ಬಂಟ್ವಾಳ: ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಪ್ರಮುಖ ಜಾಗಗಳಲ್ಲಿ ಕಸದ ರಾಶಿ ಪ್ರತಿದಿನ ಕಂಡುಬರುತ್ತದೆ. ಇಲ್ಲಿಗೆ ಹೊರ ಗ್ರಾಮಗಳಿಂದ ಬಂದು ಕಸ ಎಸೀತಾರೆ, ಕೆಲವೆಡೆ ನಾಗರಿಕರೇ ಕಸ ಬಿಸಾಡುತ್ತಾರೆ, ಇದಕ್ಕೆ ಯಾರು ಜವಾಬ್ದಾರಿ?
ಹೀಗೆಂದು ಮಂಗಳವಾರ 2016-17ನೇ ಸಾಲಿಗೆ ಬಂಟ್ವಾಳ ಪುರಸಭೆಯಲ್ಲಿ ಘನತ್ಯಾಜ್ಯ ನಿರ್ವಹಣೆ, ಬೀದಿ ಗುಡಿಸುವುದು, ಪ್ರಾಥಮಿಕ ತ್ಯಾಜ್ಯ ಸಂಗ್ರಹಣೆ, 2ನೇ ಹಂತದ ಸಾಗಣೆ ಕೆಲಸದ ಹೊರಗುತ್ತಿಗೆಯನ್ನು ತಯಾರಿಸುವ ಕುರಿತು ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತು ಕೇಳಿಬಂತು.
ವಿಷಯ ಪ್ರಸ್ತಾಪಿಸಿದ ಸದಸ್ಯ ವಾಸು ಪೂಜಾರಿ, ತನ್ನ ವ್ಯಾಪ್ತಿಯಲ್ಲಿ ಹೊರ ಗ್ರಾಮಗಳಿಂದ ಕಸ ಎಸೆಯುತ್ತಾರೆ ಎಂದು ಹೇಳಿದರು. ಇದಕ್ಕೆ ದನಿಗೂಡಿಸಿದ ಹಿರಿಯ ಸದಸ್ಯ ಗೋವಿಂದ ಪ್ರಭು, ಬಿ.ಸಿ.ರೋಡಿನ ಬಸ್ ನಿಲ್ದಾಣ ಹಿಂಭಾಗವೂ ಕಸ ರಾಶಿಯಾಗಿ ಬೀಳುತ್ತದೆ ಎಂದು ಹೇಳಿದರು.
ಕಳೆದ ಸಾಮಾನ್ಯ ಸಭೆಯಲ್ಲಿ ರಸ್ತೆಗೆ ತ್ಯಾಜ್ಯ ನೀರು ಹರಿಯಬಿಡುವವರ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸುದೀರ್ಘ ಚರ್ಚೆ ನಡೆದು, ಬಳಿಕ ಅಂಥವರ ವಿರುದ್ಧ ನೋಟಿಸ್ ಜಾರಿಗೊಳಿಸುವುದು ಇಲ್ಲವೇ ಬೀಗ ಜಡಿಯುವ ಕ್ರಮ ಕೈಗೊಳ್ಳುವುದಾಗಿ ಪುರಸಭೆ ಹೇಳಿತ್ತು. ಆದರೆ ಇದುವರೆಗೂ ನೋಟಿಸ್ ಜಾರಿಗೊಳಿಸಲಿಲ್ಲ ಎಂದು ಸದಸ್ಯ ವಾಸು ಪೂಜಾರಿ ಮತ್ತು ಭಾಸ್ಕರ ಟೈಲರ್ ವಿಷಯ ಪ್ರಸ್ತಾಪಿಸಿ ಮುಖ್ಯಾಧಿಕಾರಿ ಗಮನಕ್ಕೆ ತಂದಾಗ, ನೋಟಿಸ್ ಜಾರಿ ಮಾಡಿಲ್ಲ ಎಂದು ಒಪ್ಪಿಕೊಂಡರು.
ಫ್ಲ್ಯಾಟಿನಿಂದಲೇ ಸಮಸ್ಯೆ
ನಗರ ವ್ಯಾಪ್ತಿಯಲ್ಲಿರುವ ಅಪಾರ್ಟ್ ಮೆಂಟ್ ಗಳಿಂದಲೇ ಕಸದ ಸಮಸ್ಯೆ ಉದ್ಭವಿಸಿದೆ. ಅಲ್ಲಿ ವಾಸ್ತವ್ಯವಿರುವ ವಿದ್ಯಾವಂತರೇ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದುವರೆಗೆ ಅವರ ವಿರುದ್ಧ ಕ್ರಮ ಕೈಗೊಳ್ಳದಿರುವುದೇ ಕಾರಣ ಎಂದು ಸದಸ್ಯ ಮಹಮ್ಮದ್ ಶರೀಫ್ ಆಕ್ರೋಶ ವ್ಯಕ್ತಪಡಿಸಿದರು.
ಅಂಥವರಿಗೆ ನೋಟಿಸ್ ಜಾರಿಗೊಳಿಸೋಣ ಎಂದು ಮುಖ್ಯಾಧಿಕಾರಿ ಸಮಜಾಯಿಸಿ ನೀಡಿದಾಗ ಕುಪಿತರಾದ ಶರೀಫ್, ಅಪಾರ್ಟ್ ಮೆಂಟ್ ನಲ್ಲಿ ಬಲಾಢ್ಯರೇ ಇರುವ ಕಾರಣ ನಿಮ್ಮ ನೋಟಿಸ್ ಗೆ ಅವರು ಬಗ್ಗುವವರಲ್ಲ ಎಂದಾಗ ಸದಸ್ಯ ಗೋವಿಂದ ಪ್ರಭು, ವಾಸು ಪೂಜಾರಿ, ಇಕ್ಬಾಲ್ ಗೂಡಿನಬಳಿ ದನಿಗೂಡಿಸಿದರು.
ಕಸದ ಶುಲ್ಕವನ್ನು ಫ್ಲ್ಯಾಟ್ ಗಳಿಗೆ ಸೀಮಿತವಾಗಿ ತೆರಿಗೆಯೊಂದಿಗೆ ವಸೂಲಿ ಮಾಡಬೇಕು ಎಂದು ಸದಸ್ಯರೆಲ್ಲರೂ ಒತ್ತಾಯಿಸಿದಾಗ ಮುಂದಿನ ಸಾಮಾನ್ಯ ಸಭೆಯಲ್ಲಿ ಅದರ ಬಗ್ಗೆ ತೀರ್ಮಾನ ಕೈಗೊಳ್ಳುವ ಎಂದು ಮುಖ್ಯಾಧಿಕಾರಿ ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.
ಅಧ್ಯಕ್ಷ ರಾಮಕೃಷ್ಣ ಆಳ್ವ ಸಭಾಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಆರೋಗ್ಯಾಧಿಕಾರಿ ಪ್ರಸಾದ್, ಅಧಿಕಾರಿಗಳಾದ ರಜಾಕ್, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಉಪಸ್ಥಿತರಿದ್ದರು.
ಸದಸ್ಯರಾದ ಗಂಗಾಧರ್, ಜಗದೀಶ ಕುಂದರ್, ವಸಂತಿ ಚಂದಪ್ಪ, ಯಾಸ್ಮೀನ್, ಜೆಸಿಂತಾ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.