ಬಂಟ್ವಾಳ: ಮುಂಬರುವ ದಿನಗಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಸಾರ್ವಜನಿಕರು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಜೀಪನಡು ಗ್ರಾ.ಪಂ.ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸರ ವತಿಯಿಂದ ಸಜೀಪನಡು ಪಂಚಾಯಿತಿ ಕಚೇರಿಯಲ್ಲಿ ಶಾಂತಿ ಸಭೆಯನ್ನು ಮಂಗಳವಾರ ಬೆಳಿಗ್ಗೆ ನಡೆಸಲಾಯಿತು.
ಪಂಚಾಯಿತಿ ಅಧ್ಯಕ್ಷ ನಾಸೀರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮದ ಜನರು ಪರಸ್ಪರ, ಸಹಬಾಳ್ವೆ, ಸೌಹಾರ್ಧತೆ, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಶಾಂತಿ ಸಭೆಯನ್ನು ನಡೆಸಲಾಗುತ್ತಿದೆ ಎಂದರು. ಎಲ್ಲಾ ಧರ್ಮದ ಸಂದೇಶವೇ ಶಾಂತಿ. ಶಾಂತಿಯ ದ್ಯೋತಕವಾಗಿ ನಮ್ಮ ಗ್ರಾಮ ಗುರುತಿಸಿಕೊಳ್ಳಬೇಕು ಆ ನಿಟ್ಟಿನಲ್ಲಿ ಶಾಂತಿ ಕಾಪಾಡಲು ಗ್ರಾಮಸ್ಥರೆಲ್ಲರೂ ಸಹಕರಿಸಬೇಕು ಎಂದರು.
ಬಂಟ್ವಾಳ ಗ್ರಾಮಂತರ ಠಾಣೆಯ ಪ್ರೋಬೆಷನರಿ ಎಸೈ ವೀರಯ್ಯ ಡಿ.ಎಸ್. ಮಾತನಾಡಿ ಸಣ್ಣಪುಟ್ಟ ವಿಚಾರಗಳಿಗೆ ಗಲಾಟೆ ಮಾಡಿ ನಿಮ್ಮ ಬಾಂದವ್ಯಗಳನ್ನು ಹಾಳುಮಾಡಿಕೊಳ್ಳಬೇಡಿ. ಯಾವುದೇ ಅಪರಾದಗಳು ನಡೆಯುವ ಬಗ್ಗೆ ಸೂಚನೆ ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ ಎಂದರು. ಗಾಂಜಾ ಮಾರಾಟದ ಬಗ್ಗೆ, ಬ್ಯಾನರ್ ತೆರವಿನ ಬಗ್ಗೆ, ಕೋಳಿ ತ್ಯಾಜ್ಯ ರಸೆತ ಬದಿ ಎಸೆಯುವ ಬಗ್ಗೆ ಗ್ರಾಮಸ್ಥರು ಪೊಲೀಸರು ಹಾಗೂ ಪಂಚಾಯಿತಿ ಗಮನಕ್ಕೆ ತಂದರು. ಪಂಚಾಯಿತಿ ಉಪಾಧ್ಯಕ್ಷೆ ಸುನೀತಾ ಶಾಂತಿ ಮೋರಾಸ್, ತಾ.ಪಂ.ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಎಎಸೈ ಭಾಸ್ಕರ, ನಿವೃತ್ತ ಶಿಕ್ಷಕ ಆನಂದ ರೈ ವೇದಿಕೆಯಲ್ಲಿದ್ದರು.