ಬಂಟ್ವಾಳ

ತ್ಯಾಜ್ಯ ಸಂಸ್ಕರಣಾ ಘಟಕ ಆರಂಭಕ್ಕೆ ಮುಹೂರ್ತ ಎಂದು?

ಬಂಟ್ವಾಳ: ಸಜಿಪನಡು ಗ್ರಾಮ ಕಂಚಿನಡ್ಕಪದವು ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಬಂಟ್ವಾಳ ಪುರಸಭೆಯ ತ್ಯಾಜ್ಯ ಸಂಸ್ಕರಣಾ ಘಟಕ ಕಾಮಗಾರಿ ಮತ್ತೆ ಪ್ರತಿಧ್ವನಿಸಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು.

ಮಂಗಳವಾರ 2016-17ನೇ ಸಾಲಿಗೆ ಬಂಟ್ವಾಳ ಪುರಸಭೆಯಲ್ಲಿ ಘನತ್ಯಾಜ್ಯ ನಿರ್ವಹಣೆ, ಬೀದಿ ಗುಡಿಸುವುದು, ಪ್ರಾಥಮಿಕ ತ್ಯಾಜ್ಯ ಸಂಗ್ರಹಣೆ, 2ನೇ ಹಂತದ ಸಾಗಣೆ ಕೆಲಸದ ಹೊರಗುತ್ತಿಗೆಯನ್ನು ತಯಾರಿಸುವ ಕುರಿತು ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿಮಾತನಾಡಿದ ಹಿರಿಯ ಸದಸ್ಯ ಎ.ಗೋವಿಂದ ಪ್ರಭು, ಪ್ರತಿ ಸಭೆಯಲ್ಲಿ ಕಂಚಿನಡ್ಕಪದವಿನ ಸಂಸ್ಕರಣಾ ಘಟಕ ನವೆಂಬರ್, ಡಿಸೆಂಬರ್ ವೇಳೆ ಕಾರ್ಯಾರಂಭಗೊಳ್ಳಲಿದೆ ಎಂದು ಮಾಹಿತಿ ನೀಡುತ್ತಿದ್ದಿರಿ. ಆದರೆ ಅದರ ಮುಂದುವರಿದ ಕಾಮಗಾರಿ ಕುರಿತಂತೆ ಇದುವರೆಗೆ ಟೆಂಡರ್ ಯಾರಿಗೆ ಆಗಿದೆ ಎಂಬ ಮಾಹಿತಿ ಸದಸ್ಯರಿಗಿಲ್ಲ. ಪ್ರತಿ ಸಭೆಯಲ್ಲೂ ಅದರ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರ ಬಗ್ಗೆ ನಾಲ್ವರು ಟೆಂಡರ್ ಗೆ ಅರ್ಜಿ ಸಲ್ಲಿಸಿದ್ದು ಅದು ಯಾರಿಗೆ ದೊರಕಿದೆ ಎಂದು ಇದುವರೆಗೂ ಮಾಹಿತಿ ಇಲ್ಲ. ಬುಧವಾರದೊಳಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಾಗುವುದು ಎಂದು ಮುಖ್ಯಾಧಿಕಾರಿ ಕೆ.ಸುಧಾಕರ್ ಪ್ರತಿಕ್ರಿಯಿಸಿದರು.

ಈ ಸಂದರ್ಭ ಮಾತನಾಡಿದ ಸದಸ್ಯೆ ಚಂಚಲಾಕ್ಷಿ, ತಂಞಳ್ ಎಂಬವರಿಗೆ ಟೆಂಡರ್ ಆಗಿದೆಯಂತೆ ನಿಮಗೆ ಗೊತ್ತಿಲ್ಲವೇ ಎಂದು ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು.

ಈಗಾಗಲೇ ಅಲ್ಲಿರುವ ಅಂಗನವಾಡಿ ಮತ್ತು ಶಾಲೆ ತೆರವುಗೊಳಿಸಿ, ಪ್ರತ್ಯೇಕ ವ್ಯವಸ್ಥೆಗೆ ಅನುದಾನ ಮೀಸಲಿಟ್ಟರೂ ಇನ್ನೂ ಕಾರ್ಯಪ್ರವೃತ್ತರಾಗದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಗೋವಿಂದ ಪ್ರಭು ಅಸಮಾಧಾನ ವ್ಯಕ್ತಪಡಿಸಿದರು.

