ಬಂಟ್ವಾಳ: ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರದ ಆಶ್ರಯದಲ್ಲಿ ಮಕ್ಕಳ ಹಕ್ಕುಗಳ ದಿನಾಚರಣೆಯ ಅಂಗವಾಗಿ ಬಿ.ಸಿ.ರೋಡಿನ ಸಂಸಾರ ಜೋಡುಮಾರ್ಗ ತಂಡ ಜಾಥಾ ನಡೆಸುತ್ತಿದೆ.
ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯ ಕ್ಕೆ ಕಡಿವಾಣ ಬೀಳದ ಹೊರತು ನಮ್ಮದು ಸುಖೀ ರಾಜ್ಯವಾಗದು.. ಎನ್ನುವ ಸಂದೇಶ ಸಾರುತ್ತಾ ಶಾಲೆಗಳಲ್ಲಿ ಸಾಗುತ್ತಿದೆ ಈ ತಂಡ.
ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ 10 ಶಾಲೆಗಳಲ್ಲಿ ನಾಟಕ ಪ್ರದರ್ಶಿಸುತ್ತಿದೆ. ತಾಲೂಕಿನ ಅಮ್ಮುಂಜೆಯ ಅನುದಾನಿತ ಶಾಲೆಯಲ್ಲಿ ಶಾಲಾ ಮುಖ್ಯಶಿಕ್ಷಕಿಯವರು ತಮ್ಕಿ ಬಾರಿಸುವ ಮೂಲಕ ಜಾಗೃತಿ ಜಾಥಾ ಕ್ಕೆ ಚಾಲನೆ ನೀಡಿದರು.
ಜಾಥಾವು ನ.24 ರವರೆಗೆ ಮುನ್ನಡೆಯಲಿದೆ. ಪ್ರಜ್ಞಾ ಸಲಾಹಾ ಕೇಂದ್ರದ ಕೆಕೆಎಸ್ ಯೋಜನೆ ಸಂಯೋಜಕ ವಿಲಿಯಂ ಸ್ಯಾಮುವೆಲ್ ಅವರು ಜಾಥಾದ ನೇತೃತ್ವ ವಹಿಸಿದ್ದು, ಆಯಾ ವಲಯಗಳ ಪ್ರಜ್ಞಾ ಕಾರ್ಯಕರ್ತರು ಜಾಥಾಕ್ಕೆ ಸಾಥ್ ನೀಡುತ್ತಿದ್ದಾರೆ.
ಮಕ್ಕಳ ನ್ನು ಭಿಕ್ಷಾಟನೆಗೆ ತಳ್ಳುವುದು, ಬಾಲಕಾರ್ಮಿಕ ಪದ್ದತಿ, ಬಾಲ್ಯ ವಿವಾಹ ತಪ್ಪು ಎಂಬುದನ್ನು ಸಾರಿ ಹೇಳುವುದರ ಜೊತೆಗೆ ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಹೊಣೆ ಎಂಬುದನ್ನು ನಾಟಕ ಮನನ ಮಾಡಿಕೊಡುತ್ತದೆ. ಮಕ್ಕಳ ಹಕ್ಕುಗಳ ಒಡಂಬಡಿಕೆ ಜಾರಿಯಲ್ಲಿದ್ದರೂ, ಕೆಲವೆಡೆಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆರಯಾಗುತ್ತಿದೆ, ಈ ಬಗ್ಗೆ ಪ್ರಜ್ಞಾವಂತನಾಗರೀಕರು ಎಚ್ಚೆತ್ತುಕೊಳ್ಳುವಂತೆ ನಾಟಕ ಗಮನಸೆಳೆಯುತ್ತದೆ.
ಮಕ್ಕಳು ಮೆಚ್ಚುವ ವಿದೂಷಕರ ಮಾತ್ರದ ಮೂಲಕವೇ ನಾಟಕವನ್ನು ಕಟ್ಟಲಾಗಿದ್ದು, ಮಕ್ಕಳ ವಿಚಾರದಲ್ಲಿನ ಗಂಭೀರ ಸಮಸ್ಯೆಯನ್ನು ಎತ್ತಿ ಹಿಡಿಯುವುದರ ಜೊತೆಯಲ್ಲಿ ಎಲ್ಲರ ಮನಗೆಲ್ಲುವಲ್ಲಿಯೂ ನಾಟಕ ಯಶಕಂಡಿದೆ. ಸಂಸಾರ ತಂಡದ ನಿರ್ದೇಶಕ ಮೌನೇಶ್ ವಿಶ್ವಕರ್ಮ, ಕಲಾವಿದರಾದ ಸಂದೀಪ್ ಸಾಲ್ಯಾನ್, ಪೃಥ್ವಿರಾಜ್, ವರದರಾಜ್, ಕೃತೇಶ್,ಲಾವಣ್ಯ, ಸ್ವಾತಿ ತಂಡದಲ್ಲಿದ್ದಾರೆ. ಅಮ್ಮುಂಜೆ ಹಾಗೂ ಬೆಂಜನಪದವಿನಲ್ಲಿ ನಡೆದ ನಾಟಕ ಪ್ರದರ್ಶನ ವೇಳೆ ಪ್ರಜ್ಞಾ ಕಾರ್ಯಕರ್ತರಾದ ಚಂದ್ರಶೇಖರ್, ಶೀಲಾವತಿ, ಅಶೋಕ್ ಉಪಸ್ಥಿತರಿದ್ದರು.