ಬಂಟ್ವಾಳ: ಚುನಾವಣೆ ಗೆದ್ದು ಎಂಟು ಸಾಮಾನ್ಯ ಸಭೆಗೆ ಹಾಜರಾದರೂ ನಮಗೆ ಗೌರವಧನ ಇದುವರೆಗೂ ಸಿಕ್ಕಿಲ್ಲ ಎಂದು ತಾಲೂಕು ಪಂಚಾಯಿತಿ ಸದಸ್ಯರು ಶುಕ್ರವಾರ ಬಂಟ್ವಾಳ ತಾಪಂನ ಎಸ್ ಜಿಎಸ್ ಆರ್ ವೈ ಸಭಾಂಗಣದಲ್ಲಿ ನಡೆದ 2015-16ನೇ ಸಾಲಿನ ಜಮಾಬಂದಿ ಕಾರ್ಯಕ್ರಮದಲ್ಲಿ ಅಹವಾಲು ತೋಡಿಕೊಂಡರು.
ದ.ಕ.ಜಿಪಂ ಉಪಕಾರ್ಯದರ್ಶಿ ಉಮೇಶ್ ಇಂಥ ಪ್ರಶ್ನೆಯಿಂದ ಒಮ್ಮೆಲೆ ಗಲಿಬಿಲಿಗೊಂಡು ಕೂಡಲೇ ತಾಪಂ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದಾ ಅವರನ್ನು ಮಾಹಿತಿ ಕೋರಿದರು.
ಇದನ್ನು ಒಪ್ಪಿಕೊಂಡ ತಾಪಂ ಇಒ, ಕೆಲವೊಂದು ತಾಂತ್ರಿಕ ತೊಂದರೆಯಿಂದ ಗೌರವಧನ ಕೊಡಲು ಸಾಧ್ಯವಾಗಿಲ್ಲ. ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ತಕ್ಷಣ ಬಂಟ್ವಾಳ ಉಪಖಜಾನೆ ಸಿಬ್ಬಂದಿಯನ್ನು ಸಭೆಗೆ ಕರೆಸಿ ವಿವರ ಪಡೆಯಲಾಯಿತು. ಈ ಬಗ್ಗೆ ಸಂಬಂಧಿಸಿದ ಇಲಾಖೆಯೊಂದಿಗೆ ಸಮನ್ವಯ ನಡೆಸಿ, ಗೌರವಧನ ಬಿಡುಗಡೆಗೊಳಿಸುವಂತೆ ಉಮೇಶ್ ಸೂಚಿಸಿದರು. ಸದಸ್ಯೆ ಪದ್ಮಾವತಿ ಈ ಕುರಿತು ಸಭೆ ಗಮನ ಸೆಳೆದಿದ್ದರು.
ಆಯೋಗದಿಂದ ನೋಟಿಸ್
ಚುನಾವಣಾ ಸಂದರ್ಭ ಲೆಕ್ಕಪತ್ರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರೂ ಬಂಟ್ವಾಳ ತಾಪಂನ ಬಹುತೇಕ ಸದಸ್ಯರಿಗೆ ಆಯೋಗದಿಂದ ನೋಟಿಸ್ ಬಂದಿದ್ದು, ನಾವು ಮುಜುಗರಕ್ಕೊಳಗಾಗಿದ್ದೇವೆ. ನೋಟಿಸ್ ಪಡೆದ ಪ್ರತಿಯೊಬ್ಬರೂ ಈ ಬಗ್ಗೆ ತಾಪಂ ಕಾರ್ಯನಿರ್ವಹಣಾಧಿಕಾರಿಗೆ ವಿವರ ನೀಡಿದ್ದೇವೆ. ಆದರೂ ಅದನ್ನು ಕಳುಹಿಸುವಲ್ಲಿ ವಿಳಂಬವಾಗಿದೆ, ಹೀಗಾಗಿ ಚುನಾವಣಾ ಆಯೋಗಕ್ಕೆ ನಾವು ಉತ್ತರದಾಯಿಗಳಾಗಿದ್ದೇವೆ ಎಂದು ಸದಸ್ಯ ಉಸ್ಮಾನ್ ಕರೋಪಾಡಿ ಸಭೆ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಇಒ, ವಿವರ ಕಳುಹಿಸಲು ವಿಳಂಬವಾಗಿರುವುದನ್ನು ಒಪ್ಪಿಕೊಂಡರು. ಇದನ್ನು ಈಗಾಗಲೇ ಕಳುಹಿಸಿಕೊಟ್ಟಿದೇವೆ ಎಂದು ಹೇಳಿದರು.
ಸಿಬ್ಬಂದಿ ಕೊರತೆ
ತಾಲೂಕು ಪಂಚಾಯಿತಿ ಸೇರಿದಂತೆ ಇಲ್ಲಿಯ ವಿವಿಧ ಇಲಾಖೆಗಳು ಸಿಬ್ಬಂದಿ ಕೊರತೆ ಎದುರಿಸುತ್ತಿದೆ ಎಂದು ಇಒ ಅವರು ಜಿಪಂ ಉಪಕಾರ್ಯದರ್ಶಿ ಉಮೇಶ್ ಗಮನಕ್ಕೆ ತಂದರು.
ಇದರಿಂದಾಗಿ ಅನುದಾನ ಉಳಿಕೆಯಾಗುತ್ತಿದೆ ಎಂದು ವಿವಿಧ ಇಲಾಖಾಧಿಕಾರಿಗಳು ವಿವರಣೆ ನೀಡಿದರು.
ಎಸ್ ಸಿ, ಎಸ್ ಟಿಗೆ ಸಂಬಂಧಿಸಿ ಯಾವುದೇ ಅನುದಾನ ಉಳಿಕೆಯಾಗದಂತೆ ನೋಡಿಕೊಳ್ಳಬೇಕು, ಈ ನಿಟ್ಟಿನಲ್ಲಿ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ತಾಪಂ ಅಧೀನದಲ್ಲಿರುವ ಎಲ್ಲ ಇಲಾಖೆಗಳು ತಾಪಂನಿಂದ ಬಿಡುಗಡೆಗೊಳ್ಳುವ ಅನುದಾನದ ಖರ್ಚು ವೆಚ್ಚಗಳನ್ನು ತಾಪಂಗೇ ಕಡ್ಡಾಯವಾಗಿ ನಿಗದಿತ ಸಮಯದೊಳಗೆ ಸಲ್ಲಿಸುವಂತೆ ನೋಡಲ್ ಅಧಿಕಾರಿ ಸೂಚಿಸಿದರು.
ವೇತನ ಮತ್ತು ವೇತನೇತರ ಅನುದಾನದಲ್ಲಿ ಕಡಿಮೆಯಾದರೆ ಅದಕ್ಕೆ ಪ್ರಸ್ತಾವನೆಯನ್ನು ಕೂಡಲೇ ಸಲ್ಲಿಸಿ ಎಂದು ನಿರ್ದೇಶಿಸಿದ ಉಮೇಶ್, ತಿಂಗಳ ಕೆಡಿಪಿ ಸಭೆ ಬಳಿಕ ಎಲ್ಲ ಅಧಿಕಾರಿಗಳೊಂದಿಗೆ ಅಭಿವೃದ್ಧಿ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರಿಗೆ ತಿಳಿಸಿದರು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ, ಮುಂದಿನ ಸಾಲಿಗೆ ಕ್ರಿಯಾಯೋಜನೆ ತಯಾರಿಯಾಗಿ ಮಂಜೂರಾದ ಕಾಮಗಾರಿಗಳನ್ನು ಫೆಬ್ರವರಿಯೊಳಗಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸದಸ್ಯರು ಮತ್ತು ಅಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಕರೆ ನೀಡಿದರು.
ಅಧಿಕಾರಿಗಳಲ್ಲಿ ಅಭಿವೃದ್ಧಿ ಕಾಮಗಾರಿ ಕುರಿತು ಯಾವುದೇ ಸಮಸ್ಯೆ ಎದುರಾದಲ್ಲಿ ತಾಪಂ ಆಡಳಿತವನ್ನು ಸಂಪರ್ಕಿಸಿ ಚರ್ಚಿಸಿ ಪರಿಹಾರೋಪಾಯ ಕಂಡುಕೊಳ್ಳುವಂತೆ ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ ಸಲಹೆ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ ಉಪಸ್ಥಿತರಿದ್ದರು.