ವಾಸ್ತವ

ಡಿಜಿಟಲ್ ಕ್ರಾಂತಿಯೂ, ಮಾನವ ಸಂಬಂಧವೂ

ಕಾರ್ಡ್ ಹಾಕಿ ಸ್ವೈಪ್ ಮಾಡುವ ಜಗತ್ತಿನ ಮಧ್ಯೆಯೇ ಚಿಲ್ಲರೆ ಹಣಕ್ಕಾಗಿ ಕದನಕ್ಕಿಳಿಯುವವರೂ ಇದ್ದಾರೆ

ಜಾಹೀರಾತು

ಬೆಂಗಳೂರಿನಲ್ಲಿ ಏನೂ ತೊಂದರೆ ಇಲ್ಲ, ಕಾರ್ಡು ಹಾಕೋದು, ಸ್ವೈಪ್ ಮಾಡೋದು. ಮೊಬೈಲ್ ಇದ್ದರೆ ಆಟೋದವರೂ ಏಮಾರಿಸುವ ಪ್ರಶ್ನೆಯೇ ಇಲ್ಲ. ಎಲ್ಲವೂ ಡಿಜಿಟಲ್. ಹೀಗೆಂದು ಸ್ನೇಹಿತ ಹೇಳಿದಾಗ ಹೌದಲ್ವ, ನಾವು ಎಷ್ಟು ವೇಗವಾಗಿ ತಂತ್ರಜ್ಞಾನದಲ್ಲಿ ಮುಂದುವರಿಯುತ್ತಿದ್ದೇವೆ ಎಂದು ನಾನೂ ಅಂದುಕೊಂಡೆ. ನೀವೀಗ ಈ ಬರೆಹವನ್ನು ಮೊಬೈಲ್ ನಲ್ಲೋ, ಅಥವಾ ಕಂಪ್ಯೂಟರ್ ಪರದೆಯಲ್ಲೋ ಅಥವಾ ಇನ್ಯಾವುದೋ ಇಲೆಕ್ಟ್ರಾನಿಕ್ ಸಾಧನದ ಪರದೆಯಲ್ಲೋ ನೋಡುತ್ತಿರುತ್ತೀರಿ ಎಂಬುದೂ ಸತ್ಯ. ಅಲ್ಲಿಗೆ ನಾವು ಭಯಂಕರವಾಗಿ ಮುಂದುವರಿದಿದ್ದೇವೆ ಎಂದಂತಾಯಿತು.

ಹೌದು. ಇಂದು ಬೆಂಗಳೂರು ಸಹಿತ ಮಹಾನಗರ, ಮೆಟ್ರೋಗಳಿಗೆ ಹೋದರೆ ಕರೆನ್ಸಿ ನೋಟಿನಲ್ಲಿ ವ್ಯವಹರಿಸಬೇಕು ಎಂದೇನೂ ಇಲ್ಲ. ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಹಣ, ಹಾಗೂ ಅದರ ಬಳಕೆಗೆ ಅಂತರ್ಜಾಲವುಳ್ಳ ಮೊಬೈಲ್ ಹಾಗೂ ಅಕೌಂಟ್ ಇದ್ದರೆ ಸಾಕು. ಮನೆ ಬಾಗಿಲಿಗೆ ಮಾಂಸ, ತರಕಾರಿ, ಹಣ್ಣು ಹಂಪಲು, ಹಾಲು, ವೈದ್ಯಕೀಯ ಸವಲತ್ತುಗಳು, ಬೇಕೆಂದಾಗ ಟ್ಯಾಕ್ಸಿಗಳು, ಆಟೊಗಳು ಕಾಲಬುಡಕ್ಕೇ ಬಂದು ನಿಲ್ಲುತ್ತವೆ. ಎಲ್ಲಿಯವರೆಗೆ ಎಂದರೆ ನೀವು ಯಾವುದಾದರೂ ಬೀದಿಯಲ್ಲಿ ಆಟೋವನ್ನು ಬುಕ್ ಮಾಡಿದರೆ ನಿಂತ ಜಾಗಕ್ಕೇ ಬಂದು ನಿಮ್ಮನ್ನು ಪಿಕಪ್ ಮಾಡುವಷ್ಟು ತಂತ್ರಜ್ಞಾನ ಬೆಳೆದಿದೆ. ಅಂಥ ಬೆಳವಣಿಗೆಯನ್ನೇ ನಾವು ನಿರೀಕ್ಷಿಸುತ್ತಿದ್ದುದು. ಹೌದಾ ಮಾರಾಯ್ರೇ ನಾವೆಷ್ಟು ಸ್ಮಾರ್ಟ್ ಆಗಿದ್ದೇವೆ ಅಲ್ವಾ ಅನಿಸುವಷ್ಟು…

ಇಲ್ಲಿ ಬಾರ್ಗೈನ್ ನಡೆಯುವುದಿಲ್ಲ !

ನೀವು ಮೊದಲೇ ಯಾವುದಕ್ಕೆ ಎಷ್ಟು ಎಂದು ದರಪಟ್ಟಿಯಲ್ಲಿ ನೋಡಿ, ಅದನ್ನು ಆಯ್ಕೆ ಮಾಡಿ, ಬುಟ್ಟಿಯಲ್ಲಿ ಹಾಕಿ ಕೌಂಟರಿಗೆ ಬಂದರೆ ಮೊತ್ತ ಎಷ್ಟು ಎಂಬ ಲೆಕ್ಕ ಸಿಗುತ್ತದೆ. ನೀವು ಕಾರ್ಡು ಕೊಡುತ್ತೀರಿ, ಬಿಲ್ ಬರುತ್ತದೆ. ಪಾವತಿ ಆಗುತ್ತದೆ. ಹೊರಟುಬಿಡುತ್ತೀರಿ. ವಾದ, ವಿವಾದದ ಮಾತೇ ಇಲ್ಲ. ವಾದ ಮಾಡಿದರೂ ಕೇಳುವವರಾರು?

ಹೀಗಾಗಿ ಬೆಂಗಳೂರು, ಮುಂಬೈ, ದೆಹಲಿ ಒಟ್ಟಾಗಿ ಮೆಟ್ರೋ ಲೈಫ್ ನಲ್ಲಿ ಬದುಕುವವರಿಗೆ ಕರೆನ್ಸಿ, ಚಿಲ್ಲರೆ ಹಣ ಮುಖ್ಯ ಎಂದೆನಿಸುವುದೇ ಇಲ್ಲ. ಕಾರ್ಡ್ ಕರೆನ್ಸಿಯಾಗುತ್ತದೆ. ಇದೊಂಥರಾ ಡಿಜಿಟಲ್ ಕ್ರಾಂತಿಗೆ ಮುನ್ನುಡಿ ಬರೆದಂತೆ.

ಮೆಟ್ರೋ ಬಿಟ್ಟು ಹೊರಬನ್ನಿ…

ಇಲ್ಲಿನ ಲೈಫೇ ಬೇರೆ.

ಹಾಗಾದರೆ ಬಳಕೆದಾರ ಏನು ಮಾಡಬೇಕು? ಕೈಯಲ್ಲಿ ಸಾಕಷ್ಟು ನೋಟುಗಳನ್ನು ಹೊಂದಿರಬೇಕು.

ತಾಲೂಕು ಕೇಂದ್ರ ಪ್ರದೇಶದಲ್ಲಿ ಬೆಳಗ್ಗೆ 7 ಗಂಟೆಗೆ ನೀವು ಆಟೋದಲ್ಲಿ ಒಂದು ಕಿ.ಮೀಗಿಂತ ಇನ್ನೂರು ಅಥವಾ ಮುನ್ನೂರು ಮೀಟರ್ ಜಾಸ್ತಿ ಹೋದರೆ 50 ರೂಪಾಯಿ ಕೊಡಲೇಬೇಕು, ಯಾವ ಬಾರ್ಗೈನೂ ನಿಮಗೆ ಲಾಗೂ ಆಗುವುದಿಲ್ಲ. ಆಟೋ, ಟ್ಯಾಕ್ಸಿಗಳು ಇರುವುದೇ ಮಧ್ಯಮ ಹಾಗೂ ಕೆಳಮಧ್ಯಮ ವರ್ಗದವರಿಗೆ. ಆದರೆ ಯಾವ ಪ್ರದೇಶದಿಂದ ಯಾವ ಪ್ರದೇಶಕ್ಕೆ ಎಷ್ಟು ದರ ಎಂಬ ಪಟ್ಟಿಯನ್ನು ಕೆಲವರ ಬಳಿ ಇರುವುದೇ ಇಲ್ಲ. ನಮೂದಿಸಿದರೂ ಕೆಲವೊಮ್ಮೆ ರಾಷ್ಟ್ರದ ಸಮಸ್ಯೆಗಳ ನೆಪವೊಡ್ಡಿ  ಬಾಡಿಗೆ ದರವಸೂಲಾತಿ ಜಾಸ್ತಿಯೇ ಇರುತ್ತದೆ. ನಾವೂ ಬದುಕಬೇಡವೇ ಎಂಬುದು ಬಾಡಿಗೆ ಆಟೋ, ಟ್ಯಾಕ್ಸಿ ಚಾಲಕ, ಮಾಲಕರ ಪ್ರಶ್ನೆ. ಅವರು ಹೇಳುವುದು ಸರಿಯೇ ಇದೆ. ಟ್ಯಾಕ್ಸಿ, ಆಟೋ ಚಾಲಕರೂ ಬದುಕಬೇಕು. ಹಾಗೆಯೇ ಪ್ರಯಾಣಿಕರೂ ಬದುಕಬೇಕು. ಟ್ಯಾಕ್ಸಿ, ಆಟೋಗಳಲ್ಲಿ ಪ್ರಯಾಣಿಸುವವರು ಟಾಟಾ, ಬಿರ್ಲಾರೇನಲ್ಲ, ಮಧ್ಯಮ, ಕೆಳ ಮಧ್ಯಮ ಹಾಗೂ ಅನಿವಾರ್ಯವಾಗಿ ಬಡವರು. ಹೀಗಾಗಿ ಬೆಂಗಳೂರು ಮಹಾನಗರದಂಥ ಮೆಟ್ರೋಗಳನ್ನು ಹೊರತುಪಡಿಸಿ, ನಿಮ್ಮ ಕಾರ್ಡ್, ಮೊಬೈಲ್ ಬ್ಯಾಂಕಿಂಗ್  ಯಾವುದೂ ಹೆಚ್ಚಿನ ಕಡೆಗಳಲ್ಲಿ ವರ್ಕೌಟ್ ಆಗೋದಿಲ್ಲ. ಹಳ್ಳಿ ಬಸ್ಸುಗಳಲ್ಲಿ ಹೋಗಬೇಕಾದರೆ ಚಿಲ್ಲರೆ ಕೈಯಲ್ಲಿ ಹಿಡಿಯಬೇಕಾಗಿರುವುದು ಪ್ರಮುಖ ಅಂಶ. ಬಸ್ಸಿಳಿದು ರಿಕ್ಷಾದಲ್ಲಿ ಸಾಗಬೇಕಾದರೂ ಚಿಲ್ಲರೆ ಬೇಕು, ನಡೆದು ಸುಸ್ತಾದರೆ ಸೋಡಾ ಶರಬತ್ತು ಕುಡಿದ ಮೇಲೆ ಹಣ ನೀಡಲು ನೀವು ಕಾರ್ಡು ನೀಡಿದರೆ ಆತ ಸ್ವೀಕರಿಸುವುದಿಲ್ಲ.

ಆದರೂ ನಿಮ್ಮ ಮೇಲೆ ಕರುಣೆ ಬಂದು ಆಟೋದವನೋ ಟ್ಯಾಕ್ಸಿಯವನೋ ಬಾಡಿಗೆ ಕಡಿಮೆ ಮಾಡಬಹುದು. ವ್ಯಾಪಾರಿಯು ರಿಯಾಯಿತಿ ತೋರಬಹುದು. ಎಳನೀರು ಒಂದು ಕುಡಿದರೆ, ಒಂದು ಬಾಳೆಹಣ್ಣನ್ನು ಫ್ರೀ ಕೊಡಬಹುದು. ಎಲ್ಲವೂ ನೀವು ವ್ಯವಹರಿಸುವ ರೀತಿ ಹಾಗೂ ಆತನ ಆಗಿನ ಮನೋಸ್ಥಿತಿಯ ಮೇಲಿರುತ್ತದೆ.

ಮಂಗಳೂರಿನಂಥ ಬೆಳೆಯುತ್ತಿರುವ ನಗರಗಳಿಗೂ ಈ ಮಾತು ಅನ್ವಯಿಸುತ್ತದೆ. ವ್ಯಾಪಾರ ವಹಿವಾಟು ಸಹಿತ ಯಾವುದಕ್ಕೂ ನಿಗದಿತ ದರನಮೂನೆಯ ಬದಲು ಬಾಯಿಮಾತಿನ ಲೆಕ್ಕವೇ ಅಂತಿಮವಾಗುತ್ತದೆ. ನೀವು ನಿಮ್ಮ ಸಂಬಂಧಿಕರ ಮನೆಗೆ ಹೋಗುವ ಸಂದರ್ಭ ವಯಸ್ಸಾದವರನ್ನು ಕರೆದುಕೊಂಡು ಹೋಗುತ್ತೀರಿ. ಅಲ್ಲಿಗೆ ಹೋಗಲು ಬಸ್ಸಿನಲ್ಲಿ ಸಾಧ್ಯವಾಗದಿದ್ದರೆ, ಅನಿವಾರ್ಯವಾಗಿ ಟ್ಯಾಕ್ಸಿ ಮಾಡುತ್ತೀರಿ. ಬಾಡಿಗೆ 700 ರೂಪಾಯಿಯಾಗುತ್ತದೆ ಎಂದಿಟ್ಟುಕೊಳ್ಳಿ. ನೂರರ 7 ನೋಟುಗಳು ನಿಮ್ಮಲ್ಲಿ ಇರಬೇಕು ಅಥವಾ ಈಗಿನ 2 ಸಾವಿರದ ನೋಟಿನ ಚಿಲ್ಲರೆ ಟ್ಯಾಕ್ಸಿ ಚಾಲಕನಲ್ಲಿರಬೇಕು. ಇಲ್ಲವಾದರೆ ನೀವಿಬ್ಬರೂ ಜಗಳ ಮಾಡಬೇಕು. ಡಿಜಿಟಲ್ ಕ್ರಾಂತಿ ಇಲ್ಲಿಗೆ ವರ್ಕೌಟ್ ಆಗಲ್ಲ.  ಸದ್ಯಕ್ಕೆ ನಮ್ಮ ತಾಲೂಕು, ಪಟ್ಟಣಗಳಲ್ಲಿ ನಡೆಯುತ್ತಿರುವ ವಾಸ್ತವ ಚಿತ್ರಣ ಇದು.

ಏಕೆಂದರೆ,

ಇಲ್ಲಿ ಬಾರ್ಗೈನ್ ನಡೆಯುತ್ತದೆ !

ಒಂದಂಶವನ್ನು ಇಲ್ಲಿ ಸ್ಪಷ್ಟಪಡಿಸುತ್ತಿದ್ದೇನೆ. ಪ್ರಧಾನಮಂತ್ರಿ ನೋಟು ನಿಷೇಧಕ್ಕೂ ಈ ಬರೆಹಕ್ಕೂ ಸಂಬಂಧ ಕಲ್ಪಿಸುವ ಅಗತ್ಯ ಇಲ್ಲ. ಏಕೆಂದರೆ ಇಂಥ ಚಿಲ್ಲರೆ ಜಗಳ, ಬಾರ್ಗೈನುಗಳು ಹಿಂದೆಯೂ ನಡೆದಿತ್ತು.

ಬಸ್ಸಿನಲ್ಲಿ ಹಿಂದೆಯೂ ಚಿಲ್ಲರೆ ಕೊರತೆ ಇರಲಿಲ್ಲವೇ?

