ಬಂಟ್ವಾಳ

ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನಿಂದ ಕೇರಳ ಸರಕಾರಿ ಶಾಲೆ ಅಧ್ಯಯನ

ಬಂಟ್ವಾಳ: ಸರಕಾರಿ ಶಾಲೆಗಳನ್ನು ಉಳಿಸಿ, ದೇಶಾದ್ಯಂತ ಏಕರೂಪದ ಶಿಕ್ಷಣವನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಕಳೆದ ಒಂದೂವರೆ ವರ್ಷದಿಂದ ಶೈಕ್ಷಣಿಕ ಆಂದೋಲನ ನಡೆಸುತ್ತಿರುವ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇರಳ ರಾಜ್ಯದಲ್ಲಿನ ಸರಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆಯ ಅಧ್ಯಯನ ನಡೆಸಿದೆ.

ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಕ್ಲಬ್‌ನ ಪದಾಧಿಕಾರಿಗಳ ತಂಡ ಎರಡು ದಿನಗಳ ಕಾಲ ಕೇರಳ ರಾಜ್ಯದ ಕೆಲವು ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಅಲ್ಲಿನ ಸರಕಾರ, ಪೋಷಕರು ಹಾಗೂ ಶಿಕ್ಷಕರ ಸಂಘ ಹಾಗೂ ಸಮುದಾಯದ ಕೊಡುಗೆಯ ಬಗ್ಗೆ ತಂಡ ಅಧ್ಯಯನ ನಡೆಸಿದೆ. ಕೊಲ್ಲಂ ಜಿಲ್ಲೆಯ ಪಾರುಪಳ್ಳಿ ಕಿರಿಯ ಪ್ರಾಥಮಿಕ ಶಾಲೆ, ಕಲ್ಲುವತ್‌ಕಲ್ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆ, ಮೈಲಕಾಡು ಹಿರಿಯ ಪ್ರಾಥಮಿಕ ಶಾಲೆ, ಚರಿಕೆರಾ ಶಾಲೆ, ಪೂಥಕುಲಂ ಕಿರಿಯ ಪ್ರಾಥಮಿಕ ಶಾಲೆಗಳನ್ನು ತಂಡ ಸಂದರ್ಶಿಸಿದೆ.

ಜಾಹೀರಾತು

ಸಮುದಾಯ ಸಹಭಾಗಿತ್ವ ಸಕ್ರಿಯ

ಕೇರಳದ ಶಾಲೆಗಳ ಅಭಿವೃದ್ದಿಯಲ್ಲಿ ಸಮುದಾಯದ ಪಾತ್ರ ಮಹತ್ತರವಾಗಿದೆ. ಸಮುದಾಯದ ಕೊಡುಗೆಯಿಂದಾಗಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಶಾಲೆಗಳಲ್ಲಿ ಕೈಗೊಳ್ಳಲಾಗಿದೆ. ದಿನದ 24 ಗಂಟೆಗಳ ಕಾಲ ಸೆಕ್ಯೂಟರಿಟಿ ಗಾರ್ಡ್‌ಗಳನ್ನು ನಿಯೋಜಿಸಲಾಗಿದ್ದು ಪಿಟಿಎ ಇದರ ಜವಬ್ದಾರಿ ನಿಯೋಜಿಸುತ್ತದೆ.  ಶಾಲೆಗಳ ಅಭಿವೃದ್ದಿಯ ಜವಬ್ದಾರಿಯನ್ನು ಪಂಚಾಯಿತಿಗಳಿಗೆ ವಹಿಸಿ ಕೊಡಲಾಗಿದೆ. ಪಂಚಾಯಿತಿನ ಒಟ್ಟು ಅನುದಾನದ ಶೇ. ೨೦ನ್ನು ಶಾಲೆಗಳ ಅಭಿವೃದ್ದಿಗೆ ವಿನಿಯೋಗಿಸಲಾಗುತ್ತಿದೆ.

ಶಾಸಕರ ದತ್ತು ಶಾಲೆಗಳು

ಇಲ್ಲಿನ ಪ್ರತಿಯೊಬ್ಬ ಶಾಸಕ ಕನಿಷ್ಟ ೫ ಸರಕಾರಿ ಶಾಲೆಗಳನ್ನು ದತ್ತು ಪಡೆದು ಸಮಗ್ರ ಅಭಿವೃದ್ದಿ ಪಡಿಸಬೇಕು. ಈ ನಿಟ್ಟಿನಲ್ಲಿ ಇಲ್ಲಿನ ಚಾತನೂರು ವಿಧಾನಸಭಾ ಕ್ಷೇತ್ರದ ಶಾಸಕ ಜಯಲಾಲ್ ಅವರು ದತ್ತುಪಡೆದುಕೊಂಡ ೫ ಸರಕಾರಿ ಶಾಲೆಗಳು ಮಾದರಿ ಶಾಲೆಗಳಾಗಿ ಗುರುತಿಸಿಕೊಂಡಿವೆ. ಶಾಲೆಯ ಎಲ್ಲಾ ಕೊಠಡಿಗಳಿಗೆ ಟೈಲ್ಸ್ ಅಳವಡಿಕೆ, ಎಲ್‌ಇಡಿ ಪ್ರೋಜೆಕ್ಟರ್,  ಪ್ರೊಜೆಕ್ಟರ್ ಕೊಠಡಿಗಳಿಗೆ ಹವಾನಿಯಂತ್ರಕ, ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಶಾಲಾ ಆವರಣವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತಗೊಳಿಸಲಾಗಿದೆ.

ಸರಕಾರಿ ಶಾಲೆಯಲ್ಲಿಯೇ ಆಂಗ್ಲಮಾಧ್ಯಮ

ಖಾಸಗಿ ಶಾಲೆಗಳ ಪೈಪೋಟಿ ತಡೆಯಲು ಹಾಗೂ  ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು 15 ವರ್ಷಗಳ ಹಿಂದೆಯೇ ಸರಕಾರಿ ಶಾಲೆಗಳಲ್ಲಿ ಪ್ರತ್ಯೇಕ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗಿದೆ.  ಇದರಿಂದಾಗಿ ಇತರ ಖಾಸಗಿ ಶಾಲೆಗಳಷ್ಟೇ ಪ್ರಾಮುಖ್ಯತೆ ಸರಕಾರಿ ಶಾಲೆಗಳಿಗೂ ಇದೆ. ಪ್ರತೀ ಸರಕಾರಿ ಶಾಲೆಯಲ್ಲೂ 300 ಕ್ಕೆ ಕಡಿಮೆ ಇಲ್ಲದಂತೆ ವಿದ್ಯಾರ್ಥಿಗಳಿದ್ದಾರೆ. ಬಹುತೇಕ ಶಿಕ್ಷಕರು, ಸರಕಾರಿ ನೌಕರರು, ಖಾಸಗಿ ಶಾಲೆಯ ಶಿಕ್ಷಕರೂ ಕೂಡ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುತ್ತಿದ್ದಾರೆ. ಶಾಸಕರ ಮಗನೂ ಸರಕಾರಿ ಶಾಲೆಯಲ್ಲಿ ವಿದ್ಯಭ್ಯಾಸ ನಡೆಸುವುದು ಇಲ್ಲಿನ ವಿಶೇಷ.  ಕೇರಳ ಸರಕಾರಿ ಶಾಲೆಗಳಿಗೆ ಭೇಟಿ ನೀಡಿದ ತಂಡದಲ್ಲಿ ದುರ್ಗಾಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್, ಕಾರ್ಯದರ್ಶಿ ನವೀನ್, ಸದಸ್ಯರಾದ ವಿಠಲ್, ಮನೋಹರ್, ರಂಜಿತ್ ಹಾಜರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts