನಲ್ಲಿ ಶುಕ್ರವಾರ ಪ್ರದರ್ಶನ ಆರಂಭಿಸಲಿದೆ.ಶುಕ್ರವಾರ ಪ್ರದರ್ಶನದ ಉದ್ಘಾಟನೆ ಸಂಜೆ 7 ಗಂಟೆಗೆ ನಡೆಯಲಿದ್ದು, ಸಚಿವ ಬಿ.ರಮಾನಾಥ ರೈ ಉದ್ಘಾಟಿಸುವರು.
ಅಧ್ಯಕ್ಷತೆಯನ್ನು ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ವಹಿಸುವರು. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ,ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಅತಿಥಿಗಳಾಗಿರುವರು ಎಂದು ಸುದ್ದಿಗೋಷ್ಠಿಯಲ್ಲಿ ಕಂಪನಿಯ ಮಾಲೀಕ ಸಾಯಿಬಾಬಾ ತಿಳಿಸಿದರು. ಒಟ್ಟು 40 ದಿನ ಪ್ರದರ್ಶನಗಳು ನಡೆಯಲಿವೆ ಎಂದು ಅವರು ಹೇಳಿದರು.
ಸರಕಾರದ ಯಾವುದೇ ಅನುದಾನ ಇಲ್ಲದೆ, ನೆರವೂ ಇಲ್ಲದೆ ಕಂಪನಿಯನ್ನು ನಡೆಸುತ್ತಿರುವುದು ಕೇವಲ ಕಲಾಪ್ರೀತಿಯಿಂದ. ಸರ್ಕಸ್ ಇದೀಗ ಅಳಿವಿನಂಚಿನಲ್ಲಿದ್ದು, ಜನರ ಪ್ರೋತ್ಸಾಹ ಅಗತ್ಯ ಎಂದು ಅವರು ಹೇಳಿದರು.
ಪ್ರತಿದಿನ 1, 4 ಮತ್ತು 7 ಗಂಟೆಗೆ ಪ್ರದರ್ಶನ ಇರಲಿದೆ. 150ಕ್ಕೂ ಅಧಿಕ ಕಲಾವಿದರು ಗ್ಲೋಬ್ ರೈಡಿಂಗ್, ಜಿಮ್ನಾಸ್ಟಿಕ್ಸ್, ಫ್ಲೈಯಿಂಗ್ ಟ್ರೋಪೀಸ್, ಮೋಟರ್ ಬೈಕ್ ಜಂಪಿಂಗ್, ಸ್ಕೈವಾಕ್, ಬೇಬಿ ರೋಪ್, ಸೈಕಲ್ ಬ್ಯಾಲನ್ಸ್, ಜೋಕರ್ಸ್ ಕಾಮಿಡಿ, ಪ್ರಾಣಿಗಳ ವಿವಿಧ ಕಸರತ್ತುಗಳು ಪ್ರದರ್ಶನಗೊಳ್ಳಲಿವೆ ಎಂದರು.
ವಾರದ ನಂತರ ಶಾಲಾ ಮಕ್ಕಳಿಗೆ ಪ್ರದರ್ಶನದಲ್ಲಿ ರಿಯಾಯತಿ ನೀಡಲಾಗುವುದು ಎಂದರು.ಮ್ಯಾನೇಜರ್ ದೇವರಾಜ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.