ಬಂಟ್ವಾಳ: ಬೀಡಿ ಕಾರ್ಮಿಕರ ನಿವೃತ್ತಿ ಪಿಂಚಣಿಗಾಗಿ ಕೂಪನ್ ಪಡೆಯಲು ಫಲಾನುಭವಿಗಳನ್ನು ಮುಂಜಾನೆಯೇ ಕಚೇರಿಗೆ ಆಹ್ವಾನಿಸಿದ ಹಿನ್ನಲೆಯಲ್ಲಿ ನೂಕು ನುಗ್ಗಲು ಉಂಟಾಗಿ ಅನೇಕ ಮಂದಿ ಮಹಿಳೆಯರು ಹಾಗೂ ವೃದ್ದರು ತೊಂದರೆ ಅನುಭವಿಸಿದ ಘಟನೆ ಬಿ.ಸಿ.ರೋಡಿನ ಅಂಚೆ ಕಚೇರಿ ಬಳಿ ಇರುವ ಪಾಣೆಮಂಗಳೂರು ಬೀಡಿ ಮತ್ತು ಜನರಲ್ ವರ್ಕರ್‍ಸ್ ಯೂನಿಯನ್‌ನ ಕಚೇರಿ ಮುಂದೆ ನಡೆಯಿತು.
ಕೂಪನ್ ಪಡೆಯಲು ಬೆಳಿಗ್ಗೆ 7 ಗಂಟೆಯ ವೇಳೆಗೆ ಫಲಾನುಭವಿ ಕಾರ್ಮಿಕರು ಕಚೇರಿಗೆ ಆಗಮಿಸಿದ್ದರೂ ಕೂಡ ಅವ್ಯಸ್ಥೆಯಿಂದಾಗಿ ಮಧ್ಯಾಹ್ನ 12 ಗಂಟೆಯಾದರೂ ಕಚೇರಿ ಒಳಪ್ರವೇಶಿಸಲಾಗದೆ ಬಿಸಿಲಿನಲ್ಲಿ ನಿಂತು ಪರಿತಪಿಸಬೇಕಾಯಿತು. ಕೆಲ ವೃದ್ದ ಮಹಿಳೆಯರಂತೂ ತೀವ್ರ ಸುಸ್ತಾಗಿ ಮುಂಭಾಗದ ಅಂಚೆ ಕಚೇಯ ಜಗಲಿಯನ್ನು ಆಶ್ರಯಿಸಿದರೆ ಮತ್ತೆ ಕೆಲವರು ಈ ಅವ್ಯವಸ್ಥೆಯ ವಿರುದ್ದ ಹಿಡಿ ಶಾಪ ಹಾಕುವ ದೃಶ್ಯ ಕಂಡು ಬಂತು. ಎಲ್ಲಾ ಫಲಾನುಭವಿಗಳನ್ನು ಒಂದೇ ದಿನ ಕಚೇರಿಗೆ ಆಹ್ವಾನಿಸಿದ ಹಿನ್ನಲೆಯಲ್ಲಿ ಈ ರೀತಿ ನೂಕು ನುಗ್ಗಲು ನಿರ್ಮಾಣವಾಗಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.