ಬಂಟ್ವಾಳ: ಗ್ರಾಮೀಣ ಜನತೆಗೆ ಉಚಿತ ಕಾನೂನು ನೆರವು ಮತ್ತು ಕಾನೂನಿನ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಸಂಚಾರಿ ನ್ಯಾಯಾಲಯ ಅಭಿಯಾನದಲ್ಲಿ ಹೆಚ್ಚು ಹೆಚ್ಚು ಮಂದಿ ಪಾಲ್ಗೊಳ್ಳುವ ಮೂಲಕ ಜನ ಸಾಮಾನ್ಯರು ಕೂಡಾ ಕಾನೂನಿನ ಬಗ್ಗೆ ಅರಿವು ಹೊಂದಿರಬೇಕು ಎಂದು ಬಂಟ್ವಾಳ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಪ್ರತಿಭಾ ಡಿ.ಆರ್.ಹೇಳಿದ್ದಾರೆ.
ಇಲ್ಲಿನ ರಾಯಿ ಗ್ರಾಮ ಪಂಚಾಯಿತಿನಲ್ಲಿ ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಕಾನೂನು ಸಾಕ್ಷರತಾ ರಥ ಸಂಚಾರಿ ನ್ಯಾಯಾಲಯ ಅಭಿಯಾನ ಪ್ರಯುಕ್ತ ಮಂಗಳವಾರ ನಡೆದ ’ಲೋಕ ಅದಾಲತ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ವಕೀಲ ಪಿ.ಭಾನುಶಂಕರ್ ಮಾತನಾಡಿ, ಆಸ್ತಿ ಪರಭಾರೆ ಹಕ್ಕು ಮತ್ತು ನೋಂದಣಿ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಭೂಪರಿವರ್ತನೆ, 9/11 ಸಮಸ್ಯೆ ಜೊತೆಗೆ ಮಹಿಳಾ ದೌರ್ಜನ್ಯ ಮತ್ತು ಜಾತಿನಿಂದನೆ ಕಾಯ್ದೆ ದುರುಪಯೋಗ ಹೆಚ್ಚಳವಾಗುತ್ತಿರುವ ಬಗ್ಗೆ ನಾಗರಿಕರ ಪ್ರಶ್ನೆಗೆ ವಿವಿಧ ವಕೀಲರು ಉತ್ತರಿಸಿದರು.
ವಕೀಲರ ಸಂಘದ ಅಧ್ಯಕ್ಷ ಬಿ.ವೆಂಕಟರಮಣ ಶೆಣೈ, ಸಹಾಯಕ ಸರ್ಕಾರಿ ವಕೀಲರಾದ ಎಂ.ಎಸ್.ಆಲಿ, ಸತೀಶ ಕುಮಾರ್ ಶಿವಗಿರಿ, ಜಿಲ್ಲಾ ಕಾನೂನು ಪ್ರಾಧಿಕಾರ ಸದಸ್ಯ ರಮೇಶ ಉಪಾಧ್ಯಾಯ, ಹಿರಿಯ ವಕೀಲ ಅಜಿತ್ ಕುಮಾರ್ ರಾವ್, ಸಂಘದ ಕಾರ್ಯದರ್ಶಿ ರಾಜಾರಾಮ ನಾಯಕ್, ಮಾಜಿ ಅಧ್ಯಕ್ಷ ಅಶ್ವನಿ ಕುಮಾರ್ ರೈ, ಬಂಟ್ವಾಳ ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತಿತರರು ಮಾತನಾಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪುಷ್ಪಲತಾ, ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯೆ ಮಂಜುಳಾ ಸದಾನಂದ, ಛಾಯಾಗ್ರಾಹಕರ ಸಂಘದ ಪ್ರತಿನಿಧಿ ಹರೀಶ ಕುಂದರ್, ಪ್ರಮುಖರಾದ ಸತೀಶ ಕುಮಾರ್, ಬಾಲಕೃಷ್ಣ ಮತ್ತಿತರರು ಇದ್ದರು.
ಹಿರಿಯ ವಕೀಲ ಕೆ.ವಿ.ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಕೀಲರಾದ ಶೈಲಜಾ ರಾಜೇಶ್ ವಂದಿಸಿ, ರಾಘವೇಂದ್ರ ಬನ್ನಿಂತಾಯ ಕಾರ್ಯಕ್ರಮ ನಿರೂಪಿಸಿದರು.