ಅಂಗನವಾಡಿಯ ಮುಗ್ಧ ಮಕ್ಕಳನ್ನೇ ಮುಂದಿಟ್ಟುಕೊಂಡು ಸಾರ್ವಜನಿಕರು ಸಂಸ್ಕರಣಾ ಘಟಕ ಕಾಮಗಾರಿ ಆರಂಭಗೊಳ್ಳದಂತೆ ಪ್ರತಿಭಟನೆ ನಡೆಸುತ್ತಾರೆ., ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಣೆ ನಡೆಯುವುದಾದರೆ ಮಾತ್ರ ಅವಕಾಶ ನೀಡುವುದಾಗಿ ಅಲ್ಲಿನ ಪಂಚಾಯಿತಿ ಅಧ್ಯಕ್ಷ ಹೇಳಿಕೆ ನೀಡಿದ್ದಾರೆ. ಹೀಗಾಗಿ ಪಂಚಾಯಿತಿಗೆ ಈ ಕುರಿತು ಮನವರಿಕೆ ಮಾಡಿಕೊಡಬೇಕು, ಅಂಗನವಾಡಿಯನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದರೆ ಹಾಲಿ ಗುತ್ತಿಗೆದಾರನ ಅವಧಿ ಡಿಸೆಂಬರ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದು, ಹೊಸ ಟೆಂಡರ್ ಕರೆಯುವ ಕುರಿತು ತಯಾರಿಸಲಾದ ಅಂದಾಜುಪಟ್ಟಿಗೆ ಕೆಲವೊಂದು ತಿದ್ದುಪಡಿಗಳನ್ನು ಮಾಡಲಾಯಿತು.

ಈ ವಿಚಾರದಲ್ಲಿ ಸುದೀರ್ಘ ಚರ್ಚೆ ನಡೆಯಿತು. ಇದನ್ನು ವಾಸ್ತವವಾಗಿ ಅರಿತುಕೊಂಡು ಸಮಸ್ಯೆ ಪರಿಹರಿಸಲು ಚಿಂತಿಸಬೇಕು. ಎಲ್ಲ ವ್ಯವಸ್ಥೆ ಸರಿಯಾಗುವುದಿದ್ದಲ್ಲಿ, ಗುತ್ತಿಗೆದಾರನಿಗೆ ಹಣ ಪಾವತಿಸಲು ನಮ್ಮದೇನೂ ತಕರಾರಿಲ್ಲ ಎಂದು ಸದಸ್ಯ ದೇವದಾಸ ಶೆಟ್ಟಿ ಹೇಳಿದರು.

ಗುತ್ತಿಗೆದಾರನಿಗೆ ಅನುಕೂಲವಾಗುವಂತೆ ಅಂದಾಜು ಪಟ್ಟಿ ತಯಾರಿಸಲಾಗಿದೆ. ಲೋಪವಾದರೆ ಗುತ್ತಿಗೆದಾರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಅಂದಾಜುಪಟ್ಟಿಯಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಗೋವಿಂದ ಪ್ರಭು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಸ್ ಕಟ್ಟಿಂಗ್ ವ್ಯವಸ್ಥೆಗೂ ಇದೇ ಅಂದಾಜುಪಟ್ಟಿಯಲ್ಲಿ ತೋರಿಸಬಹುದಾಗಿತ್ತು ಎಂದು ಸದಸ್ಯ ವಾಸು ಪೂಜಾರಿ ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸುಧಾಕರ್, ಆ ವಿಚಾರವನ್ನು ಇದರಲ್ಲಿ ಸೇರಿಸಲು ಸಾಧ್ಯವಿಲ್ಲ, ಅದನ್ನು ಪುರಸಭೆ ನಿಧಿಯಿಂದ ಕಾರ್ಯರೂಪಕ್ಕೆ ತರುವುದಾಗಿ ತಿಳಿಸಿದರು.

ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಲಾಯ್ಲ ಪಂಚಾಯಿತಿ ತೆಗೆದುಕೊಂಡ ಕ್ರಮದ ಕುರಿತು ಮಂಗಳವಾರ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯನ್ನು ಸದಸ್ಯ ದೇವದಾಸ ಶೆಟ್ಟಿ ಉಲ್ಲೇಖಿಸಿದರು. ಇದನ್ನೇ ಮಾದರಿಯಾಗಿಟ್ಟುಕೊಂಡು ಬಂಟ್ವಾಳ ಪುರಸಭೆಯ ತ್ಯಾಜ್ಯ ನಿರ್ವಹಣೆ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಆಗ ಉತ್ತರಿಸಿದ ಮುಖ್ಯಾಧಿಕಾರಿ ಸುಧಾಕರ್, ಆರಂಭದಲ್ಲೇ ಕಸ ಬೇರ್ಪಡಿಸುವ ಪ್ರಕ್ರಿಯೆ ನಡೆಯಬೇಕು, ಕಂಚಿನಡ್ಕಪದವಿನಲ್ಲಿರುವ ಸಂಸ್ಕರಣಾ ಘಟಕದಲ್ಲಿ ಇದಕ್ಕೆ ಪೂರಕ ವ್ಯವಸ್ಥೆ ಇದೆ ಎಂದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts