ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್‌ನ ಸೆ.15ರ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಮುಂಗಡವಾಗಿ ಪ್ರತಿ ಮನೆಗಳಿಂದ 600 ರೂ. ತೆರಿಗೆ ವಸೂಲಿ ಮಾಡುವುದಕ್ಕೆ ತಾತ್ಕಾಲಿಕ ತಡೆಯೊಡ್ಡುವುದೆಂದು ನಿರ್ಣಯಿಸಲಾಗಿತ್ತು. ಆದರೆ ಅದು ಜಾರಿಗೆ ಇನ್ನೂ ಬಂದಿಲ್ಲ. ಅಲ್ಲದೇ 600 ರೂ.ವನ್ನು ವಸೂಲಿ ಮಾಡುವ ಪ್ರಕ್ರಿಯೆ ಮುಂದುವರಿದಿದೆ. ಹಾಗಾದರೆ ಜನಪ್ರತಿನಿಧಿಗಳ ನಿರ್ಣಯಕ್ಕೆ ಬೆಲೆ ಇಲ್ಲವೇ? ಎಂದು ಶುಕ್ರವಾರ ವಿಟ್ಲ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷ ನಾಯಕ ಅಶೋಕ್ ಕುಮಾರ್ ಶೆಟ್ಟಿ ಪ್ರಶ್ನಿಸಿದರು.
ಮಧ್ಯೆ ಪ್ರವೇಶಿಸಿದ ವಿ.ರಾಮದಾಸ ಶೆಣೈ ಅವರು ವಾಣಿಜ್ಯ ಕಟ್ಟಡಗಳಿಗೆ ತಿಂಗಳಿಗೆ 600 ರೂ ವಸೂಲಿ ಮಾಡುವ ಬಗ್ಗೆ ಯಾರೂ ಆಕ್ಷೇಪಿಸಿಲ್ಲ. ಆದರೆ ಮನೆ ಕಸ ಸಂಗ್ರಹಕ್ಕೆ ಅಷ್ಟೊಂದು ಮೊತ್ತ ವಸೂಲಿ ಮಾಡಬಾರದೆಂದು ನಿರ್ಣಯಿಸಲಾಗಿತ್ತು. ನ.5ರಂದು ವಿಶೇಷ ಸಭೆ ಕರೆದು, ತಾರಸಿ ಮನೆಗೆ ತಿಂಗಳಿಗೆ 15 ರೂ. ಮತ್ತು ಹಂಚಿನ ಮನೆಗೆ 10 ರೂ.ಗಳನ್ನು ವಸೂಲಿ ಮಾಡಬಹುದೆಂದು ನಿರ್ಣಯಿಸಲಾಗಿತ್ತು. ಆದರೂ ಜಾರಿಗೆ ತರಲಿಲ್ಲ. ಅಲ್ಲದೇ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯ ನಿರ್ಣಯದಲ್ಲಿ ಮುಖ್ಯಾಧಿಕಾರಿ ಅವರು ತಮ್ಮ ಮಾತನ್ನು ಉಲ್ಲೇಖಿಸಿ, ಎಸ್‌ಎಎಸ್ ಮೂಲಕ ತೆರಿಗೆ ವಸೂಲಿ ಮಾಡಲಾಗುತ್ತಿದೆ. ತಾತ್ಕಾಲಿಕವಾಗಿ ಹಣ ಸಂಗ್ರಹಿಸುವುದನ್ನು ನಿಲ್ಲಿಸಿ, ತೆರಿಗೆ ಮಾತ್ರ ಪಡೆಯುವಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪ್ರಕಟಿಸಲಾಗಿದೆ. ವಿಶೇಷ ಸಭೆಯಲ್ಲೂ ತೀರ್ಮಾನಿಸಲಾಗಿದೆ. ಆದರೆ ಕ್ರಮಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ರವೀಶ್ ವಿಟ್ಲ ಅವರು ಮಾತನಾಡಿ ಮೈಸೂರಿನಲ್ಲಿ ನಡೆದ ವಿಶೇಷ ತರಬೇತಿಯಲ್ಲಿಯೂ ಕಸದ ತೆರಿಗೆಯನ್ನು 10ರಿಂದ 15 ರೂ.ಗಳಷ್ಟೇ ವಸೂಲಿ ಮಾಡಬೇಕೆನ್ನಲಾಗಿತ್ತು ಎಂದು ನೆನಪಿಸಿಕೊಂಡರು.
ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ ಎಂ.ವಿಟ್ಲ ಅವರು ಅಧ್ಯಕ್ಷತೆ ವಹಿಸಿ, ಮನೆ ಕಸ ತೆರಿಗೆಯನ್ನು ಇಳಿಸುವ ಬಗ್ಗೆ ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಲಾಗಿದೆ. ಪರಿಣಾಮವಾಗಿ ಇಷ್ಟೆಲ್ಲ ಸಮಸ್ಯೆ ಉಂಟಾಗಿದೆ. ಅವರನ್ನು ಮುಖತಾ ಸಂಪರ್ಕಿಸಿ, ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದರು.
ಅಶೋಕ್ ಕುಮಾರ್ ಶೆಟ್ಟಿ ಅವರು ಜಂಕ್ಷನ್‌ನಲ್ಲಿ ಬಸ್ ನಿಲ್ಲುತ್ತಿದೆ. ಪೇಟೆ ಟ್ರಾಫಿಕ್ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಆಗ ಅಧ್ಯಕ್ಷ ಅರುಣ ಅವರು ಉತ್ತರಿಸಿ, ಈ ಬಗ್ಗೆ ನಾವು ಎಂದೋ ಕ್ರಮಕೈಗೊಳ್ಳಲು ನಿರ್ಧರಿಸಿದ್ದೇವೆ. ವಿಟ್ಲ ಠಾಣಾಧಿಕಾರಿ ಜತೆ ಮಾತುಕತೆ ನಡೆಸಿದ್ದೇವೆ. ಅವರಿಗೆ ಕಾಲಾವಕಾಶ ಸಿಗದೇ ಮುಂದೆ ಹೋಗಿದೆ. ಶೀಘ್ರದಲ್ಲಿ ಟ್ರಾಫಿಕ್ ನಿಯಂತ್ರಣವಾಗಲಿದೆ ಎಂದರು.
ವಿಟ್ಲ ಜಾತ್ರೋತ್ಸವ ಸಂದರ್ಭ ಜಂಕ್ಷನ್‌ನಿಂದ ಅನಂತೇಶ್ವರ ದೇವಸ್ಥಾನದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಸಂತೆ ವ್ಯಾಪಾರಕ್ಕೆ ಅವಕಾಶವಿಲ್ಲ. ಅನಂತೇಶ್ವರ ದೇಗುಲದಿಂದ ಪಂಚಲಿಂಗೇಶ್ವರ ದೇಗುಲದ ವರೆಗೆ ಒಂದು ಬದಿಯಲ್ಲಿ ಮಾತ್ರ ಅವಕಾಶ. ಅನಂತೇಶ್ವರ ದೇವಸ್ಥಾನದಿಂದ ದೂರವಾಣಿ ವಿನಿಮಯ ಕೇಂದ್ರದವರೆಗೆ ಎರಡೂ ಬದಿಯಲ್ಲಿ ವ್ಯಾಪಾರ ಮಳಿಗೆಯನ್ನು ಹಾಕಬಹುದು. ಮತ್ತು ವ್ಯಾಪಾರಿಗಳಿಗೆ ಸೂಕ್ತ ಕಡೆಗಳಲ್ಲಿ ಜಾಗ ನಿಗದಿಪಡಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ವಿಟ್ಲ ಸರಕಾರಿ ಶಾಲೆಯಲ್ಲಿ ಮೈಸೂರು ವಿಭಾಗೀಯ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಕಬಡ್ಡಿ ಪಂದ್ಯಕ್ಕೆ 1000 ರೂ. ನೀಡಲು ತೀರ್ಮಾನಿಸಲಾಯಿತು. ಇದಕ್ಕೆ ಕನಿಷ್ಠ 5 ಸಾವಿರ ರೂ. ಮಂಜೂರು ಮಾಡಬಹುದೆಂಬ ಆಶಯ ವ್ಯಕ್ತವಾಯಿತು. ಆಗ ಶ್ರೀಕೃಷ್ಣ ಅವರು ಮಾತನಾಡಿ ಯಾವುದೇ ಸಭೆಗೆ ನಮ್ಮನ್ನು ಕರೆಯಲಿಲ್ಲ. ಆಮಂತ್ರಣವೂ ಇರಲಿಲ್ಲ. ಆದುದರಿಂದ ಅಷ್ಟು ಸಾಕು ಎಂದರು. ಅದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು.
ವಿಟ್ಲ ಪಟ್ಟಣ ಪಂಚಾಯತನ್ನು ಬಯಲುಮುಕ್ತ ಶೌಚಾಲಯ ಎಂದು ಘೋಷಿಸುವ ಬಗ್ಗೆ, ಶುಚಿತ್ವ ಕಲಸಕ್ಕೆ ಪೌರ ಕಾರ್ಮಿಕರನ್ನು ನೇಮಿಸುವ ಬಗ್ಗೆ, ಆರೋಗ್ಯ ವಿಭಾಗಕ್ಕೆ ಲೋಡರ್‌ಗಳನ್ನು ಹೊರಗುತ್ತಿಗೆ ಮೂಲಕ ನಿಯೋಜಿಸುವ ಬಗ್ಗೆ, 14ನೇ ಹಣಕಾಸು ಯೋಜನೆಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಆವರಣಗೋಡೆ ರಚನೆ ಮತ್ತು ಅಭಿವೃದ್ಧಿ ಕಾಮಗಾರಿ ಟೆಂಡರ್ ಮಂಜೂರಾತಿ ಬಗ್ಗೆ, ಕೊಳವೆಬಾವಿ ಕೊರೆಯುವ ಬಗ್ಗೆ, ಕುಡಿಯುವ ನೀರಿನ ಟ್ಯಾಂಕಿಗಳನ್ನು ಸ್ವಚ್ಛಗೊಳಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.