ಬಂಟ್ವಾಳ: ಬಹುವಿವಾದಿತ ಜೋಡುಮಾರ್ಗ ಉದ್ಯಾನವನಕ್ಕೆ ಕೋಟಿ ರೂಪಾಯಿಗೂ ಅಧಿಕ ವೆಚ್ಚ ತಗುಲಿದ್ದೇ ಇನ್ನೂ ಚರ್ಚಾಸ್ಪದ ಸಂಗತಿ. ಹೀಗಿರುವಾದ ಅದರ ನಿರ್ವಹಣೆಯನ್ನೂ ಪುರಸಭೆ ಭರಿಸಬೇಕೇ?
ಹೀಗೊಂದು ಚರ್ಚೆ ಬುಧವಾರ ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ನಡೆಯಿತು.
ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ದೇವದಾಸ ಶೆಟ್ಟಿ, ಟ್ರೀ ಪಾರ್ಕ್ ಕಳೆದ ತಿಂಗಳೇ ಬಾಗಿಲು ಹಾಕಿದೆ. 15 ದಿನಗಳಲ್ಲಿ ಕೆಲಸ ಮುಗಿಯುತ್ತದೆ ಎಂದು ನಂಬಿದರೆ, ತಿಂಗಳಾದರೂ ತೆರೆಯಲಿಲ್ಲ ಎಂದರು. ರಾಷ್ಟ್ರೀಯ ಹೆದ್ದಾರಿ ಅಗಲಗೊಳಿಸುವ ಸಂದರ್ಭ ಇದೇ ಉದ್ಯಾನವನದ ಸ್ವರೂಪ ಬದಲಾಗಬಹುದು ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಕೆ.ಸುಧಾಕರ್, ಟ್ರೀ ಪಾರ್ಕ್ ನಿರ್ವಹಣಾ ವೆಚ್ಚಕ್ಕೆ ಪುರಸಭೆ ತಿಂಗಳಿಗೆ 65 ಸಾವಿರ ರೂ ಭರಿಸುವ ಬಗ್ಗೆ ಸಭೆಯಲ್ಲಿ ವಿಷಯ ಮಂಡಿಸಿದರು. ಈ ಪ್ರಸ್ತಾಪಕ್ಕೆ ಆಡಳಿತ ಪಕ್ಷದ ಸದಸ್ಯರೂ ಸೇರಿದಂತೆ ಹಲವು ಸದಸ್ಯರು ಆಕ್ಷೇಪ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಬಿಜೆಪಿ ಸದಸ್ಯ ಎ.ಗೋವಿಂದ ಪ್ರಭು, ಟ್ರೀ ಪಾರ್ಕ್ ಎಂಬುದು ಬಿಳಿಯಾನೆಯಂತೆ. 1.40 ಕೋಟಿ ರೂಪಾಯಿಯ ಅನಾಥ ಶಿಶು. ಅಪ್ಪ, ಅಮ್ಮ ಯಾರೆಂದು ಗೊತ್ತಿಲ್ಲದ ಟ್ರೀ ಪಾರ್ಕ್ ನಿರ್ವಹಣೆಯನ್ನು ಪುರಸಭೆ ತಲೆಗೆ ಕಟ್ಟುವುದೇಕೆ, ನಿರ್ವಹಣೆಗೆ ತಿಂಗಳಿಗೆ 65 ಸಾವಿರ ರೂಪಾಯಿ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.
ಈ ಸಂದರ್ಭ ಏರಿದ ಧ್ವನಿಯಲ್ಲಿ ಚರ್ಚೆ ನಡೆಯಿತು. ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಮಹಮ್ಮದ್ ಶರೀಫ್, ಒತ್ತುವರಿ ವಿಷಯಕ್ಕೆ ಸಂಬಂಧಿಸಿ ಸದಸ್ಯ ದೇವದಾಸ ಶೆಟ್ಟಿ ಪ್ರಸ್ತಾಪಿಸಿರುವುದನ್ನು ಆಕ್ಷೇಪಿಸಿದರು. ಈ ಸಂದರ್ಭ ದೇವದಾಸ ಶೆಟ್ಟಿ, ಮಹಮ್ಮದ್ ಶರೀಫ್ ನಡುವೆ ಬಿರುಸಿನ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷ ರಾಮಕೃಷ್ಣ ಆಳ್ವ ಮಧ್ಯಪ್ರವೇಶಿಸಿ, ಚರ್ಚೆಯನ್ನು ತಣ್ಣಗಾಗಿಸಿದರು.
ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ಇಕ್ಬಾಲ್ ಗೂಡಿನಬಳಿ, ಪ್ರವೀಣ್ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು.
ಅಂತಿಮವಾಗಿ ಟ್ರೀ ಪಾರ್ಕ್ ನಿರ್ವಹಣೆಗೆ ಟೆಂಡರ್ ಕರೆಯುವುದು ಎಂದು ತೀರ್ಮಾನಿಸಲಾಯಿತು. ಪ್ರೊಬೆಷನರಿ ಐಎಎಸ್ ಗಾರ್ಗಿ ಜೈನ್ ಮೌನವಾಗಿ ಚರ್ಚೆಯನ್ನು ಆಲಿಸಿದರಷ್ಟೇ ಹೊರತು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.