ಒಂದೆಡೆ ಮಳೆಯೂ ಇಲ್ಲ. ಇನ್ನೊಂದೆಡೆ ಆರ್ಥಿಕ ಸಂಕಷ್ಟ. ಇವೆಲ್ಲದರ ಮಧ್ಯೆ ಬರಬಾರದೆಂದರೂ ಬರಗಾಲ ಎಡಗಾಲಿಟ್ಟೇ ಪ್ರವೇಶಿಸಲು ಹೊಂಚು ಹಾಕಿ ಕುಳಿತಿದೆ…..
ನೆನಪಿದೆಯಾ?
ಜುಲೈ ಬಂತೆಂದರೆ ಒಂದೆರಡು ದಿನವಾದರೂ ಶಾಲೆಗೆ ರಜೆ ಸಿಗಲೇಬೇಕು. ಥಂಡಿ ಥಂಡಿ ವಾತಾವರಣ, ಜಡಿಮಳೆಯಲ್ಲಿ ನೆನೆದು ನದಿ ಬದಿಗೆ ಹೋಗುವ ಉತ್ಸಾಹ. ನದಿ ತೀರದ ಜನರಿಗೆ ಯಾವಾಗ ನಮ್ಮ ಮನೆ, ತೋಟಕ್ಕೆ ನೀರು ನುಗ್ಗಿಬಿಡುತ್ತದೋ ಎಂಬ ಆತಂಕ.
ಕುಂಭದ್ರೋಣ ಮಳೆ ಬಂತೆಂದರೆ ನದಿ ಉಕ್ಕಿ ಹರಿದ ಮೇಲಷ್ಟೇ ನಿಲ್ಲುತ್ತದೆ ಎಂಬ ಮಾತು. ಕಳೆದ ವರ್ಷದವರೆಗೂ ಹೀಗಿತ್ತು.
ಈ ವರ್ಷ ತುಳುವಿನ ಬೊಳ್ಳ, ಕನ್ನಡದ ನೆರೆ ಬರಲೇ ಇಲ್ಲ. ನದಿ ಉಕ್ಕಿ ಹರಿಯಲೇ ಇಲ್ಲ. ಈಗ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಪರಿಸರದಲ್ಲಿ ನೇತ್ರಾವತಿ ಮೈದುಂಬಿದಂತೆ ಕಂಡರೆ ಅದು ತುಂಬೆ ವೆಂಟೆಡ್ ಡ್ಯಾಂನ ಕೃಪಾಕಟಾಕ್ಷ.
ಹೌದು. ನೇತ್ರಾವತಿ ಸೊರಗಿದೆ. ಈಗಲೇ ಸೆಖೆ ಆರಂಭವಾಗಿದೆ. ಬೆಳಗ್ಗೆಯಷ್ಟೇ ಚಳಿ, ಮಧ್ಯಾಹ್ನವಾದರೆ ಏಪ್ರಿಲ್ ತಿಂಗಳು ನೆನಪಾಗುವಷ್ಟು ಬೆವರು.
ಇದೇ ಮುಂದುವರಿದರೆ ಇನ್ನು ಹೇಗೆ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ.
ಒಂದೆಡೆ ನೋಟಿಗೆ ಬರ, ಇನ್ನೊಂದೆಡೆ ಮಳೆಗೆ ಬರ ಇವೆಲ್ಲದರ ಮಧ್ಯೆ ರೈತ ಕಂಗಾಲಾಗಿ ಕುಳಿತರೆ, ಪಟ್ಟಣವಾಸಿಯೂ ತಲೆಮೇಲೆ ಕೈಹೊತ್ತು ಕುಳಿತಿರಬೇಕಾದ ಸ್ಥಿತಿ. ಬರಗಾಲ ಎಡಗಾಲಿಟ್ಟು ಪ್ರವೇಶಿಸುತ್ತಿದೆ.
ತುಂಬೆ ವೆಂಟೆಡ್ ಡ್ಯಾಂನಲ್ಲ ಸುಮಾರು ನಾಲ್ಕು ಮೀಟರಿನಷ್ಟು ನೀರಿದೆ. ಅದೇನಿದ್ದರೂ ನಿಲ್ಲಿಸುವುದಷ್ಟೇ. ಹೆಚ್ಚು ಕಮ್ಮಿ ಆಗಲೂ ಬಹುದು. ಆದರೆ ನೀರಿನ ಹರಿವು ಕಡಿಮೆಯಾಗುತ್ತಿರುವುದಂತೂ ಹೌದು. ಇದೇ ಮುಂದುವರಿದರೆ, ಒಂದೆರಡು ತಿಂಗಳಲ್ಲೇ ನೀರಿಗೆ ಹಾಹಾಕಾರ ಏಳುವ ಸಂಭವ ಇದೆ.
ಈತನ್ಮಧ್ಯೆ ತುಂಬೆ ವೆಂಟೆಡ್ ಡ್ಯಾಂಗೆ ಮುಳುಗಡೆಯಾಗಲಿರುವ 47 ಎಕರೆ ಭೂಮಿ ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ ಇನ್ನೂ ಗೊಂದಲ ಇದೆ. ಏಕೆಂದರೆ ಮುಳುಗಡೆಯಾಗುವ ಜಮೀನು ಯಾರ್‍ಯಾರಿಗೆ ಸೇರಿದ್ದು ಎಂಬ ಸಂತ್ರಸ್ತ ರೈತ ಮುಖಂಡರ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಕಳೆದ ಮೇ ತಿಂಗಳಲ್ಲಿ ಮಂಗಳೂರಿನ ಜನರು ನೀರಿಗಾಗಿ ಅಕ್ಷರಶ: ಪರದಾಡುತ್ತಿದ್ದುದು ಎಲ್ಲರಿಗೂ ಗೊತ್ತು. ಇದಾದ ಬಳಿಕ ಜಲಾಂದೋಲನ ನಡೆಸುವ ಮಾತು ಕೇಳಿಬಂತು. ಆದರೆ ಒಂದೆರಡು ಹನಿ ಮಳೆ ಬಿದ್ದ ಬಳಿಕ ಅದು ಮರೆತೇ ಹೋಯಿತು. ಈಗ ಮಿತವಾಗಿ ನೀರು ಬಳಸಿ ಮಾತು ಸ್ಲೋಗನ್ ಗಷ್ಟೇ ಉಳಿಯಿತೇ ಎಂಬಂತಾಗಿದೆ. ಏಕೆಂದರೆ ಸಮಾರಂಭಗಳಲ್ಲಿ ಯಥೇಚ್ಛ ನೀರು ಪೋಲು ಆಗುತ್ತಲೇ ಇದೆ. ಭಾಷಣಗಳನ್ನು ಕೇಳಿದವರು ಅಲ್ಲೇ ಮರೆತುಹೋಗುತ್ತಾರೆ. ಜಲಜಾಗೃತಿಗಾಗಿ ಮರುಸಿದ್ಧತೆ ಮಾಡಿಕೊಳ್ಳಬೇಕಾಗಿದೆ.
ನೋಟು ಪಡೆಯಲು ಮೈಲುದ್ದದ ಕ್ಯೂ ನಿಲ್ಲುವ ಸಾರ್ವಜನಿಕರು, ನೀರಿಗಾಗಿ ಕ್ಯೂ ನಿಲ್ಲುವ ಪರಿಸ್ಥಿತಿ ಬರಬಹುದೇ?
ಹಾಗಾಗದಿರಲಿ.
ಏಕೆಂದರೆ ಈ ವರ್ಷದ ಮಳೆಗಾಲ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಭವಿಷ್ಯದ ಮುನ್ಸೂಚನೆ. ಜಲಜಾಗೃತಿಗೆ ಸಕಾಲ.
ಇದು ಆರಂಭವಷ್ಟೇ…
ಚಿತ್ರ: ಕಿಶೋರ್ ಪೆರಾಜೆ
…………………………………………………………
ಈ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿಮಗೆ ಬಂಟ್ವಾಳ ನ್ಯೂಸ್ ವೇದಿಕೆ ಕಲ್ಪಿಸುತ್ತದೆ. ನಿಮ್ಮ ಅಭಿಪ್ರಾಯವನ್ನು 50 ಶಬ್ದಗಳ ಮಿತಿಯಲ್ಲಿ ಬರೆದು, ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಈ ವಾಟ್ಸಾಪ್ ನಂಬರ್ ಗೆ ಕಳುಹಿಸಿ: 9448548127 ಅಥವಾ ಈ ಮೈಲ್ ವಿಳಾಸ: bantwalnews@gmail.com
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…