ನಾನು ಬಿ.ಸಿ.ರೋಡಿನಿಂದ ಮಂಗಳೂರಿಗೆ ಸರಕಾರಿ ಬಸ್ಸಿನಲ್ಲಿ ಶಾಲೆಗೆ ಹೋಗುತ್ತಿದ್ದ ಸಂದರ್ಭ ಟಿಕೆಟಿಗೆ 3.50 ಪೈಸೆ ಇತ್ತು. ಆಗ 5 ರೂ ನೋಟು ಕೊಟ್ಟಾಗ ಕಂಡಕ್ಟರ್ ಬಾಯಿಗೆ ಬಂದಂತೆ ಬೈಯುತ್ತಿದ್ದರು. ನನ್ನಲ್ಲಿ ಚಿಲ್ಲರೆ ಹಣ ಇಲ್ಲ, ನಾನು ಚಿಲ್ಲರೆ ಹಣ ಎಲ್ಲಿಂದ ತರಲಿ, ನೀವು ಸರಿಯಾದ ಚೇಂಜ್ ಹಿಡ್ಕೊಂಡು ಬರಲು ಆಗುವುದಿಲ್ವಾ, ಹೀಗೆ ಬಾಯ್ತುಂಬಾ ಬಯ್ಗುಳದ ಮಾತು. ಆ ಕಾಲದಲ್ಲಿ ಬೆಂಗಳೂರಿನಲ್ಲಂತೂ ಆಟೋದವರ ಬಳಿ ಚಿಲ್ಲರೆ ಹಣಕ್ಕಾಗಿ ಜಗಳವಾಡುವ ದೃಶ್ಯ ಮಾಮೂಲು ಎಂಬಂತಿತ್ತು.

ಬದಲಾವಣೆಯಾಗಬೇಕಾದರೆ ಏನು ಮಾಡಬೇಕು?

ನಮ್ಮ ದೈನಂದಿನ ವ್ಯವಹಾರದಲ್ಲಿ ಸಮಗ್ರ ಬದಲಾವಣೆಯಾಗಬೇಕಾದರೆ ಕೇವಲ ಡಿಜಿಟಲ್ ಕ್ರಾಂತಿಯೊಂದೇ ಸಾಲದು.

ನಮ್ಮ ಮನೋಸ್ಥಿತಿಯಲ್ಲೂ ಬದಲಾವಣೆ ಬೇಕು. ಸ್ವಯಂಶಿಸ್ತು ಅನಿವಾರ್ಯ. ಮಾರುಕಟ್ಟೆಯಲ್ಲಿ ದರ ನಿಗದಿಪಡಿಸುವುದು, ವಾಹನ ಬಾಡಿಗೆ ದರ ನಿಗದಿಪಡಿಸುವುದರಿಂದ ಹಿಡಿದು ಬ್ಯಾಂಕಿನಲ್ಲಿ ಹಣ ವಹಿವಾಟು ನಡೆಸುವವರೆಗೆ ನಾವು ಪಾರದರ್ಶಕ ನಡೆಯನ್ನು ಅನುಸರಿಸಿದರೆ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ.ನಾವೂ ಬದುಕಬೇಕು, ಇನ್ನೊಬ್ಬರನ್ನೂ ಬದುಕಲು ಬಿಡಬೇಕು. ನಾವೂ ಬೆಳೆಯಬೇಕು, ಇನ್ನೊಬ್ಬರನ್ನು ಬೆಳೆಸಬೇಕು ಎಂಬ ತತ್ವ ಪಾಲಿಸಿದರೆ ಮಾತ್ರ ಬದಲಾವಣೆ ಸಾಧ್ಯ.

ಡಿಜಿಟಲ್ ಕ್ರಾಂತಿ ಬಲವಂತವಾಗಿ ನಮ್ಮನ್ನು ಶಿಸ್ತಿಗೆ ಒಳಪಡಿಸಬಹುದು. ಹಣಕಾಸಿನ ವಹಿವಾಟಿಗೆ ಏಕರೂಪತೆ ತರಬಹುದು. ಆದರೆ ನಾವೇ ಮಾರ್ಗಸೂಚಿಗಳನ್ನು ಹಾಕಿಕೊಂಡರೆ ಡಿಜಿಟಲ್ ವಹಿವಾಟಿಗೇ ಸವಾಲೆಸೆಯಬಹುದು.

ಇದು ನಮ್ಮ ಕೈಯಲ್ಲೇ ಇದೆ.

ಜಾಹೀರಾತು
Harish Mambady

ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.