ಆ ಶಿಕ್ಷಕಿ ಸುಮಾರು ನಾಲ್ಕುತಿಂಗಳ ಕಾಲ ಆ ವಿದ್ಯಾರ್ಥಿಗೆ ನೀಡಿದ ಕ್ಯಾಂಡಲ್ ಬೆಳಕು, ಆ ಹುಡುಗನ ಬಾಳನ್ನೇ ಬೆಳಗಿಸಿತು. ಆದರೆ ಆ ಶಿಕ್ಷಕಿ ವಿದ್ಯಾರ್ಥಿಯ ಕಲಿಕೆಯ ಉದ್ದೇಶಕ್ಕೆ ಕ್ಯಾಂಡಲ್ ಕೊಟ್ಟ ವಿಚಾರ ವಿದ್ಯಾರ್ಥಿ ಮತ್ತು ಆತನ ಮನೆಯವರನ್ನು ಹೊರತು ಪಡಿಸಿ, ಯಾರಿಗೂ ಗೊತ್ತಾಗಲೇ ಇಲ್ಲ.
ಬಂಟ್ವಾಳ ತಾಲೂಕಿನ ಶಿಕ್ಷಕಿಯೊಬ್ಬರು ದೂರದ ಮಂಡ್ಯ ತಾಲೂಕಿನಲ್ಲಿ ಶಿಕ್ಷಕಿಯಾಗಿದ್ದ ಅವಧಿಯಲ್ಲಿ ನಡೆದ ಘಟನೆಯೊಂದನ್ನು ನನ್ನ ಮುಂದೆ ತೆರೆದಿಟ್ಟರು. ಆ ಘಟನೆಯನ್ನು ಅವರು ವಿವರಿಸುತ್ತಿದ್ದಂತೆಯೇ ನನ್ನ ಕಣ್ಣುಗಳಿಂದ ನೀರು ಹರಿಯಿತು. ಆ ಶಿಕ್ಷಕಿ ಬಗ್ಗೆ ನನಗೆ ಅಭಿಮಾನ ಮೂಡಿಬಂತು. ಅಗತ್ಯ ಬಿದ್ದರೆ ಪತ್ರಿಕೆಯಲ್ಲಿ ಪ್ರಕಟಿಸಿ ಎಂದಾಗ, ಖಂಡಿತವಾಗಿಯೂ ಇದು ಸುದ್ದಿಯಾಗಬೇಕು ಎಂದೆ, ಆದರೆ ತನ್ನ ಹೆಸರನ್ನು ಎಲ್ಲೂ ಉಲ್ಲೇಖಿಸಬೇಡಿ ಎಂಬ ಅವರ ಪ್ರೀತಿಯ ಒತ್ತಾಯಕ್ಕೆ ನಾನು ಮಣಿಯಲೇ ಬೇಕಾಯಿತು.
ಏನಿದು ಆ ಘಟನೆ..?
ಮಂಡ್ಯ ಜಿಲ್ಲೆಯ ಸಂಸ್ಥೆಯೊಂದು ನಡೆಸುತ್ತಿದ್ದ ಶಾಲೆಯದು. ಈ ಶಿಕ್ಷಕಿ ಅಲ್ಲಿ ಏಳನೇ ತರಗತಿಗೆ ಪಾಠ ಮಾಡುತ್ತಿದ್ದರು. ಅವರ ತರಗತಿಯ ವಿದ್ಯಾರ್ಥಿ ಹರೀಶ್ ಆಗಾಗ ಗೈರು ಹಾಜರಾಗುತ್ತಿದ್ದ, ಆತ ಶಾಲೆಗೆ ತಪ್ಪಿಸಿದನೆಂದರೆ ವಾರಗಟ್ಟಲೆ ಶಾಲೆಯ ಕಡೆ ಮುಖ ಹಾಕುತ್ತಿರಲಿಲ್ಲ. ಬಡಮಕ್ಕಳ ಶಾಲೆಯಾದ್ದರಿಂದ ಮಕ್ಕಳ ಗೈರುಹಾಜರಿ ಬಗ್ಗೆ ಶಾಲೆಯ ಆಡಳಿತಮಂಡಳಿ ಹೆಚ್ಚುಗಮನ ಹರಿಸುತ್ತಿರಲಿಲ್ಲ.
ಹಾಗೆ ಒಂದು ಬಾರಿ ಹರೀಶ್ ಶಾಲೆಗೆ ಬಾರದೆ ಹತ್ತುದಿನ ಕಳೆಯಿತು. ಅದೊಂದು ದಿನ ಪೇಟೆಯಲ್ಲಿ ಹರೀಶ್ ಈ ಶಿಕ್ಷಕಿಯ ಕಣ್ಣಿಗೆ ಬಿದ್ದ. ಶಿಕ್ಷಕಿ ಪ್ರೀತಿಯಿಂದ ಕರೆದು ಮಾತನಾಡಿಸಿದರು. ಆರಂಭದಲ್ಲಿ ಕಣ್ತಪ್ಪಿಸಿಕೊಂಡು ಹೋಗಲು ಯತ್ನಿಸಿದ ಹರೀಶ್, ಶಿಕ್ಷಕಿಯ ಮೇಲಿನ ಗೌರವದಿಂದ ಎದುರಿಗೆ ಬಂದು ನಮಸ್ತೇ ಅಂದ.
ಶಿಕ್ಷಕಿ ಹರೀಶ್ ನಲ್ಲಿ ನೀನು ಯಾಕೆ ಶಾಲೆಗೆ ಬರ್‍ತಿಲ್ಲ…? ಎಂದಾಗ ಅವನ ಮುಖ ಸಣ್ಣಗಾಯಿತು. ಹೇಳಲೊಪ್ಪದ ಆತ ಕೊನೆಗೆ ಶಿಕ್ಷಕಿಯ ಒತ್ತಾಯದಿಂದ ಮಣಿದು ಹೇಳಿದ ,
ಟೀಚರ್, ನಂಗೆ ಅಪ್ಪ ಇಲ್ಲ, ಅಮ್ಮ ಬೇರೆ ಬೇರೆ ಮನೆಯಲ್ಲಿ ಕೆಲಸ ಮಾಡಿ ನಮ್ಮನ್ನು ಸಾಕ್ತಿದ್ದಾರೆ, ಮನೆಯಲ್ಲಿ ಕರೆಂಟ್ ಕೂಡ ಇಲ್ಲ.. ಎಂದು ಜೋರಾಗಿ ಅತ್ತೇ ಬಿಟ್ಟ.
ಅಳ್ಬೇಡ ಎಂದು ಟೀಚರ್ ಸಮಾಧಾನ ಪಡಿಸಿದಾಗ, ಉಸಿರೆಳೆದುಕೊಂಡು ಮಾತು ಮುಂದುವರಿಸಿದ.. ಹೌದು ಟೀಚರ್ ಮನೆಯಲ್ಲಿ ಕರೆಂಟ್ ಇಲ್ಲ, ಹಾಗಾಗಿ ಸ್ಕೂಲ್ ನಲ್ಲಿ ಕೊಡೋ ಹೋಮ್ ವರ್ಕ್ ಮಾಡ್ಲಿಕ್ಕೆ ಆಗ್ತಾ ಇಲ್ಲ, ಚಿಮಿಣಿ ದೀಪ ಹೆಚ್ಚು ಹೊತ್ತು ಉರಿಸಿಡ್ಲಿಕ್ಕೆ ಅಮ್ಮ ಬಿಡಲ್ಲ, ನಾನೇನ್ಮಾಡ್ಲಿ-ಅಮ್ಮನ ಕಷ್ಟ ನಂಗೆ ಗೊತ್ತಿದೆ, ನಾನ್ಯಾರತ್ರ ಹೇಳ್ಲಿ.. ಟೀಚರ್ ಅಷ್ಟು ಹೊತ್ತು ಹರೀಶ್ ಕಣ್ಣಲ್ಲಿ ನೀರು ಕಂಡಿದ್ದ , ಟೀಚರ್ ಕಣ್ಣಲ್ಲಿಯೂ ಅವರ ಅರಿವಿಗೆ ಬಾರದೇ ನೀರು ಹರಿಯಿತು.
ನಂಗೂ ಆಸೆಯಿದೆ, ಚೆನ್ನಾಗಿ ಕಲೀಬೇಕು ಆಫೀಸರ್ ಆಗ್ಬೇಕು ಎಂದಾಗ, ಟೀಚರ್ ಒಂದು ನಿರ್ಧಾರಕ್ಕೆ ಬಂದರು.
