ಮಂಗಳೂರು: ಜನವರಿ ಬಳಿಕ ನೇತ್ರಾವತಿ ನದಿ ನೀರನ್ನು ಕೃಷಿ ಬೆಳೆಗಳಿಗೆ ಬಳಕೆ ಮಾಡಿಕೊಳ್ಳುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು, ಇದನ್ನು ಉಲ್ಲಂಘಿಸಿ, ಕೃಷಿ ಬೆಳೆಗಳಿಗೆ ನೀರು ಬಳಕೆ ಮಾಡಿಕೊಂಡಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ವಹಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿರುವ ಕುರಿತ ವರದಿಗೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಡಾ.ಜಗದೀಶ್, ಈ ಕುರಿತು ಯಾವುದೇ ಆದೇಶ ಹೊರಡಿಸಲಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮುಂಬರುವ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗರೂಕತಾ ಕ್ರಮ ಕೈಗೊಳ್ಳಲು ನವೆಂಬರ್ 5ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಅವುಗಳಲ್ಲಿ ನದಿ ಪಾತ್ರದಿಂದ ನೀರನ್ನು ಕೃಷಿ ಬೆಳೆಗಳಿಗೆ ಬಳಸಿಕೊಳ್ಳುವ ಬಗ್ಗೆ ಕೈಗೊಂಡ ನಿರ್ಣಯ ಹೀಗಿದೆ.
ಜನವರಿ ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ತೋಟಗಾರಿಕಾ ಬೆಳೆಗಳನ್ನು ಹೊರತುಪಡಿಸಿ, ಕೃಷಿ ಬೆಳೆಗಳಿಗೆ ನದಿ ಪಾತ್ರದಿಂದ ಅಥವಾ ಯಾವುದೇ ಕಿಂಡಿ ಅಣೆಕಟ್ಟುಗಳಿಂದ ನೀರು ಬಳಸತಕ್ಕದ್ದಲ್ಲ. ಈ ಬಗ್ಗೆ ಸಂಬಂಧಿತ ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಸಹಾಯಕ ಆಯುಕ್ತರು ಹಾಗು ಸಂಬಂಧಿತ ತಹಸೀಲ್ದಾರರು ಆಯಾ ಭಾಗದ ರೈತರೊಂದಿಗೆ ಸಭೆ ನಡೆಸಿ ತಿಳುವಳಿಕೆ ನೀಡಬೇಕು. ಸ್ಥಳೀಯ ಸಂಸ್ಥೆಗಳ ಕೋರಿಕೆ ಮೇರೆಗೆ ಮೆಸ್ಕಾಂ ವತಿಯಿಂದ ತೋಟಗಾರಿಕಾ ಬೆಳೆಗಳನ್ನು ಹೊರತುಪಡಿಸಿ, ಕೃಷಿ ಬೆಳೆಗಳಿಗೆ ಉಪಯೋಗಿಸುವ ಪಂಪಿನ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಇವುಗಳನ್ನು ಹೊರತುಪಡಿಸಿ, ಕೃಷಿ ಬೆಳೆಗಳಿಗೆ ನೀರು ಬಳಸಿಕೊಂಡಲ್ಲಿ, ರೈತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಬಗ್ಗೆ ಯಾವುದೇ ನಿರ್ಧಾರ ಅಥವಾ ಆದೇಶ ಹೊರಡಿಸಿರುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.