ಬಂಟ್ವಾಳ: ಬಂಟ್ವಾಳ ಪೇಟೆ ರಸ್ತೆಯಲ್ಲಿ ಸರಕಾರಿ ಜಾಗವನ್ನು ಒತ್ತುವರಿ ತೆರವುಗೊಳಿಸಲು ಹದಿನೈದು ದಿನಗಳ ಗಡುವನ್ನು ವಿಧಿಸಿ ಲೋಕೋಪಯೋಗಿ ಇಲಾಖೆಯ ಮಂಗಳೂರು ವಿಭಾಗ ಹಾಗೂ ಬಂಟ್ವಾಳ ಪುರಸಭೆ ಜಂಟಿ ಹೇಳಿಕೆ ಹೊರಬಿದ್ದಿದೆ.
ನ.7 ಮತ್ತು 25ರಂದು ದ.ಕ. ಜಿಲ್ಲಾಧಿಕಾರಿ ಡಾ.ಜಗದೀಶ್ ಅವರ ಅಧ್ಯಕ್ಷತೆಯಲ್ಲಿ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ಹಾಗೂ ಸದಸ್ಯರು ಮತ್ತು ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಈ ನಿರ್ಧಾರಕ್ಕೆ ಬರಲಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿರುವ ಲೋಕೋಪಯೋಗಿ ಜಿಲ್ಲಾ ಮುಖ್ಯ ರಸ್ತೆಯಾದ 3.8 ಕಿ.ಮೀ. ಉದ್ದದ ಬಂಟ್ವಾಳ ಪೇಟೆ ರಸ್ತೆಯಲ್ಲಿ ಅತಿಕ್ರಮಣ ಹಾಗೂ ಒತ್ತುವರಿಯನ್ನು ತೆರವುಗೊಳಿಸಲು ಹದಿನೈದು ದಿನಗಳ ಕಾಲಾವಕಾಶವನ್ನು ನೀಡಲಾಗಿದ್ದು, ಅಷ್ಟರೊಳಗೆ ರಸ್ತೆಯಲ್ಲಿನ ಎಲ್ಲ ಅತಿಕ್ರಮಣಗಳನ್ನು ತೆರವುಗೊಳಿಸದಿದ್ದರೆ, ಜಿಲ್ಲಾಡಳಿತ ಆದೇಶದಂತೆ ಪೂರ್ವಸೂಚನೆ ಇಲ್ಲದೆ ಲೋಕೋಪಯೋಗಿ ಇಲಾಖೆ, ಕಂದಾಯ ಹಾಗೂ ಪುರಸಭೆ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಿದೆ ಎಂದು ಮಂಗಳೂರು ವಿಭಾಗದ ಲೋಕೋಪಯೋಗಿ, ಬಂದರು, ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಗಣೇಶ್ ಅರಳೀಕಟ್ಟಿ ಮತ್ತು ಪುರಸಭೆ ಪ್ರೊಬೆಷನರಿ ಐಎಎಸ್ ಗಾರ್ಗಿ ಜೈನ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿ.ಸಿ.ರೋಡಿನ ಉದ್ಯಾನವನದಿಂದ ಆರಂಭಗೊಂಡು, ಬಂಟ್ವಾಳ ಪೇಟೆ ಮೂಲಕ ಹಾದು, ಜಕ್ರಿಬೆಟ್ಟುವಿನ ರಾಷ್ಟ್ರೀಯ ಹೆದ್ದಾರಿ 234 ಸಂಧಿಸುವವರೆಗೆ ಇರುವ ರಸ್ತೆಯ ಸರಕಾರಿ ಜಾಗದ ಒತ್ತುವರಿಯನ್ನು ಕಂದಾಯ ಇಲಾಖೆ ಅಳತೆ ಮಾಡಿ, ನಕ್ಷೆಯಲ್ಲಿ ಗುರುತು ಮಾಡಿ ಜಿಲ್ಲಾಧಿಕಾರಿ ಗಮನಕ್ಕೆ ಈಗಾಗಲೇ ತರಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದವರು, ಪುರಸಭೆ ಇಲ್ಲವೇ ಬಂಟ್ವಾಳ ಉಪವಿಭಾಗ ಲೋಕೋಪಯೋಗಿ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.