ಬಂಟ್ವಾಳ: ಕಾನೂನು ಚೌಕಟ್ಟಿನೊಳಗೆ ಸಂಪತ್ತನ್ನು ಸಂಪಾದಿಸಿಕೊಂಡರೆ ಯಾವುದೇ ತಪ್ಪಿಲ್ಲ. ಆದರೆ ದುರಾಸೆಯಿಂದ ಮಿತಿಮೀರಿ ಸಂಪತ್ತು ಸಂಗ್ರಹಿಸಿಕೊಂಡರೆ ಅದರಿಂದ ಕಂಟಕ ಕಟ್ಟಿಟ್ಟ ಬುತ್ತಿ, ಇದರಿಂದಾಗಿ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಮಾಜಿ ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ಹೇಳಿದರು.
ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಭಾರತೀಯ ಜೀವ ವಿಮಾ ನಿಗಮ ಪಿಂಚಣಿ ಮತ್ತು ಗುಂಪು ವಿಮಾ ಯೋಜನೆ ಶಾಖೆ ಮಂಗಳೂರು ಜಂಟಿ ಆಶ್ರಯದಲ್ಲಿ ನಡೆದ ಆಮ್‌ಆದ್ಮಿ ಯೋಜನೆ ಮತ್ತು ಸೇವಾಂಜಲಿಯ ರೂ. 6.5 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಫರಂಗಿಪೇಟೆಯ ಸೇವಾಂಜಲಿ ಸಭಾಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಹೆತ್ತವರೇ ಮಕ್ಕಳಿಗೆ ನೈತಿಕ ಪಾಠಗಳನ್ನು ಭೋದಿಸಬೇಕು. ಈ ನಿಟ್ಟಿನಲ್ಲಿ ಹೆತ್ತವರು ಮೊದಲು ಪ್ರಾಮಾಣಿಕರಾಗಿ ಮಕ್ಕಳಿಗೆ ಮಾದರಿಯಾಗಿರಬೇಕು ಎಂದು ತಿಳಿಸಿದರು.
ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಎಲೈಸಿಯ ಹಿರಿಯ ಲೆಕ್ಕ ಪರಿಶೋಧಕ ಎಸ್.ಎಸ್.ನಾಯಕ್ ಮಾತನಾಡಿದರು. ಸಂಸದ ನಳಿನ್ ಕುಮಾರ್ ಕಟೀಲು, ಮಾರುಕಟ್ಟೆ ಪ್ರಬಂಧಕ ವಿ.ರಾಜೇಶ್ ಮುಧೋಳ್, ಮಂಗಳೂರು ಶಾಖಾಧಿಕಾರಿ ಎಸ್.ಗುರುರಾಜ ರಾವ್, ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಬಂಟ್ವಾಳ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ನಿವೃತ್ತ ಬ್ಯಾಂಕ್ ಅಧಿಕಾರಿ ಸುರೇಶ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ಅರ್ಕುಳಬೀಡು ವಜ್ರನಾಭ ಶೆಟ್ಟಿ ಉಪಸ್ಥಿತರಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಸ್ವಾಗತಿಸಿದರು. ಎಲ್‌ಐಸಿ ಉಡುಪಿ ವಿಭಾಗೀಯ ಅಧಿಕಾರಿ ಪಿ. ವಿಶ್ವೇಶ್ವರ ರಾವ್ ಪ್ರಸ್ತಾವಿಸಿದರು, ಸೇವಾಂಜಲಿಯ ಟ್ರಸ್ಟಿ ದೇವದಾಸ್ ಶೆಟ್ಟಿ ಕೊಡ್ಮಾನ್ ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.