ಬಂಟ್ವಾಳ

ಗ್ರಾಮಸಭೆಯಲ್ಲಿ ವಿದ್ಯಾರ್ಥಿನಿ ವಿಷಯ ಪ್ರಸ್ತಾಪಿಸಿದ್ದೇ ತಪ್ಪಾಯ್ತು

ಹೆಡ್ಮಿಸ್ಟ್ರೆಸ್ ಬೈದದ್ದಕ್ಕೆ ಕುಸಿದು ಬಿದ್ದ ವಿದ್ಯಾರ್ಥಿನಿ

ಬಂಟ್ವಾಳ: ಮಧ್ಯಾಹ್ನದ ಬಿಸಿಯೂಟದೊಂದಿಗೆ ಮೊಸರು, ಚಿತ್ರನ್ನ, ತರಕಾರಿ ಸಾಂಬಾರ್ ನೀಡುತ್ತಿಲ್ಲ ಎಂದು ಮಕ್ಕಳ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿದ್ಯಾರ್ಥಿನಿಯೋರ್ವಳಿಗೆ ಶಾಲಾ ಮುಖ್ಯ ಶಿಕ್ಷಕಿ ಬೈದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.

Pic: Kishore peraje, Namma studio, b.c.road.

ಬಂಟ್ವಾಳ ತಾಲೂಕಿನ ಬಾಳ್ತಿಳ ಗ್ರಾಮದ ನೀರಪಾದೆ ದ.ಕ.ಜಿ.ಹಿ.ಪ್ರಾ.ಶಾಲೆಯಲ್ಲಿ ಘಟನೆ ನಡೆದಿದೆ.

ಬಾಳ್ತಿಲ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸೋಮವಾರ ಬೆಳಗ್ಗೆ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಭಾಗವಹಿಸಿದ ನೀರಪಾದೆ ದ.ಕ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳ ಪೈಕಿ 8 ನೆ ತರಗತಿಯ ವಿದ್ಯಾರ್ಥಿನಿಯೋರ್ವಳು, ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಸರು, ವಾರಕ್ಕೊಂದು ದಿನ ಚಿತ್ರಾನ್ನ ಹಾಗೂ ವಾರದಲ್ಲಿ ವಿವಿಧ ಪದಾರ್ಥಗಳನ್ನು ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಮೊಸರು, ಚಿತ್ರನ್ನಗಳನ್ನು ನೀಡಲಾಗುತ್ತಿಲ್ಲ. ವಾರದ ಎಲ್ಲ ದಿವಸವೂ ಬರೀ ಬೇಳೆ ಸಾಂಬರ್ ನೀಡಲಾಗುತ್ತಿದೆ. ಸಾಂಬರ್‌ಗೆ ತರಕಾರಿ ಹಾಕುತ್ತಿಲ್ಲ. ಇದರಿಂದ ಬಿಸಿಯೂಟ ರುಚಿ ಇಲ್ಲದಿರುವುದರಿಂದ ಯಾವುದೇ ವಿದ್ಯಾರ್ಥಿಗಳು ಊಟ ಸೇವಿಸುತ್ತಿಲ್ಲ ಎಂದು ದೂರಿದ್ದಳು.  ಶಾಲೆಯ ಕಳಪೆ ಬಿಸಿಯೂಟದ ಬಗ್ಗೆ ಗ್ರಾಮ ಸಭೆಯಲ್ಲಿ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಗಮನ ಸೆಳೆದು ಕುಳಿತ ಆ ವಿದ್ಯಾರ್ಥಿನಿಯನ್ನು ಮುಖ್ಯ ಶಿಕ್ಷಕಿ ತೀವ್ರ ತರಾಟೆಗೆ ತೆಗೆದುಕೊಂಡ ಕಾರಣ, ಮಾನಸಿಕವಾಗಿ ನೊಂದ ವಿದ್ಯಾರ್ಥಿನಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.

ವಿದ್ಯಾರ್ಥಿನಿ ಅಸ್ವಸ್ಥಗೊಂಡ ಮಾಹಿತಿ ಲಭಿಸಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಕಾಂದಿಲ, ಗ್ರಾಮ ಪಂಚಾಯತ್ ಅಧ್ಯಕ್ಷ ವಿಠಲ್, ಉಪಾಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಸುಂದರ್ ಸಾಲ್ಯಾನ್, ವಸಂತ್ ಸಾಲ್ಯಾನ್, ಮೋಹನ್ ಪಿ.ಎಸ್., ರಜನಿ, ಎಸ್‌ಡಿಎಂಸಿ ಸದಸ್ಯರಾದ ಶ್ರೀನಿವಾಸ್ ಪೂಜಾರಿ, ಚೆನ್ನಪ್ಪ ಕೋಟ್ಯಾನ್, ಯುವಕ ಮಂಡಳ ಕಾರ್ಯದರ್ಶಿ ರಶೀದ್ ಕೋರ್ಯ, ಹಳೆ ವಿದ್ಯಾರ್ಥಿ ಉಮರ್ ಫಾರೂಕ್ ಶಾಲೆಗೆ ಆಗಮಿಸಿ ಮುಖ್ಯ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಅವರು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರನ್ನು ಫೋನ್ ಕರೆ ಮೂಲಕ ಸಂಪರ್ಕಿಸಿ ವಿವರ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳೂರಿನಲ್ಲಿ ಸಭೆಯೊಂದರಲ್ಲಿದ್ದರಿಂದ ಅವರ ಸೂಚನೆಯ ಮೇರೆಗೆ ಶಾಲೆಗೆ ಭೇಟಿ ನೀಡಿದ ಬಿಆರ್‌ಪಿ ಕೆಂಪಣ್ಣ ಕುಮಾರ್, ಬಾಳ್ತಿಲ ಸಿಆರ್‌ಪಿ ಆರತಿ ಅಮೀನ್, ತುಂಬೆ ಸಿಆರ್‌ಪಿ ನಂದಾ, ಮುಡಿಪು ಸಿಆರ್‌ಪಿ ರವಿ ವಿದ್ಯಾರ್ಥಿನಿಯ ಯೋಗಕ್ಷೇಮ ವಿಚಾರಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಮಾತಿಗಿಳಿದ ಪೋಷಕರು ಅಕ್ಷರ ದಾಸೋಹ ಯೋಜನೆಯಡಿ ಶಾಲೆಗೆ ಲಕ್ಷಾಂತರ ರೂ. ಅನುದಾನ ಬರುತ್ತಿದ್ದರೂ ಮಕ್ಕಳಿಗೆ ಸರಿಯಾದ ಬಿಸಿಯೂಟ ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿದರು.

ಅಧಿಕಾರಿಗಳ ಭರಸವೆಯಿಂದ ಸಮಾಧಾನಗೊಂಡ ಸಭೆಯಲ್ಲಿದ್ದ ಪೋಷಕರು ಹಾಗೂ ಗ್ರಾಮದ ಪ್ರಮುಖರು ಕ್ಷೇತ್ರ ಶಿಕ್ಷಣಾಧಿಕಾರಿ ಪರಿಶೀಲನೆ ನಡೆಸಿ ಮುಖ್ಯ ಶಿಕ್ಷಕಿಯನ್ನು ವರ್ಗಾಯಿಸಬೇಕು. ತಪ್ಪಿದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts