ಬಂಟ್ವಾಳ: ವ್ಯಕ್ತಿತ್ವ ವಿಕಸನದ ಬುನಾದಿಯೇ ಲಲಿತ ಕಲೆ. ಯಾವುದೇ ಕಲೆಯನ್ನು ಮೈಗೂಡಿಸಿಕೊಂಡಲ್ಲಿ ನಮ್ಮ ಜೀವನದ ಸರ್ವತೋಮುಖ ಬೆಳವಣಿಗೆ ಸುಲಭ ಸಾಧ್ಯ. ಗಂಡುಮೆಟ್ಟಿದ ಕಲೆ ಎಂದು ಪ್ರಸಿದ್ದಿತ ಯಕ್ಷಗಾನ ಕಲೆ, ಇತ್ತೀಚಿನ ದಿನಗಳಲ್ಲಿ ಅತ್ಯಂತ ಪ್ರಸಿದ್ದಿಯನ್ನು ಗಳಿಸುತ್ತಿದೆ. ಕಲೆಯನ್ನು ಕರಗತಗೊಳಿಸಿ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ| ರಾಜಮಣಿ ರಾಮಕುಂಜ ಹೇಳಿದರು
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪ.ಪೂ. ಕಾಲೇಜಿನ ಲಲಿತಾ ಕಲಾ ಸಂಘದ ಆಶ್ರಯದಲ್ಲಿ ವಿಶೇಷ ಉಪನ್ಯಾಸ ನೀಡಿದರು,
ಕಲೆ ಮತ್ತು ಸಂಸ್ಕೃತಿ ಬದುಕಿನ ಅವಿಭಾಜ್ಯ ಅಂಗ. ಕಲೆ ಸಮಾಜದ ಪರಿವರ್ತನೆಗಾಗಿ ಹುಟ್ಟಿಕೊಂಡು ಮನೋರಂಜನೆಂದ ಕೂಡಿದ ಮೌಲ್ಯಯುತ ಭಾವನೆಯನ್ನು ಉಳಿಸಿ ಬೆಳೆಸಲು ಪ್ರೇರಣೆ ನೀಡುತ್ತದೆ. ಸಮಾಜದ ಸ್ತರಗಳಾದ- ಜಾತಿ, ಮತ, ಧರ್ಮ, ಪಂಥಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಕಲೆಗಿದೆ. ಯುವಪೀಳಿಗೆ ಮನರಂಜನೆ ನೆಪದಲ್ಲಿ ಮೂಲ ಸಂಸ್ಕೃತಿಯನ್ನು ಮರೆತು ಮಾರಾಟದ ವಸ್ತುವಾಗಿ ಬದುಕನ್ನು ರೂಪಿಸುವ ವೃತ್ತಿಯಾಗಿರದೆ ಮೌಲ್ಯಯುತ ಅಂಶಗಳನ್ನು ಸಮಾಜದಲ್ಲಿ ಪಸರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿದ್ದರು. ಲಲಿತಾ ಕಲಾ ಸಂಘದ ಅಧ್ಯಕ್ಷೆ ಅರ್ಥಶಾಸ್ತ್ರ ಉಪನ್ಯಾಸಕಿ ಶಾಲಿನಿ ಬಿ. ಪ್ರಸ್ತಾವನೆ ನೀಡಿದರು. ವಿದ್ಯಾರ್ಥಿನಿ ಅಶ್ವಿನಿ ಮತ್ತು ಸುರಕ್ಷಾ ಪ್ರಾರ್ಥಿಸಿದರು. ಸಂಘದ ಕಾರ್‍ಯದರ್ಶಿ ಪ್ರೀತಿಕಾ ಸಿ. ಪೂಜಾರಿ ಸ್ವಾಗತಿಸಿದರು. ಸಂಘದ ಉಪಕಾರ್‍ಯದರ್ಶಿ ಕಾರ್ತಿಕ ವಂದಿಸಿದರು., ಸುಪ್ರಿಯ ನಿರೂಪಿಸಿದರು.