ಬಂಟ್ವಾಳ: ಮಕ್ಕಳೇ ನಿಮಗೆ ಒಂದನೇ ತರಗತಿಯಿಂದಲೇ ಕನ್ನಡದ ಜೊತೆ ಇಂಗ್ಲೀಷ್ ಭಾಷೆ ಕಲಿಸುವ ಯೋಜನೆ ರೂಪಿಸಲಾಗಿದೆ. ಏನಂತೀರಿ?
ಹೀಗೆಂದು ಮಕ್ಕಳನ್ನು ಗ್ರಾಪಂ ಉಪಾಧ್ಯಕ್ಷ ಪ್ರಶ್ನಿಸಿದ್ದೇ ತಡ, ಮಕ್ಕಳು ಒಕ್ಕೊರಳಿನಿಂದ ನಮಗೆ ಕನ್ನಡ ಮಾಧ್ಯಮವೇ ಇಷ್ಟ. ಕನ್ನಡವನ್ನೇ ಕಲಿಸಿ ಎಂದು ಉತ್ತರಿಸಿದರು.
ಇದು ನಡೆದದ್ದು ಬ್ರಹ್ಮರಕೂಟ್ಲು ಶಾಲಾ ಆವರಣದಲ್ಲಿ ನಡೆದ ಕಳ್ಳಿಗೆ ಗ್ರಾಪಂನ ತಾತ್ಕಾಲಿಕ ಕಚೇರಿಯಲ್ಲಿ.
ಮಕ್ಕಳ ಗ್ರಾಮಸಭೆಗಾಗಿ ಸೇರಿದ್ದ ಮಕ್ಕಳನ್ನು ಉದ್ದೇಶಿಸಿ ಮಾತನಾಢಿದ ಗ್ರಾಪಂ ಉಪಾಧ್ಯಕ್ಷ ಪುರುಷ ಎನ್. ಸಾಲಿಯಾನ್, ಮುಂದಿನ ಶೈಕ್ಷಣಿಕ ವರ್ಷದಿಂದ ಬ್ರಹ್ಮರಕೂಟ್ಲು ಸರ್ಕಾರಿ ಶಾಲೆಯನ್ನು ಮೇಲ್ದರ್ಜೆಗೇರಿಸುವ ಆಶ್ವಾಸನೆ ಸಚಿವರಿಂದ ಲಭಿಸಿದ್ದು, 1ನೇ ತರಗತಿಯಿಂದಲೇ ಕನ್ನಡದ ಜೊತೆಗೆ ಆಂಗ್ಲ ಭಾಷೆಯನ್ನು ಕಲಿಸುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಪ್ರತಿ ವರ್ಷವೂ ಆಂಗ್ಲ ಮಾದ್ಯಮಕ್ಕಿಂತ ಕನ್ನಡ ಮಾದ್ಯಮ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸುತ್ತಿದ್ದು, ಮಕ್ಕಳನ್ನು ಸರ್ಕಾರಿ ಶಾಲೆಗೆ ಆಕರ್ಷಿಸುವ ನಿಟ್ಟಿನಲ್ಲಿ ಕನ್ನಡದ ಜೊತೆಗೆ ಇಂಗ್ಲೀಷ್ ಕಲಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ಕಳ್ಳಿಗೆ ಗ್ರಾಪಂ ಅಧ್ಯಕ್ಷೆ ರತ್ನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಚೈತ್ರ, ದೀಕ್ಷಿತಾ, ಪ್ರಜ್ಞಶ್ರೀ, ಶಶಿಧರ್ ಸಹಿತ ವಿವಿಧ ವಿದ್ಯಾರ್ಥಿಗಳು, ಶಿಕ್ಷಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಬ್ರಹ್ಮರಕೂಟ್ಲು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯನ್ನು ಸಚಿವರು ದತ್ತುಪಡೆದಿದ್ದಾರೆ. ಬರುವ ವರ್ಷದಿಂದ ಆಂಗ್ಲ ಮಾಧ್ಯಮವನ್ನು ಕಲಿಸುವ ಭರವಸೆ ನೀಡಿದ್ದಾರೆ. ಆದರೆ ಅದಕ್ಕೆ ಬೇಕಾದಂತಹ ಪೂರ್ವತಯಾರಿ ಇನ್ನೂ ನಡೆದಿಲ್ಲ. ಶಾಲಾ ಕಟ್ಟಡ ದುರಸ್ತಿಗೊಳಿಸಿಲ್ಲ, ಅಗತ್ಯ ಶಿಕ್ಷಕರನ್ನು ನೇಮಿಸಿಲ್ಲ. 1ರಿಂದ 8ನೇ ತರಗತಿ ವರೆಗೆ ಪ್ರಸ್ತುತ ಇರುವ ಶಿಕ್ಷಕರ ಸಂಖ್ಯೆ ಕೇವಲ 7. ಇದ್ದುದರಲ್ಲೇ ಸುಧಾರಿಸುವ ಯೋಚನೆ ಇದ್ದರೆ ದತ್ತುಪಡೆಯುವ ಅಗತ್ಯವೇನಿತ್ತು ಎಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಾಧವ ವಳವೂರು ಹೇಳಿದರು.
ಬ್ರಹ್ಮರಕೂಟ್ಲು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದ ಅಜ್ಜಿಬೆಟ್ಟು ಗ್ರಾಮದ ಓರ್ವ ವಿದ್ಯಾರ್ಥಿನಿ ಹಾಗೂ ನೆತ್ರಕೆರೆ ಶಾಲೆಯಲ್ಲಿ ಕಲಿಯುತ್ತಿದ್ದ ಬೆಂಜನಪದವಿನ ಇಬ್ಬರು ವಿದ್ಯಾರ್ಥಿಗಳು ಶಾಲೆಯನ್ನು ಅರ್ಧಕ್ಕೆ ತೊರೆದಿದ್ದು, ಎಷ್ಟೇ ಮನವೊಲಿಸಿದರು ಶಾಲೆಗೆ ಬರುತ್ತಿಲ್ಲ ಎಂದು ಮುಖ್ಯಶಿಕ್ಷಕಿಯರಾದ ಫ್ಲೋರಿನ್ ರೆಬೆಲ್ಲೋ ಹಾಗೂ ಗುಣರತ್ನ ಹೇಳಿದರು.
ನೆತ್ರಕೆರೆ ಸರ್ಕಾರಿ ಅನುದಾನಿತ ಶಾಲೆ, ತೊಡಂಬಿಲ ಸೇಕ್ರೇಟ್ ಹಾರ್ಟ್ ಶಾಲೆ, ಬ್ರಹ್ಮರಕೂಟ್ಲು ಸರ್ಕಾರಿ ಹಿ.ಪ್ರಾ. ಶಾಲೆ ಸೇರಿ ಒಟ್ಟು 100ಕ್ಕೂ ಅಧಿಕ ವಿದ್ಯಾರ್ಥಿಗಳು ಗ್ರಾಮಸಭೆಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮ ಕರಣಿಕ ರಾಜಶೇಖರ್, ಪಿಡಿಒ ಶಿವುಲಾಲ್ ಚವ್ಹಾಣ್, ಆರೋಗ್ಯ ಸಹಾಯಕಿ ಜಯಂತಿ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರ ಶ್ರೀಮತಿ ಇಂದಿರಾ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮಾಧವ ವಳವೂರು, ಶಿಕ್ಷಕಿಯರಾದ ಫ್ಲೋರಿನ್ ರೆಬೆಲ್ಲೋ, ಭಾರತಿ, ಗುಣರತ್ನಾ, ಎಡ್ನಾ ನ. ಡಿ’ಸೋಜ, ಹೇಮಲತಾ ಮುಂಡಾಜೆ, ಚಂಚಲಾಕ್ಷಿ ಜಾರಂದಗುಡ್ಡೆ, ಸುಮತಿ ತೊಡಂಬಿಲ, ರೇಖಾ ಮುಂಡಾಜೆ, ಪಂಚಾಯಿತಿ ಸದಸ್ಯರಾದ ಯಶೋಧಾ, ರೇವತಿ, ಸರಸ್ವತಿ, ವಿಜಯ್ ಡಿ’ಸೋಜಾ, ರಮೇಶ್, ಭಾಗೀರತಿ, ಮತ್ತಿತರರು ಉಪಸ್ಥಿತರಿದ್ದರು.