ಬಂಟ್ವಾಳ: ಪುರಸಭೆಯ ಬಜೆಟ್ ಗೆ ಪೂರ್ವಭಾವಿಯಾಗಿ ಸಂಘ, ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹದ ಸಭೆ ಸೋಮವಾರ ಬಂಟ್ವಾಳ ಪುರಸಭೆಯಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಪ್ರೊಬೆಷನರಿ ಐಎಎಸ್ ಅಧಿಕಾರಿ ಗಾರ್ಗಿ ಜೈನ್, ಬಂಟ್ವಾಳ ಅಭಿವೃದ್ಧಿಗೆ ಪೂರಕ ಸಲಹೆಗಳನ್ನ ನೀಡಿದರೆ ಮುಂದಿನ ಪುರಸಭೆ ಬಜೆಟ್ ನಲ್ಲಿ ಅಳವಡಿಸಿ, ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದರು.
ಪುರಸಭಾ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ನೀರಿನ ಶುಲ್ಕ, ವೆಂಡಿಂಗ್ ಝೋನ್, ಬಸ್ ನಿಲ್ದಾಣಕ್ಕೆ ಹೊಸ ರೂಪ, ತ್ಯಾಜ್ಯ ವಿಲೇವಾರಿಯ ಕಾರ್ಯಕ್ರಮಕ್ಕೆ ಅನುದಾನ ಮೀಸಲಿಡುವ ಕುರಿತು ಪ್ರಸ್ತಾಪಿಸಲಾಯಿತು.
ವಿವಿಧ ವಿಷಯಗಳ ಕುರಿತು ಟ್ರಾಫಿಕ್ ಎಸ್ ಐ ಚಂದ್ರಶೇಖರಯ್ಯ, ನಾಗರಿಕ ಸ್ವಯಂಸೇವಾ ಪ್ರತಿನಿಧಿಗಳಾದ ಶಿವಶಂಕರ್, ಕೆ.ಸುಂದರ ರಾವ್, ಡಾ.ರಮಾದೇವಿ, ಮಹಾಬಲೇಶ್ವರ ಹೆಬ್ಬಾರ್, ಎಸ್.ಆರ್.ಪಟವರ್ಧನ್, ವಸಂತ ಬಾಳಿಗಾ, ದಾಮೋದರ್, ಸುಭಾಶ್ಚಂದ್ರ ಜೈನ್, ಗಿರೀಶ್ ಪೈ ಬಂಟ್ವಾಳ ಮತ್ತಿತರರು ವಿಷಯ ಮಂಡಿಸಿದರು.
ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ಪೂರಕ ಮಾಹಿತಿ ನೀಡಿದರು. ಮುಖ್ಯಾಧಿಕಾರಿ ಸುಧಾಕರ್ ಮಾತನಾಡಿ, ಪುರಸಭೆ ಅಭಿವೃದ್ಧಿ ಹಿನ್ನೆಲೆಯಲ್ಲಿ ಬಜೆಟ್ ಗೆ ಪೂರಕ ವಿಚಾರಗಳನ್ನು ಒದಸಿಗಲು ಕೋರಿದರು.
ಹಿಂದಿನ ಆಯವ್ಯಯ ಪೂರ್ವ ಸಮಾಲೋಚನಾ ಸಭೆಯಲ್ಲಿ ಪತ್ರಕರ್ತರು ನೀಡಿದ್ದ ಸಲಹೆಗಳು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ ಎಂದು ಸಭೆಯಲ್ಲಿದ್ದ ಪತ್ರಕರ್ತರು ಗಮನ ಸೆಳೆದರು. ಸಮುದಾಯ ಅಧಿಕಾರಿ ಮತ್ತಡಿ ಹಾಗೂ ಪುರಸಭೆಯ ಇಲಾಖಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.