ಬಂಟ್ವಾಳ/ವಿಟ್ಲ: ನೋಟು ನಿಷೇಧ ಸೂಚನೆ ಹೊರಡಿಸಿ ವಾರ ಸಮೀಪಿಸುತ್ತಿದ್ದಂತೆ ಪರ, ವಿರೋಧ ಹೇಳಿಕೆಗಳು ಬರಲಾರಂಭಿಸಿವೆ. ಕೆಲವೆಡೆ ಐನೂರು ರೂಪಾಯಿಯನ್ನು ಮಾರುತ್ತಿದ್ದಾರೆ ಎಂದು ಮಾಧ್ಯಮಗಳೇ ವರದಿ ಮಾಡಿದರೆ, ಇನ್ನೊಂದೆಡೆ ಮನೆಯಲ್ಲಿ ಕೂಡಿಟ್ಟ ಹೇರಳ ಕಪ್ಪು ಹಣವನ್ನು ಏನು ಮಾಡುವುದು ಎಂದು ಭಾರೀ ಕುಳಗಳು ತಲೆಬಿಸಿ ಮಾಡಿಕೊಂಡಿವೆ.
ಸಾಮಾನ್ಯವಾಗಿ ತಿಂಗಳ ವೇತನ ಪಡೆಯುವವರು ತೆರಿಗೆ ಕಟ್ಟುವುದು ವಾಡಿಕೆ. ಆದರೆ ತೆರಿಗೆ ತಪ್ಪಿಸಲು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದ್ದವರೂ ಇದರಿಂದ ಗಲಿಬಿಲಿಗೊಳ್ಳುವಂತಾಗಿದೆ. ಏನಿದ್ದರೂ ನರೇಂದ್ರ ಮೋದಿ ಕ್ರಮ ಕೋಟಿಗಟ್ಟಲೆ ಕಪ್ಪು ಹಣ ಹೊಂದಿದವರ ಬೆನ್ನುಮೂಳೆಯಲ್ಲಿ ನಡುಕ ಹುಟ್ಟಿಸಿದ್ದಂತೂ ಹೌದು.
ಎಟಿಎಂ, ಬ್ಯಾಂಕ್ ವ್ಯವಹಾರ
ಗುರುವಾರವೂ ಬ್ಯಾಂಕುಗಳು ತೆರೆದಿರುವ ಕಾರಣ ವ್ಯವಹಾರ ಇಂದೂ ನಡೆಸಬಹುದು. ಕೆಲವೆಡೆ ಬ್ಯಾಂಕುಗಳಲ್ಲಿ ಭಾರಿ ಕುಳಗಳಿಗೆ ನೋಟುಗಳನ್ನು ಎಕ್ಸ್ ಚೇಂಜ್ ಮಾಡಲು ಆದ್ಯತೆ ನೀಡಲಾಗುತ್ತಿದೆ, ಸರತಿ ಸಾಲುಗಳಲ್ಲಿದ್ದವರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಸಾಲಿನಲ್ಲಿ ನಿಂತವರಿಂದ ಕೇಳಿಬರುತ್ತಿದೆ.
ಎಟಿಎಂಗಳೂ ಒಂದೆರಡಷ್ಟೇ ಕಾರ್ಯಾಚರಿಸುತ್ತಿದ್ದು, ಎಲ್ಲ ಎಟಿಎಂಗಳಲ್ಲಿ ಹಣವಿದ್ದರೆ ಮಾತ್ರ ಈ ಸಮಸ್ಯೆಯಿಂದ ಹೊರಬರಲು ಸಾಧ್ಯ ಎಂದು ಸಾರ್ವಜನಿಕರು ಆಡಿಕೊಳ್ಳಲಾರಂಭಿಸಿದ್ದಾರೆ.
ಇದೇ ವೇಳೆ ಬ್ಲ್ಯಾಕ್ ಮನಿಯನ್ನು ವೈಟ್ ಮಾಡುವ ದಂಧೆಯೊಂದು ನಡೆಯುತ್ತಿದೆ ಎಂಬ ಅನುಮಾನ ಕಾಡುತ್ತಿದೆ.
ಇಂತಹ ಒಂದು ತಂಡ ವಿಟ್ಲದ ಮನೆಯೊಂದರಲ್ಲಿ ವಾಸವಾಗಿರುವ ಮಾಹಿತಿಯನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ನೀಡಿದರೂ ದಾಳಿ ನಡೆಸಲಿಲ್ಲ.
ವಿಟ್ಲ ಮೂಲದ ತಂಡದ ಮಾಹಿತಿ ಹಿನ್ನಲೆಯಲ್ಲಿ ಬೆಂಗಳೂರಿನ ತಂಡವೊಂದು ಕಮಿಷನ್ ಆಧಾರದಲ್ಲಿ ಅಕ್ರಮ ಹಣ ಚಲಾವಣೆಗೆ ಆಗಮಿಸಿತ್ತು. ಕಪ್ಪುಬಣ್ಣದ ಸ್ಯಾಂಟ್ರೋ ಕಾರಿನಲ್ಲಿ ಹೇರಳ ಹಣದೊಂದಿಗೆ ಆಗಮಿಸಿದ ತಂಡ ವಿಟ್ಲ – ಕಲ್ಲಡ್ಕ ರಸ್ತೆಯ ಮನೆಯೊಂದರಲ್ಲಿ ಮಂಗಳವಾರ ಮಧ್ಯಾಹ್ನದಿಂದ ವಾಸವಾಗಿತ್ತು.
ನೋಟು ಬದಲಾವಣೆಯ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿ ಲಭಿಸಿದ ಹಿನ್ನಲೆಯಲ್ಲಿ ಇಲಾಖೆಗಳಿಗೆ ಮಾಹಿತಿ ರವಾನಿಸಲಾಗಿತ್ತು. ಆದರೆ ವಿಟ್ಲ ಪೊಲೀಸರಿಗೆ ಮನೆಯನ್ನು ತಡಕಾಡುವ ಅಧಿಕಾರವಿಲ್ಲದ ಕಾರಣ ಹಿರಿಯ ಅಧಿಕಾರಿಗಳ ಆಗಮನಕ್ಕೆ ಕಾಯುತ್ತಿದ್ದರು.
ರಸ್ತೆಯಲ್ಲಿ ನಾಖಾ ಬಂಧಿಸಿ ರಚಿಸಿ ಬೆಳಗಾಗುವವರೆಗೆ ಕುಳಿತರೂ ಸಂಬಂಧ ಪಟ್ಟ ಅಧಿಕಾರಿಗಳು ಬಾರದ ಹಿನ್ನಲೆಯಲ್ಲಿ ದಾಳಿಯನ್ನು ಕೈ ಬಿಡಲಾಯಿತು. ಆದಾಯ ತೆರಿಗೆ ವಿಭಾಗದ ಅಧಿಕಾರಿಗಳು ಬರವಣಿಗೆಯಲ್ಲಿ ದೂರು ನೀಡಿದ ಬಳಿಕ ದಾಳಿ ನಡೆಸುತ್ತೇವೆ ಎಂಬ ಉತ್ತರ ನೀಡಿದ್ದಾರೆ.