ವಿಶೇಷ ವರದಿ

ಬಂಟ್ವಾಳಕ್ಕೆ ಹೊಸರೂಪ ಸಿಗಲಿದೆಯಾ?

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜಗದೀಶ್, ಸರಿಯಾಗಿ ಹದಿನೈದು ದಿನಗಳಗೊಮ್ಮೆ ಬಂಟ್ವಾಳಕ್ಕೆ ಯಾಕೆ ಬರುತ್ತಿದ್ದಾರೆ?

ಕಳೆದ ಬಾರಿ ನವೆಂಬರ್ 9ರಂದು ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಕೂರಿಸಿ ಒಂದಷ್ಟು ಅಭಿವೃದ್ಧಿ ಕಾರ್ಯಗಳ ಬಗ್ಗೆ ಗುರುತು ಹಾಕಿ ಹೋದವರು ಮತ್ತೆ ಬರೋದೇ ಇಲ್ಲ ಎಂದುಕೊಂಡವರೇ ಜಾಸ್ತಿ. ಏಕೆಂದರೆ ಬಂಟ್ವಾಳದ ಹಿಂದಿನ ಚರಿತ್ರೆಯಲ್ಲಿ ಜಿಲ್ಲಾಧಿಕಾರಿಯೊಬ್ಬರು ತಮ್ಮ ಅಧಿಕಾರವನ್ನು ಸದುಪಯೋಗಪಡಿಸಿಕೊಂಡು, ಅಭಿವೃದ್ಧಿ ಮಂತ್ರ ಜಪಿಸಿದ ಉದಾಹರಣೆಯೇ ಇಲ್ಲ ಎನ್ನುವಷ್ಟು ಅತಿ ವಿರಳ.

ಕಳೆದ ಬಾರಿ ಬಂದವರು ಮುಖ್ಯಾಧಿಕಾರಿ ಕೆ.ಸುಧಾಕರ್ ಅವರಿಗೆ ಕೆಲ ಜವಾಬ್ದಾರಿ ವಹಿಸಿ, ಇಡೀ ಜವಾಬ್ದಾರಿಯನ್ನು ಪ್ರೊಬೆಷನರಿ ಐಎಎಸ್ ಅಧಿಕಾರಿ ಗಾರ್ಗಿ ಜೈನ್ ಕೈಗೆ ಒಪ್ಪಿಸಿದ್ದರು. ವಾರದೊಳಗೆ ಪ್ರಗತಿ ವರದಿ ನನ್ನ ಕೈಯಲ್ಲಿರಬೇಕು ಎಂದು ಹೇಳಿಹೋದವರು ಮತ್ತೆ ಬಂದದ್ದು ನವೆಂಬರ್ 25ರಂದು ಶುಕ್ರವಾರ.

ಬಂದವರೇ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಕಳೆದ ಬಾರಿ ಹೇಳಿದ ಎಲ್ಲ ಪಾಯಿಂಟ್ ಗಳೂ ಅಧಿಕಾರಿಗಳ ಕೈಯಲ್ಲಿತ್ತೋ ಗೊತ್ತಿಲ್ಲ, ಆದರೆ ಜಿಲ್ಲಾಧಿಕಾರಿಗಳ ನೆನಪಲ್ಲಂತೂ ಇತ್ತು. ಈ ಬಾರಿಯೂ ಇಡೀ ಬಂಟ್ವಾಳದ ನಕ್ಷೆಯನ್ನೇ ಬದಲಿಸುವ ಸೂತ್ರವೊಂದನ್ನು ಜಿಲ್ಲಾಧಿಕಾರಿ ಜಗದೀಶ್ ವಿವರಿಸಿ ಹೋಗಿದ್ದಾರೆ.

ಸಚಿವ ಬಿ.ರಮಾನಾಥ ರೈ ನಿರ್ದೇಶನದ ಮೇರೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಚಿತ್ರಣವನ್ನೇ ಬದಲಿಸುವ ನಿಟ್ಟಿನಲ್ಲಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಕೈಗೊಂಡ ಕಾರ್ಯಗಳ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸುತ್ತೇನೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೂ ಪರಸ್ಪರ ಸಹಕರಿಸಬೇಕು, ಸುಂದರ ಬಂಟ್ವಾಳಕ್ಕೆ ಕೈಜೋಡಿಸಬೇಕು ಎಂದು ಶುಕ್ರವಾರ ಪ್ರಗತಿಪರಿಶೀಲನೆ ಸಂದರ್ಭ ಜಿಲ್ಲಾಧಿಕಾರಿ ಹೇಳುವ ಮೂಲಕ ಯಾರ ಮುಲಾಜಿಗೂ ಬಗ್ಗುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಎಲ್ಲ ಅಂದುಕೊಂಡಂತೆ ಆದರೆ ಇನ್ನು ಕೆಲವು ವರ್ಷಗಳಲ್ಲಿ ಬಂಟ್ವಾಳ, ಬಿ.ಸಿ.ರೋಡಿನ ಚಿತ್ರಣವೇ ಬದಲಾಗಲಿದೆ.

