ಸುದ್ದಿಗಳು

ಹಣ ನೀಡದ ಬ್ಯಾಂಕಿಗೆ ಸಾರ್ವಜನಿಕರ ಮುತ್ತಿಗೆ

ವಿಟ್ಲ: ಪೂರ್ವ ಯೋಜಿತ ಕಾರ್ಯಕ್ರಮವನ್ನು ಹಾಕಿಕೊಳ್ಳದೆ 500 ಹಾಗೂ 1000 ನೋಟು ಬದಲಾವಣೆ ಮಾಡಿದ ಕಾರಣ, ನಾಗರಿಕರು ಬೀದಿಗೆ ಬೀಳುವಂತಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ ಎಸ್ ಮಹಮ್ಮದ್ ಹೇಳಿದರು.

ಮಂಗಳವಾರ ಸಾಲೆತ್ತೂರು ಗ್ರಾಮದ ರಾಷ್ಟ್ರೀಕೃತ ಬ್ಯಾಂಕ್‍ನ ಮುಂದೆ ಗ್ರಾಹಕರಿಗೆ ಕನಿಷ್ಠ ಹಣ ಹಾಗೂ ಸರಿಯಾದ ಮಾಹಿತಿ ನೀಡದೇ ಇರುವುದರ ವಿರುದ್ದ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

ಜನರ ಕಷ್ಟಗಳಿಗೆ, ಸಮಸ್ಯೆಗೆ ಸ್ಪಂದಿಸುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ನೋಟಿನ ಸಮಸ್ಯೆ ಸರಿಪಡಿಸದಿದ್ದರೆ ಜನರು ದಂಗೆ ಏಳುವ ಪ್ರರಿಸ್ಥಿತಿ ನಿರ್ಮಾಣವಾಗಬಹುದೆಂಬ ಎಚ್ಚರಿಕೆಯನ್ನು ಸರ್ವೋಚ್ಛ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನೀಡಿತ್ತು. ಬ್ಯಾಂಕ್‍ನಲ್ಲಿ ಸರಿಯಾಗಿ ಹಣ ಸಿಗದೆ ಜನರ ಧಂಗೆ ಸಾಲೆತ್ತೂರಿನಿಂದ ಪ್ರಾಂಭವಾಗಿದೆ ಎಂದು ಹೇಳಿದರು.

ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಮಾತನಾಡಿ ಐದಾರು ಗ್ರಾಮಗಳಿಗೆ ರಾಷ್ಟ್ರೀಕೃತ ಬ್ಯಾಂಕ್ ಎಂದು ಸಾಲೆತ್ತೂರಿನಲ್ಲಿ ಮಾತ್ರ ಇದೆ. ಕೃಷಿಕರು, ಕೂಲಿ ಕಾರ್ಮಿಕರು, ವ್ಯವಹಾರಸ್ತರು ನಗದು ವ್ಯವಹಾರಕ್ಕೆ ಈ ಭಾಗಕ್ಕೆ ಆಗಮಿಸುತ್ತಾರೆ. ಗ್ರಾಮೀಣ ಭಾಗದ ಜನರು ಕೈಯಲ್ಲಿ ಹಣ ಇಲ್ಲದೆ ಊಟಕ್ಕೂ ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಜನ 20 ದಿನದಿಂದ ಸ್ಪಂದಿಸುತ್ತಿದ್ದು, ಜನರಿಗೆ ಸರಿಯಾಗಿ ಮಾರ್ಗದರ್ಶನ ನೀಡುವ ಪ್ರಭಂದಕರಿಲ್ಲದಿರುವುದು ಎಲ್ಲಕ್ಕಿಂತ ಹೆಚ್ಚು ಸಮಸ್ಯೆಯಾಗಿದೆ ಎಂದು ಹೇಳಿದರು.

ಬ್ಯಾಂಕ್ ಪ್ರಭಂದಕ ಸುಜಿತ್ ಮಾತನಾಡಿ ಸದ್ಯ 1ಲಕ್ಷ ವಿದ್ದು ಎಲ್ಲರಿಗೂ 1 ಸಾವಿರದಂತೆ ವಿತರಿಸಲಾಗುವುದು. ಸಮಸ್ಯೆಯ ಬಗ್ಗೆ ಬ್ಯಾಂಕ್‍ನ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಹೆಚ್ಚುವರಿ ಹಣ ಪೂರೈಸುವ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಿದರು.

