ಬಂಟ್ವಾಳ: ಬಿ.ಸಿ.ರೋಡಿನ ಮೇಲ್ಸೇತುವೆಯಡಿ ಹೊರಜಿಲ್ಲೆಯ ತರಕಾರಿ ವ್ಯಾಪಾರಸ್ಥರು ಕಳೆದ ಕೆಲ ಸಮಯಗಳಿಂದ ವ್ಯಾಪಾರ ನಡೆಸುತ್ತಿದ್ದರು. ಇದರಿಂದಾಗಿ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಡಕಾಗುತ್ತಿದ್ದ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭೆ ಪೊಲೀಸರ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ನಡೆಸಿತ್ತು. ಇದಕ್ಕಾಗಿ ಬಿ.ಸಿ.ರೋಡಿನ ನಾಗರಿಕರು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿ ಬ್ಯಾನರ್ ಅಳವಡಿಸಿದ್ದರು.
ಹಾಗೆಯೇ ಮೇಲ್ಸೇತುವೆಯಡಿಯಲ್ಲಿ ಸಂಜೆ ಹೊತ್ತ ತಳ್ಳುಗಾಡಿಯನ್ನಿಟ್ಟು ವ್ಯಾಪಾರ ನಡೆಸುತ್ತಿದ್ದ ಅನಧಿಕೃತ ಗೂಡಂಗಡಿಗಳನ್ನೂ ತೆರವುಗೊಳಿಸಲಾಗಿತ್ತು. ಆದರೆ ಈ ಗೂಡಂಗಡಿದಾರರಿಗೆ ಆನಂತರ ಮತ್ತೆ ಇಲ್ಲಿ ತಲೆಯೆತ್ತಲು ಪೊಲೀಸರಾಗಲಿ, ಪುರಸಭೆಯಾಗಲೀ, ಬಿಟ್ಟಿರಲಿಲ್ಲ. ಈ ವಿಚಾರ ಕಳೆದ ಸಾಮಾನ್ಯ ಸಭೆಯಲ್ಲೂ ಚರ್ಚೆ ನಡೆದಿತ್ತು. ಪುರಸಭಾ ವ್ಯಾಪ್ತಿಯಲ್ಲಿರುವ ಎಲ್ಲ ಅನಧಿಕೃತ ಗೂಡಂಗಡಿ ತೆರವುಗೊಳಿಸಿ ಅವರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಚರ್ಚೆ ನಡೆದಿತ್ತಾದರೂ ಈ ಬಗ್ಗೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಪ್ರತಿ ಭಾನುವಾರ ಧನ್ಯವಾದದ ಬ್ಯಾನರ್ ಸುತ್ತಲೇ ತರಕಾರಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ.