ಬಂಟ್ವಾಳ: ಪುರಸಭೆ ಎನ್ ಒಸಿ ಪಡೆಯದೆ ಸರಕಾರಿ ಜಾಗ ಮಂಜೂರುಗೊಳ್ಳುವುದು, ಅಲ್ಲಿ ಕಟ್ಟಡ ನಿರ್ಮಾಣ ಪ್ರಕ್ರಿಯೆಗಳು ನಡೆಯುತ್ತಿವೆ. ಇಂಥದ್ದು ಸರಿಯಾ, ಸರಕಾರಿ ಕಚೇರಿ ಕಟ್ಟುವಾಗ ಪುರಸಭೆ ಅನುಮತಿ ಪಡೆದದ್ದು ಉಂಟಾ ಎಂಬ ವಿಷಯ ಬುಧವಾರ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಕಾವೇರಿದ ಚರ್ಚೆಗೆ ಕಾರಣವಾಯಿತು.
ವಿಷಯ ಪ್ರಸ್ತಾಪಿಸಿದ ಸದಸ್ಯ ಗೋವಿಂದ ಪ್ರಭು, ನಮ್ಮ ಗಮನಕ್ಕೆ ಬಾರದೆ ಕೆಲ ಸರಕಾರಿ ಕಟ್ಟಡಗಳು ತಲೆಎತ್ತಿವೆ. ಎಂದರು. ಈ ಸಂದರ್ಭ ಕೈಕುಂಜದಲ್ಲಿ ಕಟ್ಟಲಾಗುತ್ತಿರುವ ಕನ್ನಡ ಭವನದ ಪ್ರಸ್ತಾಪವೂ ಆಯಿತು. ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು , ಸದಸ್ಯರಾದ ಮಹಮ್ಮದ್ ಇಕ್ಬಾಲ್, ಪ್ರವೀಣ್ ಈ ಕುರಿತು ಮಾತನಾಡಿದರು. ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಸುಧಾಕರ್ ಮತ್ತು ಅಧ್ಯಕ್ಷ ರಾಮಕೃಷ್ಣ ಆಳ್ವ ಮಧ್ಯಪ್ರವೇಶಿಸಿ, ಈ ಕುರಿತು ಪರಿಶೀಲಿಸುವುದಾಗಿ ಭರವಸೆ ನೀಡಿದರು.
2 ವರ್ಷ 16 ದಿನಗಳ ಹಿಂದೆ ಯೋಜನಾ ನಿರ್ದೇಶಕರಿಗೆ ಲಿಖಿತ ಮನವಿಯನ್ನು ನಾವು ನೀಡಿದ್ದೆವು. ಹಣ ಅಪವ್ಯಯದ ಕುರಿತ ಈ ಮನವಿಗೆ ಇನ್ನೂ ಉತ್ತರ ದೊರಕಿಲ್ಲ ಎಂದು ಸದಸ್ಯ ದೇವದಾಸ ಶೆಟ್ಟಿ ದೂರಿದರು.
ಈ ಸಂದರ್ಭ ಜಿಲ್ಲಾಧಿಕಾರಿಯಿಂದ ತತಕ್ಷಣ ಉತ್ತರ ಬಯಸಿದ ಸದಸ್ಯ ಗೋವಿಂದ ಪ್ರಭು, ಮುಖ್ಯಾಧಿಕಾರಿ ಬಳಿ ಕೂಡಲೇ ದೂರವಾಣಿ ಕರೆ ಮಾಡುವಂತೆ ಸೂಚಿಸಿದರು. ಆಗ ಸದಸ್ಯ ಮಹಮ್ಮದ್ ಶರೀಫ್ ಮತ್ತು ಗೋವಿಂದ ಪ್ರಭು ಮಧ್ಯೆ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ಗರಂ ಆದ ಗೋವಿಂದ ಪ್ರಭು, ಇದು ಸದಸ್ಯರ ಗೌರವದ ಪ್ರಶ್ನೆ, ಕಳೆದ ಬಾರಿ ಮೀಟಿಂಗ್ ಗೆ ಬಂದಾಗ ಜಿಲ್ಲಾಧಿಕಾರಿ ಸದಸ್ಯರು ಲಿಖಿತ ರೂಪದಲ್ಲಿ ಮನವಿ ನೀಡಬೇಕು ಎಂದಿದ್ದರು. ಆದರೆ ವರ್ಷ ಕಳೆದರೂ ಅವರ ಕಚೇರಿಯಿಂದಲೇ ಉತ್ತರ ಸಿಗದಿದ್ದರೆ ಏನು ಮಾಡೋಣ ಎಂದರು. ಇದರ ಇತ್ಯರ್ಥವಾಗದಿದ್ದರೆ ಮೀಟಿಂಗ್ ಮುಂದುವರಿಸುವುದು ಬೇಡ ಎಂದು ಖಡಕ್ ಆಗಿ ಪ್ರಭು ಹೇಳಿದಾಗ, ನೀವು ಮೀಟಿಂಗ್ ಮುಂದುವರಿಸಿ ಎಂದು ಶರೀಫ್ ಅಧ್ಯಕ್ಷ ರಾಮಕೃಷ್ಣ ಆಳ್ವ ಅವರಲ್ಲಿ ತಿಳಿಸಿದರು. ಇದು ಮಾತಿನ ಚಕಮಕಿಗೆ ಕಾರಣವಾಯಿತು. ಒಂದು ಹಂತದಲ್ಲಿ ಗೋವಿಂದ ಪ್ರಭು ಸಭೆಯಲ್ಲಿ ಧರಣಿ ಕುಳಿತುಕೊಳ್ಳುವವರೆಗೆ ತಲುಪಿದ್ದರು. ಕೊನೆಗೆ ಮುಖ್ಯಾಧಿಕಾರಿ ಕೆ.ಸುಧಾಕರ್, ಈ ಕುರಿತು ವಾರದೊಳಗೆ ಜಿಲ್ಲಾಧಿಕಾರಿಯಿಂದ ಉತ್ತರ ಪಡೆಯುತ್ತೇನೆ ಎಂಬಲ್ಲಿಗೆ ಚರ್ಚೆ ಅಂತ್ಯ ಕಂಡಿತು.