ಪುತ್ತೂರು: ನಮ್ಮದೇ ಊರಿನ ಹಲಸಿನ ಬಗ್ಗೆ ದೂರದ ದೇಶದ ಮಂದಿ ಹೇಳುವುದು ಬೇಡ. ಹಲಸಿನ ಬಗ್ಗೆ ನಮ್ಮಲ್ಲಿರುವ ಕೀಳರಿಮೆ ಬಿಡೋಣ. ನಮ್ಮ ರಾಜ್ಯದಲ್ಲಿ, ದೇಶದಲ್ಲಿ ಹಲಸನ್ನು ಅಪರಿಚಿತವಾಗಲು ಬಿಡಬಾರದು ಎಂದು ಬೆಂಗಳೂರಿನ ಹಿರಿಯ ತೋಟಗಾರಿಕಾ ತಜ್ಞ ಡಾ.ಎಸ್.ವಿ.ಹಿತ್ತಲಮನಿ ಹೇಳಿದರು.
ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಹಲಸಿನ ಆಯ್ದ ಮಾಹಿತಿಗಳ ಸಂಕಲನ ’ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು
ಹಲಸು ಆಂದೋಳನ ಮತ್ತು ಪುಸ್ತಕ ಕುರಿತು ಕೃಷಿ ಮಾಧ್ಯಮ ಕೇಂದ್ರದ ಶಿವರಾಂ ಪೈಲೂರು ಮಾತನಾಡಿ, ಶ್ರೀಪಡ್ರೆ ಅವರ ಹಲಸಿನ ಲೇಖನ ಓದಿ ಕೃಷಿಕನೊಬ್ಬ ಹಲಸು ಕೃಷಿ ಮಾಡಿರುವುದು ಕಂಡುಬಂತು. ಹೀಗಾಗಿ ಈ ಹಲಸು ಪುಸ್ತಕ ಹೊರತರಲು ಪ್ರಯತ್ನ ನಡೆಯಿತು. ಹಲಸು ಸೇರಿದಂತೆ ಇತರ ನಮ್ಮದೇ ಹಣ್ಣುಗಳು ಅಲಕ್ಷಿತವಾಗುತ್ತಿರುವುದು ಸರಿಯಲ್ಲ ಎಂದರು.
ಹಲಸಿನ ಸಂದೇಶವನ್ನು ಹೊತ್ತ ಕಾರ್ಡನ್ನು ವಿವೇಕಾನಂದ ಶಾಲೆಯ ಅಧ್ಯಕ್ಷ ವೆಂಕಟೇಶ್ವರ ಅಮೈ ಬಿಡುಗಡೆಗೊಳಿಸಿದರು.
ಫಾರ್ಮರ್ ಫಸ್ಟ್ ಟ್ರಸ್ಟಿನ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಮಾತನಾಡಿ ಆಂದೋಳನದ ಮೂಲಕ ಹಲಸನ್ನು ಇಡೀ ರಾಜ್ಯ ಮಾತ್ರವಲ್ಲ ದೇಶಮಟ್ಟದಲ್ಲಿ ಅಡಿಕೆ ಪತ್ರಿಕೆ ಉತ್ತಮ ಕೆಲಸ ಮಾಡಿದೆ ಎಂದರು.
ವಾಟ್ಸಪ್ ಪತ್ರಿಕೋದ್ಯಮ ಶಿಬಿರ ಹಾಗೂ ಹಲಸು ಆಂದೋಳನದ ಬಗ್ಗೆ ಮಾತನಾಡಿದ ಪತ್ರಕರ್ತ ಶ್ರೀಪಡ್ರೆ, ವಾಟ್ಸಪ್ ಬಳಕೆ ಕೃಷಿಗೂ ಬರಬೇಕು ಈ ಮೂಲಕ ಸಂವಹನ ನಡೆಯಬೇಕು ಎಂಬ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ. ಸವಾಲುಗಳು ಇವೆ ನಿಜ, ಆದರೆ ಇದೆಲ್ಲವನ್ನೂ ದಾಟಿ ಮುಂದೆ ಹೋಗಬೇಕಾಗಿದೆ ಎಂದರು. ಹಲಸು ಬಗ್ಗೆ ಅನೇಕರಿಗೆ ಇಂದಿಗೂ ಕೀಳರಿಮೆ ಇದೆ. ಆದರೆ ಈ ಬಗ್ಗೆ ಪಾಸಿಟಿವ್ ಯೋಚನೆ ಬರಬೇಕಾಗಿದೆ. ಏಕೆಂದರೆ ಭವಿಷ್ಯದಲ್ಲಿ ಈ ಹಣ್ಣಿಗೆ ನಿಶ್ಚಯವಾಗಿಯೂ ಬೆಲೆ ಬರಲಿದೆ ಎಂದರು.
ವಾಟ್ಸಪ್ ಕೃಷಿ ಪತ್ರಿಕೋದ್ಯಮದ ಶಿಬಿರದ ಬಗ್ಗೆ ಶಿಬಿರಾರ್ಥಿಗಳಾದ ಮೈಸೂರಿನ ಹರೀಶ್ ಹಾಗೂ ರೇಖಾ ಸಂಪತ್ ಅನಿಸಿಕೆ ವ್ಯಕ್ತಪಡಿಸಿದರು. ಪುಸ್ತಕವನ್ನು ಪ್ರಕಾಶಿಸಿದ ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ ಮತ್ತು ಕೃಷಿ ಮಾಧ್ಯಮ ಕೇಂದ್ರವು ಕಾರ್ಯಕ್ರಮವನ್ನು ಆಯೋಜಿಸಿತ್ತು.
ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್‌ನ ಟ್ರಸ್ಟಿ ಪಡಾರು ರಾಮಕೃಷ್ಣ ಶಾಸ್ತ್ರಿ ಸ್ವಾಗತಿಸಿ ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ ಕಾರ್ಯದರ್ಶಿ ಶಂಕರ್ ಸಾರಡ್ಕ ವಂದಿಸಿದರು. ಪತ್ರಕರ್ತ ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು. ಗೇರು ಸಂಶೋಧನಾ ಕೇಂದ್ರ ವಿಜ್ಞಾನಿ ಡಾ.ಮೋಹನ ತಲಕಾಲುಕೊಪ್ಪ ಸಹಕರಿಸಿದರು.