ಬಂಟ್ವಾಳ

ನೀರಿನ ಕನೆಕ್ಷನ್ ಅಕ್ರಮ ಸಕ್ರಮ

 ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ಅಕ್ರಮ ನಲ್ಲಿ ಸಂಪರ್ಕ ಹೊಂದಿದ್ದರೆ ಸಕ್ರಮಗೊಳಿಸಲು ಇದು ಸಕಾಲ.

ಡಿಸೆಂಬರ್ ಅಂತ್ಯದೊಳಗೆ ಸಕ್ರಮಗೊಳಿಸದೇ ಇದ್ದರೆ ಜನವರಿಯಿಂದ ಕಾದಿದೆ ದಂಡ. ಅದೂ ಕನೆಕ್ಷನ್ ಒಂದಕ್ಕೆ 10 ಸಾವಿರ ರೂಪಾಯಿ.

ಬುಧವಾರ ನಡೆದ ಬಂಟ್ವಾಳ ಪುರಸಭಾ ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರ ಅನುಮೋದನೆಯೊಂದಿಗೆ ಈ ಮಹತ್ವದ ನಿರ್ಣಯಕ್ಕೆ ಬರಲಾಗಿದೆ.

ಈ ಕುರಿತು ಪುರಸಭೆ ಕೈಗೊಂಡ ನಿರ್ಣಯ ಹೀಗಿದೆ.

ಅಕ್ರಮ ನೀರು ಸಂಪರ್ಕ ಸಕ್ರಮಗೊಳಿಸುವ ಸಂದರ್ಭ 1 ಸಾವಿರ ರೂಪಾಯಿ ದಂಡ, 1 ಸಾವಿರ ರೂಪಾಯಿ ಸಂಪರ್ಕ ಶುಲ್ಕ ಪಾವತಿಸಬೇಕು.

ಈ ಪ್ರಕ್ರಿಯೆಯನ್ನು ಪುರಸಭೆಯ ಅಧಿಕೃತ ಪ್ಲಂಬರ್‌ಗಳ ಮೂಲಕವೇ ನೀರಿನ ಸಂಪರ್ಕ ಅಧಿಕೃತಗೊಳಿಸಬೇಕು.

ಜನವರಿ 1ರಿಂದ ಯಾವುದೇ ಅನಧಿಕೃತ ನೀರಿನ ಸಂಪರ್ಕಕ್ಕೆ ಅವಕಾಶವಿಲ್ಲ. ಇಂಥ ಪ್ರಕರಣಗಳು ಕಂಡು ಬಂದರೆ ಅವರ ವಿರುದ್ಧ 10 ಸಾವಿರ ರೂಪಾಯಿ ದಂಡ ವಿಧಿಸಿ ಕ್ರಮ ಕೈಗೊಳ್ಳಲು ಸಭೆ ತೀರ್ಮಾನಿಸಿತು. ವಸತಿ ಸಮುಚ್ಚಯಕ್ಕೆ ಅಧಿಕೃತವಾಗಿ ಒಂದೇ ಸಂಪರ್ಕ ನೀಡಲು ನಿರ್ಧರಿಸಲಾಯಿತು.

ಮೂರು ವರ್ಷಗಳ ಹಿಂದೆ ಪುರಸಭೆ ವ್ಯಾಪ್ತಿಯಲ್ಲಿ ನಡೆಸಲಾದ ಸರ್ವೇಯಂತೆ ಸುಮಾರು 250 ಅನಧಿಕೃತ ನಲ್ಲಿ ನೀರಿನ ಸಂಪರ್ಕವಿತ್ತೆಂದು ಸದಸ್ಯ ಪ್ರವೀಣ್ ಬಿ. ಪ್ರಶ್ನೆಗೆ  ಮುಖ್ಯಾಧಿಕಾರಿ ಸುಧಾಕರ್ ಉತ್ತರಿಸಿದರು. ಪ್ರಸ್ತುತ 3000 ದಷ್ಟು ಅಕ್ರಮ ನಲ್ಲಿ ನೀರಿನ ಸಂಪರ್ಕವಿದೆ ಎಂದು ಸದಸ್ಯ ಗೋವಿಂದ ಪ್ರಭು ಗಮನ ಸೆಳೆದರು. ಈ ವಿಚಾರದಲ್ಲಿ ಪುರಸಭೆ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೂ ತಮ್ಮ ಪೂರ್ತಿ ಸಹಮತ ಇದೆ ಎಂದು ಸದಸ್ಯ ದೇವದಾಸ ಶೆಟ್ಟಿ ತಿಳಿಸಿದರು.