ಜಿಲ್ಲಾಧಿಕಾರಿ ಮೀಟಿಂಗ್ ನಡೆಸಿದ ಮೇಲೆ ನಡೆಯುತ್ತಿರುವ ಪ್ರಕ್ರಿಯೆಗಳನ್ನು ಗಮನಿಸಿದರೆ ಬದಲಾವಣೆಯ ಪರ್ವ ಸನ್ನಿಹಿತವಾಗಲಿದೆಯೇ, ಅಥವಾ ಇದಕ್ಕೂ ಅಡಚಣೆಗಳು ಬರಲಿವೆಯೇ?

ಕಾಲವೇ ನಿರ್ಣಯಿಸಬೇಕು.ಬಂಟ್ವಾಳ ಪುರಸಭೆಗಂತೂ ಬೇಕು ತುರ್ತು ಪರಿಹಾರ.

ಶುಕ್ರವಾರ ಮೀಟಿಂಗ್ ನಲ್ಲಿ ಏನೇನಾಗಿತ್ತು ಇಲ್ಲಿದೆ ಮಾಹಿತಿ…

  • ಇನ್ನೊಂದು ವಾರದಲ್ಲಿ ಬಂಟ್ವಾಳ ಪೇಟೆ ರಸ್ತೆ ಅಗಲಗೊಳಿಸುವ ಪ್ರಕ್ರಿಯೆಗೆ ಚಾಲನೆ ದೊರಕಲಿದೆ.
  • ಸೂಚಿಸಲಾದ ಕೆಲವೊಂದು ಕಾರ್ಯಗಳು ಸಮರ್ಪಕವಾಗಿ ಕಾರ್ಯರೂಪಕ್ಕೆ ಬಾರದಿರುವುದಕ್ಕೆ ಜಿಲ್ಲಾಧಿಕಾರಿ ಅಸಮಾಧಾನ
  • ಸಚಿವ ಬಿ.ರಮಾನಾಥ ರೈ ನಿರ್ದೇಶನದ ಮೇರೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಚಿತ್ರಣವನ್ನೇ ಬದಲಿಸುವ ನಿಟ್ಟಿನಲ್ಲಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಕೈಗೊಂಡ ಕಾರ್ಯಗಳ ಕುರಿತು ಪ್ರಗತಿ ಪರಿಶೀಲನೆ ಸಭೆ
  • ಪೇಟೆ ರಸ್ತೆ ಅಗಲಗೊಳಿಸುವ ಹಂತದಲ್ಲಿ ಧಾರ್ಮಿಕ ಕೇಂದ್ರಗಳಿರಲಿ, ವಾಸದ ಮನೆಗಳಿರಲಿ, ಅತಿಕ್ರಮಣಗಳಾಗಿದ್ದಲ್ಲಿ ಯಾವುದೇ ಮುಲಾಜಿಲ್ಲದೆ ಅವುಗಳನ್ನು ತೆರವುಗೊಳಿಸಲಾಗುವುದು
  • ಅತಿಕ್ರಮಣಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದಿಲ್ಲ. ಬಿಲ್ಡಿಂಗ್ ಸೆಟ್ ಬ್ಯಾಕ್, ಅತಿಕ್ರಮಣ, ರೋಡ್ ಮಾರ್ಜಿನ್ ನಿಂದ ಸೆಟ್ ಬ್ಯಾಕ್ ಇದ್ದುದನ್ನು ತೆರವುಗೊಳಿಸಿ. ಯಾವುದೇ ಅಡೆತಡೆಗಳಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ. ವಾರದೊಳಗೆ ಕೆಲಸ ಆರಂಭಿಸಬೇಕು.
  • ಬಸ್ ಬೇ 15 ದಿನಗಳೊಳಗೆ ಕೈಕಂಬದಲ್ಲಿ ನಿರ್ಮಾಣವಾಗಬೇಕು. ಸರ್ವೀಸ್ ರಸ್ತೆಯಲ್ಲೂ ಬಸ್ ಬೇ ನಿರ್ಮಾಣಕ್ಕೆ ಕಾರ್ಯಪ್ರವೃತ್ತರಾಗಬೇಕು.
  • ಪಾರ್ಕಿಂಗ್ ಗೆ ಜಾಗ ಗುರುತಿಸಿ ಸರ್ವೇ ನಡೆಸಬೇಕು .
  • ಬಿ.ಸಿ.ರೋಡಿನಲ್ಲಿರುವ ಎಲ್ಲ ಅಂಗಡಿಗಳ ಎದುರು ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಎರಡು ಬಕೆಟ್ ಗಳನ್ನು ಇಡುವಂತೆ ಸೂಚಿಸಬೇಕು. ಅದರಲ್ಲಿ ತ್ಯಾಜ್ಯವನ್ನು ಅವರು ಹಾಕಲೇಬೇಕು. ಇದನ್ನು ಪಾಲಿಸದೇ ಇದ್ದಲ್ಲಿ, ಅಂಗಡಿಗಳ ಲೈಸೆನ್ಸ್ ರದ್ದುಗೊಳಿಸುವಂಥ ಕಠಿಣ ಕ್ರಮ ಕೈಗೊಳ್ಳಬೇಕು.
  • ಬಿ.ಸಿ.ರೋಡಿನ ಕೈಕುಂಜ ರಸ್ತೆಯಲ್ಲಿ ಮಾರ್ಕ್ ಮಾಡಿದ ಸ್ಥಳವನ್ನು ಗುರುತಿಸಿ, ಪಾರ್ಕಿಂಗ್ ಗೆ ಸೂಕ್ತ ಜಾಗ ಕಲ್ಪಿಸಬೇಕು. ಮಲ್ಟಿಲೆವೆಲ್ ಪಾರ್ಕಿಂಗ್ ಗೆ ಅನುಕೂಲವಾಗುವಂತೆ ವ್ಯವಸ್ಥೆ ರೂಪಿಸಬೇಕು.
  • ಕೈಕುಂಜೆ ರಸ್ತೆ ಮೂಲನಕ್ಷೆ ಬದಲಿಸಿ ರಸ್ತೆ ನಿರ್ಮಿಸಲಾಗಿದೆ, ಹಾಗೂ ಇದು ಕಳಪೆಯಾಗಿರುವ ಕುರಿತು ಲೋಕಾಯುಕ್ತ ನ್ಯಾಯಾಲಯದಲ್ಲಿ ತನಿಖಾ ಹಂತದಲ್ಲಿದೆ, ಈ ಕುರಿತು ತನಿಖೆಗೆ ಸೂಚನೆ.
  • ಜನಪ್ರತಿನಿಧಿಗಳಾದ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯರಾದ ಎ.ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಮಹಮ್ಮದ್ ಶರೀಫ್, ಸದಾಶಿವ ಬಂಗೇರ, ವಾಸು ಪೂಜಾರಿ, ಪ್ರವೀಣ ಬಿ, ಚಂಚಲಾಕ್ಷಿ, ಮೊನೀಶ್ ಆಲಿ, ವಸಂತಿ, ಬಿ.ಮೋಹನ್, ಜಗದೀಶ ಕುಂದರ್, ಗಂಗಾಧರ್, ಭಾಸ್ಕರ ಟೈಲರ್, ನಾಮನಿರ್ದೇಶನ ಸದಸ್ಯ ಪ್ರವೀಣ್ ಕಿಣಿ, ಅಧಿಕಾರಿಗಳಾದ ಐಎಎಸ್ ಅಧಿಕಾರಿ ಗಾರ್ಗಿ ಜೈನ್, ಮುಖ್ಯಾಧಿಕಾರಿ ಕೆ.ಸುಧಾಕರ್, ತಹಸೀಲ್ದಾರ್ ಪುರಂದರ ಹೆಗ್ಡೆ, ಯೋಜನಾ ನಿರ್ದೇಶಕ ಪ್ರಸನ್ನ , ಬಂಟ್ವಾಳ ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಉಮೇಶ್ ಭಟ್, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾರಾಯಣ ಭಟ್ , ಹೆದ್ದಾರಿ ಇಲಾಖೆಯ ಇಂಜಿನಿಯರ್ ಅಜಿತ್ ಸಹಿತ ವಿವಿಧ ಇಲಾಖೆಯ ಪ್ರಮುಖ ಅಧಿಕಾರಿಗಳ ಉಪಸ್ಥಿತಿ.
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.