ಆ ವಿದ್ಯಾರ್ಥಿಯ ಕೈ ಹಿಡಿದು ಅಂಗಡಿಗೆ ಕರೆದೊಯ್ದರು.. ಒಂದು ಪ್ಯಾಕೇಟ್ ಕ್ಯಾಂಡಲ್ ತೆಗೆದುಕೊಟ್ಟರು ಮತ್ತು ಹೇಳಿದರು.. ನಿನಗೆ ಓದಬೇಕೆಂದು ಆಸೆ ಇದೆಯಲ್ವಾ.. ಓದು-ಕಲಿ, ಹೋಂ ವರ್ಕ್ ಮಾಡೋಕೆ ಇದನ್ನು ಉಪಯೋಗಿಸು. ಇದು ಮುಗಿದ ಮೇಲೆ ಹೊಸತ್ತು ತೆಗ್ದು ಕೊಡ್ತೇನೆ, ಆದ್ರೆ ನಾನು ನಿಂಗೆ ಕ್ಯಾಂಡಲ್ ಕೊಟ್ಟ ವಿಷ್ಯ ಮಾತ್ರ ಯಾರಲ್ಲೂ ಹೇಳ್ಬೇಡ.. ಎಂದು. ಮರುದಿನದಿಂದಲೇ ಆ ಹುಡುಗ ಶಾಲೆಗೆ ಬರಲಾರಂಭಿಸಿದ, ಅವನು ಕಲಿಕೆಯಲ್ಲೂ ಉತ್ಸಾಹ ತೋರಿಸಿದ. ಏಳನೇ ತರಗತಿಯ ವಾರ್ಷಿಕಪರೀಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ ಉತ್ತೀರ್ಣನಾದ. ಆ ಬಳಿಕ ಬಂಟ್ವಾಳದಲ್ಲಿ ಕೆಲಸ ಸಿಕ್ಕಿತೆಂದು ಆ ಶಿಕ್ಷಕಿ ಮಂಡ್ಯದಿಂದ ಊರಿಗೆ ಮರಳಿದರು.
ಆದರೆ ಆ ಶಿಕ್ಷಕಿ ಸುಮಾರು ನಾಲ್ಕುತಿಂಗಳ ಕಾಲ ಆ ವಿದ್ಯಾರ್ಥಿಗೆ ನೀಡಿದ ಕ್ಯಾಂಡಲ್ ಬೆಳಕು, ಆ ಹುಡುಗನ ಬಾಳನ್ನೇ ಬೆಳಗಿಸಿತು. ಆ ಶಿಕ್ಷಕಿ ವಿದ್ಯಾರ್ಥಿಯ ಕಲಿಕೆಯ ಉದ್ದೇಶಕ್ಕೆ ಕ್ಯಾಂಡಲ್ ಕೊಟ್ಟ ವಿಚಾರ ವಿದ್ಯಾರ್ಥಿ ಮತ್ತು ಆತನ ಮನೆಯವರನ್ನು ಹೊರತು ಪಡಿಸಿ,ಯಾರಿಗೂ ಗೊತ್ತಾಗಲೇ ಇಲ್ಲ.
ನಿಜಕ್ಕೂ ಆ ಶಿಕ್ಷಕಿಯ ಕಾರ್ಯವೈಖರಿಯನ್ನು ಪ್ರಶಂಸಿಸಲೇ ಬೇಕು.
ಇಂತಹಾ ಶಿಕ್ಷಕರು ವಿದ್ಯಾರ್ಥಿಯ ಬದುಕಿನಲ್ಲಿ ಹೊಸಹುರುಪು ನೀಡಬಲ್ಲರು. ಇಂತವರು ಇನ್ನಷ್ಟು ಮಂದಿಗೆ ಮಾದರಿಯಾದರೆ ಅದಕ್ಕಿಂತ ಹೆಚ್ಚು ಖುಷಿ ಬೇರೆ ಏನಿದೆ…?
….
ಅಭಿಪ್ರಾಯ ವ್ಯಕ್ತಪಡಿಸಲು ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ವಾಟ್ಸಾಪ್ ನಂಬರ್ ಗೆ ಕಳುಹಿಸಿ: 9448548127 ಅಥವಾ ಈ ಮೈಲ್ ವಿಳಾಸ: bantwalnews@gmail.com