ವಿಟ್ಲ: 2000 ರೂಪಾಯಿ ಮುಖಬೆಲೆಯ ಕಲರ್ ಝೆರಾಕ್ಸ್ ಪ್ರತಿ ವಿಟ್ಲ ಸಮೀಪದ ಕೂಲಿ ಕಾರ್ಮಿಕರೊಬ್ಬರ ಕೈಸೇರಿದೆ. ಈ ಬಗ್ಗೆ ವಿಟ್ಲ ಪೊಲೀಸರಿಗೆ ದೂರು ನೀಡಲಾಗಿದೆ. ಇದರೊಂದಿಗೆ ಹೊಸ ನೋಟಿನ ನಕಲುಗಳು ಚಲಾವಣೆಯಾಗುತ್ತಿರುವ ದಂಧೆಯೊಂದು ನಡೆಯುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಪುಣಚ ಗ್ರಾಮದ ಎರ್ಮೆತೊಟ್ಟು ನಿವಾಸಿ ಕೃಷ್ಣಪ್ಪ ಸೋಮವಾರ ವಿಟ್ಲದ ಫೈನಾನ್ಸ್ ಒಂದಕ್ಕೆ ತೆರಳಿ ಉಂಗುರ ಅಡವಿಟ್ಟು 2000 ಮುಖಬೆಲೆಯ ನೋಟು ಪಡೆದಿದ್ದರು. ಅದಾದ ನಂತರ ಅವರು ವಿಟ್ಲದ ಪೆಟ್ರೋಲ್ ಪಂಪ್ ನಲ್ಲಿ ಚಿಲ್ಲರೆ ಕೇಳಿದರು. ಅಲ್ಲಿ ಸಿಗಲಿಲ್ಲ, ಬಳಿಕ ಪುಣಚ ಪೆಟ್ರೋಲ್ ಪಂಪ್ ನಲ್ಲಿ ಚಿಲ್ಲರೆ ಕೇಳಿದಾಗಲೂ ದೊರಕಲಿಲ್ಲ. ಪುಣಚದಲ್ಲಿರುವ ಎಂಎಸ್ ಐಎಲ್ ಮದ್ಯದಂಗಡಿಗೆ ತೆರಳಿ ಅಲ್ಲಿ ಮದ್ಯ ಖರೀದಿಸಿದರು .
ಅಲ್ಲಿಂದ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ, ಬೈಕಿನಲ್ಲಿ ಬಂದ ಇಬ್ಬರು ಮದ್ಯದಂಗಡಿ ಸಿಬ್ಬಂದಿ, ನೀವು ಕೊಟ್ಟ 2 ಸಾವಿರ ರೂ ನೋಟು ನಕಲಿಯಾಗಿದೆ ಎಂದು ಹೇಳಿ ಅದನ್ನು ಹಿಂದಿರುಗಿಸಿ ಮದ್ಯವನ್ನು ವಾಪಸ್ ಪಡೆದರು.
ಕೃಷ್ಣಪ್ಪ ಅವರು ಕಕ್ಕಾಬಿಕ್ಕಿಯಾದಾಗ, ಮದ್ಯದಂಗಡಿಯವರೇ ಖರ್ಚಿಗೆ ಹಣ ನೀಡಿ, ನೋಟು ಬದಲಾಯಿಸಲು ಸಲಹೆ ನೀಡಿದರು. ಅದಾದ ಬಳಿಕ ಕೃಷ್ಣಪ್ಪ, ಫೈನಾನ್ಸ್ ಗೆ ತೆರಳಿ, ವಿಚಾರಿಸಿದರು. ಆಗ ಫೈನಾನ್ಸ್ ನವರು ನಾವು ನೋಟನ್ನು ರಾಷ್ಟ್ರೀಕೃತ ಬ್ಯಾಂಕಿಂದ ಪಡೆದಿದ್ದೇವೆ. ನಮ್ಮಲ್ಲಿ ನಕಲಿ ನೋಟು ಬರಲು ಸಾಧ್ಯವೇ ಇಲ್ಲ ಎಂದರು.
ಇದರಿಂದ ಮತ್ತೆ ಆತಂಕಕ್ಕೊಳಗಾದ ಕೃಷ್ಣಪ್ಪ, ವಿಟ್ಲದ ಸಾರ್ವಜನಿಕರ ಸಹಾಯದೊಂದಿಗೆ ಪೊಲೀಸರಿಗೆ ಮಾಹಿತಿ ನೀಡಿದರು.
ವಿಟ್ಲ ಎಸೈ ಪ್ರಕಾಶ್ ದೇವಾಡಿಗ ಅವರೂ ಕೂಡಾ ಫೈನಾನ್ಸ್‌ನ ಸಿಸಿ ಕ್ಯಾಮಾರವನ್ನು ಪರಿಶೀಲಿಸಿದ್ದಾರೆ.
ನಕಲಿ ನೋಟುಗಳ ದೊಡ್ಡ ದಂಧೆ ವಿಟ್ಲದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದ್ದು ಸೂಕ್ತ ತನಿಖೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.