ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳದಲ್ಲಿ ಆಲ್‌ಕಾರ್ಗೋ ಲಾಜಿಸ್ಟಿಕ್ ಲಿಮಿಟೆಡ್ ಸಂಸ್ಥೆ ಆಶ್ರಯದಲ್ಲಿ 2016-17ನೇ ಸಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯ 93 ಶಿಕ್ಷಣ ಸಂಸ್ಥೆಗಳ ಅರ್ಹ 1606 ವಿದ್ಯಾರ್ಥಿಗಳಿಗೆ ಒಟ್ಟು 50,40,000 ರೂ. ಮೊತ್ತದ ವಿದ್ಯಾರ್ಥಿವೇತನವನ್ನು ವಿತರಣೆ ನಡೆಯಿತು.
ಆಲ್‌ಕಾರ್ಗೋ ಸಂಸ್ಥೆಯ ಮಂಗಳೂರು ವಿಭಾಗದ ಪ್ರಬಂಧಕ ನಕ್ರೆ ಸುರೇಂದ್ರ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ತಾವು ಪಡೆದ ವಿದ್ಯಾರ್ಥಿವೇತನವನ್ನು ಬದ್ಧತೆಯಿಂದ ಉಪಯೋಗಿಸಿಕೊಂಡು, ಸೂಕ್ತ ಮಾಹಿತಿಯನ್ನು ಸಕಾಲದಲ್ಲಿ ಸಂಸ್ಥೆಗೆ ಒದಗಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಸರಕು ಸಾಗಾಣಿಕೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿರುವ ಬಂಟ್ವಾಳ ಮೂಲದ ಡಾ.ಶಶಿಕಿರಣ್ ಶೆಟ್ಟಿಯವರು ಕಠಿಣ ಪರಿಶ್ರಮದ ಮೂಲಕ ಕಟ್ಟಿ ಬೆಳೆಸಿರುವ ಮುಂಬಯಿ ಆಲ್ ಕಾರ್ಗೋ ಲಾಜಿಸ್ಟಿಕ್ ಲಿಮಿಟೆಡ್ ಸಂಸ್ಥೆಯು ಉದ್ಯಮ ಕ್ಷೇತ್ರದಲ್ಲಿ ಇಂದು ಅಂತರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದು, ಸಾಮಾಜಿಕ, ಆರೋಗ್ಯ ಹಾಗೂ ಶೈಕ್ಷಣಿಕ ಸೇವಾ ಕಾರ್ಯಗಳಲ್ಲೂ ತನ್ನನ್ನು ತೊಡಗಿಸಿಕೊಳ್ಳುವುದರ ಮೂಲಕ ಅಗ್ರಮಾನ್ಯ ಸಂಸ್ಥೆಯಾಗಿ ರೂಪುಗೊಳ್ಳುತ್ತಿದೆ ಎಂದರು.
ಮುಖ್ಯಅತಿಥಿ ಕಾರ್ಕಳ ಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ. ಪದ್ಮನಾಭ ಗೌಡ ಮಾತನಾಡಿ ವಿದ್ಯಾರ್ಥಿಗಳು ತಮ್ಮನ್ನು ಪೋಷಾಕು, ಸಿರಿವಂತಿಕೆಯ ಪ್ರದರ್ಶನದಿಂದ ಗುರುತಿಸಿಕೊಳ್ಳಲು ಪ್ರಯತ್ನಿಸದೆ, ತಮ್ಮ ಅಂತಃ ಶಕ್ತಿಯನ್ನು ಬೆಳೆಸಿಕೊಂಡು ಪ್ರತಿಭಾನ್ವಿತರಾಗಬೇಕು. ಮುಂದೆ ಬದುಕಿನಲ್ಲಿ ಯಶಸ್ಸನ್ನು ಪಡೆದಾಗ ಶಶಿಕಿರಣ್ ಶೆಟ್ಟಿಯವರಂತೆ ತನ್ನ ಆದಾಯದ ಸ್ವಲ್ಪ ಭಾಗವನ್ನು ಸಾಮಾಜಿಕ ಕಾರ್ಯಗಳಲ್ಲಿ ವಿನಿಯೋಗಿಸಬೆಕು ಎಂದು ಹೇಳಿದರು.
ಬಂಟ್ವಾಳ ಲಯನ್ಸ್ ಸೇವಾ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ. ವಸಂತ ವಿದ್ಯಾರ್ಥಿವೇತನ ವಿತರಿಸಿದರು.
ಬಿ.ಮೂಡ ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಯೂಸುಫ್ ವಿಟ್ಲ ಸ್ವಾಗತಿಸಿ, ವಂದಿಸಿದರು. ಉಪನ್ಯಾಸಕ ದಾಮೋದರ ಇ. ಕಾರ್ಯಕ್ರಮ ನಿರೂಪಿಸಿದರು.