ವಿಟ್ಲ ಪೊಲೀಸ್ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ ಅವರು ಬ್ಯಾಂಕ್ ಹಿರಿಯ ಅಧಿಕಾರಿಗಳ ಬಳಿ ಸಮಸ್ಯೆಯ ಬಗ್ಗೆ ವಿಚಾರಿಸಿದರು., ಎರಡು ದಿನಗಳ ಕಾಲಾವಕಾಶ ನೀಡಿ ಎಲ್ಲವನ್ನೂ ಸರಿ ಪಡಿಸಿಕೊಡುವುದಾಗಿ ಅಧಿಕಾರಿಗಳು ಎಸ್ ಐ ಅವರಿಗೆ ಭರವಸೆ ನೀಡಿದ್ದಾರೆ. ಇದನ್ನು ಪ್ರತಿಭಟನಾ ಕಾರರಿಗೆ ಹೇಳಿದ ಪ್ರಕಾಶ್, ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.

ಕೊಳ್ನಾಡು ಗ್ರಾಮ ಪಂಚಾಯಿತಿ ಸದಸ್ಯರಾದ ಮಹಮ್ಮದ್ ಸಾಲೆತ್ತೂರು ಕಟ್ಟೆ, ಪವಿತ್ರಪೂಂಜ, ಇಸುಬು ತಾಳಿತ್ತನೂಜಿ, ಹಮೀದ್ ನಾರ್ಶ, ಜಗದೀಶ್ ರೈ, ಜಯಂತಿ ಎಸ್ ಪೂಜಾರಿ, ಲೀನಾ ಡಿ ಸೋಜ, ಸುನಂದ, ವೇದಾವತಿ, ದೇವಕಿ, ವೇದಾವತಿ, ಬಿಜೆಪಿ ಕಾರ್ಯಕರ್ತ ಮಾಜಿ ಸದಸ್ಯ ಲಕ್ಷ್ಮಣ ಸಪಲ್ಯ, ಬಿ ಜೆ ಪಿ ಆಲ್ಪ ಸಂಖ್ಯಾತ ವಿಭಾಗದ ಕಾರ್ಯದರ್ಶಿ ಲತೀಫ್ ಸಾಲೆತ್ತೂರು, ಲಕ್ಷ್ಮಣ, ಅಶ್ರಫ್ ಸಾಲೆತ್ತೂರು, ಖಲೀಲ್ ಕರೈ, ಎಚ್ ಎಂ ಕಾಲಿಂ ಮತ್ತಿತರರು ಭಾಗವಹಿಸಿದರು.
ಸಾಲೆತ್ತೂರು ಶಾಖೆಯಲ್ಲಿನ ಹೆಚ್ಚಿನ ಸಿಬ್ಬಂದಿ ಮಲೆಯಾಳಂ ಹಾಗೂ ಆಂಗ್ಲ ಭಾಷೆಯಲ್ಲೇ ಹೆಚ್ಚು ಮಾತನಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನರು ತುಳು ಹಾಗೂ ಕನ್ನಡ ಮಾತ್ರ ತಿಳಿದಿರುವುದರಿಂದ ಅಧಿಕಾರಿಗಳು ಹೇಳುವುದು ಅರ್ಥವಾಗದೆ ಸಮಸ್ಯೆ ಆರಂಭವಾಗಿದೆ. ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಕನ್ನಡ ಕಲಿಯಬೇಕೆಂಬ ನಿಯಮ ಇದ್ದರೂ ಪಾಲಿಸದಿರುವುದು ಗ್ರಾಮೀಣ ಭಾಗದ ಜನರಿಗೆ ಸಮಸ್ಯೆಯಾಗಿದೆ.

ಬ್ಯಾಂಕ್ ನಲ್ಲಿ ಹಣ ಜಮಾ ಮಾಡಲು ಹಾಗೂ ಪಡೆದುಕೊಳ್ಳಲು ಬಳಸುವ ಚೀಟಿಯನ್ನು ಬ್ಯಾಂಕ್‍ನವರು ಒದಗಿಸುವುದು ಸಾಮಾನ್ಯ. ಆದರೆ ಈ ಬ್ಯಾಂಕ್ ನಲ್ಲಿ ಒಂದು ಪ್ರತಿಯನ್ನು ನೀಡಿ ಹೊರಗೆ ಜೆರಾಕ್ಸ್ ಮಾಡಿಕೊಂಡು ಬರಬೇಕೆಂದು ಅಧಿಕಾರಿಗಳು ಹೇಳುತ್ತಿದ್ದರು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts