ವಿಟ್ಲ: ಭವಿಷ್ಯದ ದೃಷ್ಠಿಯಿಂದ ವನಗಳ ನಿರ್ಮಾಣವನ್ನು ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದು, ಗ್ರಾಮೀಣ ಭಾಗದಿಂದ ಇದನ್ನು ಆರಂಭಿಸಲಾಗಿದೆ ಎಂದು ಕೊಲ್ಕತ್ತಾ ಟಾಟಾ ಸ್ಟೀಲ್ ಅಗ್ರಿಕೊ ಆಂಡ್ ರಿಟೇಲ್ ಇನಿಷಿಯೇಟಿವ್ ಮುಖ್ಯಸ್ಥ ಸಿದ್ಧಾರ್ಥ ಮಿಶ್ರಾ ಹೇಳಿದರು.
ಭಾನುವಾರ ಅಳಿಕೆ ಮಡಿಯಾಲ ಶ್ರೀ ಗೋಪಕೃಷ್ಣ ದೇವಸ್ಥಾನದಲ್ಲಿ ಟಾಟಾ ಅಗ್ರಿಕೋ ವಿಭಾಗದಿಂದ ಅಳಿಕೆ ಶ್ರೀ ಸತ್ಯ ಸಾಯೊ ಲೋಕ ಸೇವಾ ಟ್ರಸ್ಟ್, ಅಳಿಕೆ ಗ್ರಾಮ ಪಂಚಾಯಿತಿ, ಅಳಿಕೆ ಸೇವಾ ಸಹಕಾರಿ ಸಂಘ, ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಳಿಕೆ ವಲಯ, ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆ ಅಳಿಕೆ, ಶಿವಮೊಗ್ಗ ಮೆ. ನಟರಾಜ್ ಮಾರ್ಕೆಟಿಂಗ್ ಕಾರ್ಪೊರೇಶನ್ ಸಹಕಾರದಲ್ಲಿ ನಡೆದ ಗ್ರಾಮೀಣ ಹಬ್ಬ ಮತ್ತು ಸಸ್ಯ ಕ್ಷೇತ್ರ ನಿರ್ಮಿಸುವ ಗೋ ಗ್ರೀನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಟಾಟಾ ಅಗ್ರಿಕೋ ಮಾರ್ಕೆಟಿಂಗ್ ವಿಭಾಗದ ಸೀನಿಯರ್ ಮೆನೇಜರ್ ಉದಯ ಶ್ರವಣ್‌ಕುಮಾರ್ ಕೆರೆಮೂಲೆ ಮಾತನಾಡಿ ಸರ್ವೋಪಯೋಗಿ ವನ ನಿರ್ಮಿಸುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ಕಂಪನಿ ತೊಡಗಿಕೊಳ್ಳಲು ಮುಂದಾಗಿದೆ. ಗ್ರಾಮಗಳ ಸ್ವಚ್ಛತೆಯ ಆಧಾರದಲ್ಲಿ ನಿರ್ಮಲ ಗ್ರಾಮ ಪುರಸ್ಕಾರ ಪಡೆದ ಗ್ರಾಮಗಳಲ್ಲಿ ಅಳಿಕೆಯೂ ಒಂದಾಗಿದ್ದೂ, ಇಲ್ಲಿಂದ ಮೊದಲ ಕಾರ್ಯಕ್ರಮ ಆರಂಭವಾಗಬೇಕೆಂಬ ಉದ್ದೇಶವನ್ನು ಹೊಂದಿ ಈ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಯಿತು ಎಂದು ತಿಳಿಸಿದರು.
ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಭಟ್ ಮಾತನಾಡಿ. ಮರ ಬೆಳೆದಾಗ ಮಾತ್ರ ಸಮಾಜ ಉಳಿಯಲು ಸಾಧ್ಯ ಎಂದರು.
ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಮಾತನಾಡಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಪರಿಸರ ನಾಶವನ್ನು ನಿಲ್ಲಿಸಬೇಕು. ಫಲವತ್ತಾದ ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ಯೋಜನೆಗಳು ಬರಬೇಕಾಗಿದೆ. ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಟಾಟಾ ಅಗ್ರಿಕೋ ವಿತರಕಿ ಡಿ. ಎಂ. ಶ್ರೀಲತಾ ವಹಿಸಿದ್ದರು. ಅಳಿಕೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಕಾನ, ಮಡಿಯಾಲ ಶ್ರೀಗೋಪಾಲಕೃಷ್ಣ ದೇವಸ್ಥಾನದ ಕಾರ್ಯದರ್ಶಿ ಗೋವಿಂದ ಪ್ರಕಾಶ್ ವಧ್ವ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ನಾರಾಯಣ, ಸೌತ್ ಟಾಟಾ ಅಗ್ರಿಕೋ ರೀಜನಲ್ ಸೇಲ್ಸ್ ಮೆನೇಜರ್ ಹಾರ್ದಿಕ್ ಶ್ರೀವತ್ಸವ್, ಮೆನೇಜರ್ ದಿವ್ಯ ಉಪಸ್ಥಿತರಿದ್ದರು.
ಟಾಟಾ ಅಗ್ರಿಕೋ ಜಿಲ್ಲಾ ವಿತರಣಾಧಿಕಾರಿ ಸಂದೇಶ್ ಸ್ವಾಗತಿಸಿದರು. ಟಾಟಾ ಅಗ್ರಿಕೋ ನಿರ್ವಾಹಕ ಡಿ. ಎಲ್. ಮಂಜುನಾಥ ಪ್ರಸ್ತಾವನೆಗೈದರು. ಅಳಿಕೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ ಮಡಿಯಾಲ ವಂದಿಸಿದರು. ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ವಿದ್ಯಾ ಕೇಂದ್ರದ ಅಧ್ಯಾಪಕ ಯಾದವ ನಡುಗುತ್ತು ಕಾರ್ಯಕ್ರಮ ನಿರೂಪಿಸಿದರು.