ವಿಟ್ಲ: ದಾದಿಯರ ವಸತಿಗೃಹದಿಂದ ಬೀಗ ಮುರಿದು 14 ಪವನ್ ಚಿನ್ನಾಭರಣ ಕಳವು ಪ್ರಕರಣ ಆರೋಪಿಯೊಬ್ಬನನ್ನು ವಿಟ್ಲ ಪೊಲೀಸರ ತಂಡ ಸೋಮವಾರ ಬಂಧಿಸಿದೆ.
ಮಂಜೇಶ್ವರ ತಾಲೂಕಿನ ಬಾಯಾರು ಪದವು ಕ್ಯಾಂಪ್ಕೋ ನಿವಾಸಿ ಇಬ್ರಾಹಿಂ ಮುಜಾಂಬಿಲ್ ಯಾನೆ ಇಬ್ರಾಹಿಂ ಮುಜಾಮಲ್ (20) ಬಂಧಿತ ಆರೋಪಿ. ಸುಬ್ರಹ್ಮಣ್ಯ – ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಯ ಅಳಿಕೆ ಸರಕಾರಿ ಆಸ್ಪತ್ರೆಯ ದಾದಿಯರ ವಸತಿಗೃಹದಿಂದ ಕಳವು ಪ್ರಕರಣ ನಡೆದಿತ್ತು. ಕಳ್ಳತನ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದ ಈತ ಪೊಲೀಸರು ತನಿಖೆ ಕೈಬಿಟ್ಟಿದ್ದಾರೆಂಬ ಮಾಹಿತಿ ಹಿನ್ನಲೆಯಲ್ಲಿ ಊರಿಗೆ ಹಿಂದಿರುಗಿ ಕರ್ನಾಟಕದ ಕಡೆಗೆ ಸೋಮವಾರ ಆಗಮಿಸಿದ್ದ. ಈ ಸಂದರ್ಭ ಬಲೆಬೀಸಿದ ಪೊಲೀಸರು ಕನ್ಯಾನದಲ್ಲಿ ಬಂಧಿಸಿದ್ದರು.
ಕಳವು ಕೃತ್ಯ ನಡೆಸುವಾಗ ಮತ್ತೊಬ್ಬನ ಸಹಾಯ ಪಡೆದುದಾಗಿ ಆತ ಹೇಳಿದ್ದಾನೆ. ಹೆಚ್ಚಿನ ಬಂಗಾರವನ್ನು ಆತನ ಕೈಯಲ್ಲಿ ಕೊಟ್ಟಿದ್ದು ತನ್ನಲ್ಲಿ ಕೇವಲ 1.5 ಪವನ್ ಚಿನ್ನ ಮಾತ್ರ ಇರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ಪ್ರಕಾರ ಈತನಲ್ಲಿದ್ದ ಬಂಗಾರವನ್ನು ವಶಕ್ಕೆ ಪಡೆದಿದ್ದು, ಇನ್ನೋರ್ವನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕಳೆದ ವರ್ಷ ಕನ್ಯಾನ ಗ್ರಾಮದ, ಬೈರಿಕಟ್ಟೆಯ ಶಿಕ್ಷಕಿಯ ಮನೆಯಿಂದ ಹಗಲು ಕಳ್ಳತನ ನಡೆಸಿರುವುದಲ್ಲದೇ, ಉಕ್ಕುಡದ ಸುಲಿಗೆ ಹಾಗು ಉಳ್ಳಾಲ ಮತ್ತು ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕನ್ನ ಕಳವು ನಡೆಸಿದ ಆರೋಪಿಯಾಗಿರುತ್ತಾನೆ. ಆ ಪೈಕಿ ಕೆಲವು ಪ್ರಕರಣಗಳಲ್ಲಿ ದಸ್ತಗಿರಿಯಾಗಿ ನ್ಯಾಯಾಂಗ ಬಂಧನದಲ್ಲೂ ಇದ್ದು ಜಾಮೀನಿನಲ್ಲಿ ಬಿಡುಗಡೆಗೊಂಡಿರುತ್ತಾನೆ. ಈತನು ಹಗಲು ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿ ಹಗಲು ಹೊತ್ತಿನಲ್ಲಿಯೇ ಕಳ್ಳತನ ಮಾಡುತ್ತಿದ್ದ.
ಜಿಲ್ಲಾ ಪೊಲೀಸ್ ಅಧೀಕ್ಷಕ ಭೂಷಣ್‌ಜಿ ಬೊರಸೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕಕ ವೇದಮೂರ್ತಿ ಮಾರ್ಗದರ್ಶನದಲ್ಲಿ ಬಂಟ್ವಾಳ ಪೊಲೀಸ್ ಸಹಾಯಕ ಅಧೀಕ್ಷಕ ರವೀಶ್ ಸಿ.ಆರ್. ನೇತೃತ್ವದಲ್ಲಿ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಬಿ.ಕೆ. ಮಂಜಯ್ಯ, ವಿಟ್ಲ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ, ಸಿಬ್ಬಂದಿಗಳಾದ ಜಯಕುಮಾರ್, ಪ್ರವೀಣ್ ರೈ, ರಕ್ಷಿತ್ ರೈ, ಲೋಕೇಶ್, ಪ್ರವೀಣ್ ಕುಮಾರ್, ಗಿರೀಶ್, ಚಾಲಕರಾದ ರಘುರಾಮ, ಜಿಲ್ಲಾ ಬೆರಳು ಮುದ್ರ ಘಟಕದ ಉಪಾಧೀಕ್ಷಕ ಎ.ಸಿ.ಗೌರೀಸ್, ಸಿಬ್ಬಂದಿಗಳಾದ ಸೋಮಶೇಖರ್, ಪ್ರಕಾಶ್, ಕಂಪ್ಯೂಟರ್ ವಿಭಾಗದ ಸಂಪತ್, ದಿವಾಕರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.