ಅಕ್ರಮ ಕಾಮಗಾರಿ

ಪುರಸಭೆ ವ್ಯಾಪ್ತಿಯ ಜಕ್ರಿಬೆಟ್ಟುವಿನ ಅಗ್ರಾರ್‌ವರೆಗೆ ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆ ರಸ್ತೆ ಕಾಮಗಾರಿಯನ್ನು ಅಕ್ರಮವಾಗಿ ನಡೆಸಲಾಗುತ್ತಿದೆ ಎಂದು ಸದಸ್ಯ ಗೋವಿಂದ ಪ್ರಭು ಸಭೆಯ ಗಮನ ಸೆಳೆದು ಈ ಬಗ್ಗೆ ವಿವರಣೆ ಬಯಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಅವರು ಆಂಗ್ಲ ಪತ್ರಿಕೆಯೊಂದರಲ್ಲಿ ಟೆಂಡರ್ ಪ್ರಕಟನೆ ನೀಡಲಾಗಿದೆ ಎಂದು ಸಮಾಜಾಯಿಸಿಕೆ ನೀಡಲು ಯತ್ನಿಸಿದಾಗ ಇದಕ್ಕೆ ಒಪ್ಪದ ಪ್ರಭು ಅವರು ಈ ಸಂಬಂಧ ಎಲ್ಲ ದಾಖಲಾತಿಯನ್ನು ಸಭೆಯ ಮುಂದಿಡುವಂತೆ ಪಟ್ಟು ಹಿಡಿದರು. ಆದರೆ ಈ ಕುರಿತು  ಅಧ್ಯಕ್ಷ ರಾಮಕೃಷ್ಣ ಆಳ್ವ ಅವರು ಈ ಕಾಮಗಾರಿ ಕೊನೆ ಹಂತ ತಲುಪಿದೆ ಎಂದು ಹೇಳಿದರು. ಬಳಿಕ ಈ ಬಗ್ಗೆ ಲಿಖಿತ ದೂರು ನೀಡುವುದಾಗಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಗಾರ್ಗಿ ಜೈನ್ ಅವರಲ್ಲಿ ಗೋವಿಂದ ಪ್ರಭು ತಿಳಿಸಿದರು.

ಬಿ.ಸಿ.ರೋಡಿನ ಕೈಕುಂಜೆ ರಸ್ತೆಯ ಪ್ರಸ್ತಾವಿತ ಅಭಿವೃದ್ಧಿ ಸಂದರ್ಭ ಅಂಗನವಾಡಿ ಕಟ್ಟಡಕ್ಕೆ ಕುತ್ತು ಬರಲಿದೆಯೇ ಎಂದು ಸದಸ್ಯೆ ಸುಗುಣಾ ಕಿಣಿ ಪ್ರಶ್ನಿಸಿದರು. ಈ ಸಂದರ್ಭ ಮಾತನಾಡಿದ ಗೋವಿಂದ ಪ್ರಭು, ಬಂಟ್ವಾಳ ತಹಶೀಲ್ದಾರರು ಏಕಪಕ್ಷೀಯವಾಗಿ ಮನಬಂದಂತೆ ಸರ್ವೇ ಕಾರ್ಯ ನಡೆಸುತ್ತಿದಾರೆ. ಬಂಟ್ವಾಳ ಪೇಟೆ ಅಗಲೀಕರಣಗೊಳಿಸುವ ನಿಟ್ಟಿನಲ್ಲೂ ಸರ್ವೇ ಇಲಾಖೆ ಮನಬಂದಂತೆ ಗುರುತು ಹಾಕಿದೆ ಎಂದು ಆರೋಪಿಸಿದರು. ಇದಕ್ಕೆ ದೇವದಾಸ ಶೆಟ್ಟಿ, ಪ್ರವೀಣ್ ದ್ವನಿಗೂಡಿಸಿದರು.

ತೆರಿಗೆ ಪರಿಷ್ಕರಣೆ:

2017-18ನೇ ಸಾಲಿಗೆ ತೆರಿಗೆ ಪರಿಷ್ಕರಿಸಿ ಸಭೆ ನಿರ್ಣಯ ಕೈಗೊಂಡಿದ್ದು ಪೌರಾಡಳಿತ ನಿರ್ದೇಶನಾಲಯದ ಸುತ್ತೋಲೆಯಂತೆ ಶೇಕಡಾ 16ರಷ್ಟು ಆಸ್ತಿ ತೆರಿಗೆಯನ್ನು ಹೆಚ್ಚಿಸಲು ಸಭೆ ನಿರ್ಧರಿಸಿತು. ಇದಕ್ಕೆ ಇಕ್ಬಾಲ್ ಗೂಡಿನಬಳಿ ಆಕ್ಷೇಪಿಸಿ ಇಲ್ಲಿ ಕೂಲಿ ಕಾರ್ಮಿಕರು ಮತ್ತು ಬೀಡಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಶೇಕಡಾ 5ರಷ್ಟು ಮಾತ್ರ ತೆರಿಗೆಯನ್ನು ಪರಿಷ್ಕರಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸುಧಾಕರ್ ಪುರಸಭೆಯ ಅಭಿವೃದ್ಧಿಯ ದೃಷ್ಟಿಯಿಂದ ಇದು ಅನಿವಾರ್ಯ ಎಂದು ಸಮಜಾಯಿಷಿ ನೀಡಿದರು.

ಬಿಲ್ಲು ಪಾವತಿಗೆ ಆಕ್ಷೇಪ:

ವಾರ್ಡ್ ಸದಸ್ಯರ ಸಹಿ ಇಲ್ಲದೆ ಯಾರ್‍ಯಾದೋ ಹೆಸರಿನಲ್ಲಿ ಪೈಪ್ ದುರಸ್ತಿಗೆ 3 ಸಾವಿರ ಬಿಲ್ ಪಡೆಯಲು ಮುಂದಾಗಿರುವುದನ್ನು ಆಕ್ಷೇಪಿಸಿದ ಸದಸ್ಯ ವಾಸು ಪೂಜಾರಿ, ಬಜೆಟ್ ಪೂರ್ವ ಸಭೆಯಲ್ಲೂ ವಾರ್ಡ್ 1ರಲ್ಲಿ 35 ವರ್ಷಗಳಿಂದ ಕಸದ ವಿಲೇವಾರಿ ಮಾಡದೆ ರಾಶಿ ಬಿದ್ದಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಆದರೆ ತನ್ನ ವಾರ್ಡ್‌ನಲ್ಲಿ ಕಸದ ಸಮಸ್ಯೆ ಇಲ್ಲ. ಅದು ಅಧಿಕಾರಿಗಳಿಗೂ ಗೊತ್ತಿದೆ. ಅವರ ಬಿಲ್ಲು ಪಡೆಯುವುದಕ್ಕಾಗಿ ಈ ರೀತಿ ತಪ್ಪು ಮಾಹಿತಿ ನೀಡುವುದು ಸರಿಯಲ್ಲ. ಅವರ ಬಿಲ್ಲನ್ನು ತಡೆಯಿಡಿಯಬೇಕೆಂದು ಒತ್ತಾಯಿಸಿದರು. ಅವರಿಗೆ ಈವರೆಗೆ ಯಾವುದೇ ಬಿಲ್ಲು ಪಾವತಿಸಿಲ್ಲ ಎಂದು ಮುಖ್ಯಾಧಿಕಾರಿ ಸುಧಾಕರ್ ಹೇಳಿದರು.

ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಪ್ರೊಬೆಷನರಿ ಐಎಎಸ್ ಅಧಿಕಾರಿ ಗಾರ್ಗಿ ಜೈನ್ ವೇದಿಕೆಯಲ್ಲಿದ್ದರು. ಸದಸ್ಯರಾದ ಬಿ.ಮೋಹನ್, ಗಂಗಾಧರ್, ವಸಂತಿ ಚಂದಪ್ಪ, ಜಗದೀಶ್ ಕುಂದರ್, ಶರೀಫ್, ಭಾಸ್ಕರ್ ಟೈಲರ್, ಮುನೀಶ್ ಅಲಿ, ಸುಗುಣಾ ಕಿಣಿ, ಚಂಚಲಾಕ್ಷಿ ಚರ್ಚೆಯಲ್ಲಿ ಪಾಲ್ಗೊಂಡರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts