ಕೈಯಲ್ಲಿದ್ದ 500, 1000 ರೂ ನೋಟುಗಳು ಬದಲಾಗಿ 2000 ನೋಟುಗಳು ಬರುತ್ತಿರುವುದು ಈಗ ಹಳೇ ಸುದ್ದಿ. ಎಟಿಎಂಗಳ ಎದುರು ಇನ್ನೂ ಕ್ಯೂ ಇದೆ. ನೋಟಿಗಾಗಿ ಬ್ಯಾಂಕಿನ ಎದುರೂ ಸಾಲುಗಟ್ಟಿ ನಿಲ್ಲುವ ನೋಟ ಈಗ ಸಾಮಾನ್ಯ ಎಂಬಂತಿದೆ.
ಈಗ ಬ್ಯಾಂಕಿನಲ್ಲಿ ನಿಮ್ಮ ಅಕೌಂಟ್ ಇದ್ದರೆ ನೀವೇ ಅದಕ್ಕೆ ಹಣ ತುಂಬಬೇಕು, ಇನ್ನೊಬ್ಬರು ನಿಮ್ಮ ಹೆಸರಲ್ಲಿ ಹಣ ಹಾಕಿದರೆ ಅದನ್ನು ಬ್ಯಾಂಕಿನವರೇ ಸ್ವೀಕರಿಸಲು ಹಿಂದೇಟು ಹಾಕುತ್ತಾರೆ. ಅಲ್ಲಿಗೆ ಆರ್ಥಿಕ ಶಿಸ್ತಿನ ಒಂದು ಅಧ್ಯಾಯಕ್ಕೆ ಇಡೀ ವ್ಯವಸ್ಥೆ ತೆರೆದುಕೊಳ್ಳುತ್ತದೆ ಎಂದಾಯಿತು. ಆದರೆ ಇದಕ್ಕೆ ಜನಸಾಮಾನ್ಯ ಎಷ್ಟು ದಿನ ಕಾಯಬೇಕು ಎಂಬುದಕ್ಕೆ ಉತ್ತರ ಸ್ಪಷ್ಟವಾಗಿ ಇನ್ನೂ ದೊರಕಿಲ್ಲ.
ಇದೆಲ್ಲದರ ಮಧ್ಯೆ ನೋಟುಗಳನ್ನು ಉಪಯೋಗಿಸುವ ಬದಲು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಕೆಗೆ ಹೆಚ್ಚು ಒತ್ತು ನೀಡುವ ಕಾರ್ಯ ನಡೆಯುತ್ತಿದೆ. ಇದೇ ಸಂದರ್ಭ ಅಪರಿಚಿತರು ನಿಮ್ಮ ಮೊಬೈಲಿಗೆ ಕರೆ ಮಾಡಿ, ನಾನು ಬ್ಯಾಂಕಿನ ಅಧಿಕಾರಿ, ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ಬ್ಯಾಂಕ್ ಅಕೌಂಟ್ ವಿವರ, ಹೆಚ್ಚಿನ ಮಾಹಿತಿಗೆ ವಿಳಾಸವನ್ನು ಕೊಡಿ ಎಂದು ಕೇಳುವ ಧೂರ್ತರೂ ಇದ್ದಾರೆ. ಇದನ್ನು ನಂಬಿ ನೀವೇನಾದರೂ ಕೊಟ್ಟೀರೋ ಮೋಸ ಹೋದಂತೆ.
ಹೀಗಾಗಿಯೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಈ ಕುರಿತು ಎಚ್ಚರಿಕೆ ನೀಡಿದೆ. ಬ್ಯಾಂಕಿನವರು ಇಂಥ ಯಾವುದೇ ವಿಚಾರಗಳನ್ನು ಕೇಳುವುದಿಲ್ಲ. ಯಾರಿಗೂ ಖಾಸಗಿ ವಿಷಯಗಳನ್ನು ಕೊಡಬೇಡಿ. ದೂರವಾಣಿ ಕರೆ ಮಾಡಿದ ವ್ಯಕ್ತಿ ನಿಮಗೆ ಮೋಸ ಮಾಡುವ ಉದ್ದೇಶದಿಂದ ಕರೆ ಮಾಡಿರುತ್ತಾನೆ. ಎಚ್ಚರ ಎಂಬ ಸೂಚನೆ ನೀಡಿದೆ.