ನೋಡ್ತಾ ಇರಿ, ಇಟ್ ವಿಲ್ ಟೇಕ್ ಟೈಮ್. ವಿ ವಿಲ್ ಚೇಂಜ್ ದಿ ಪಿಕ್ಚರ್ ಆಫ್ ಬಿ.ಸಿ.ರೋಡ್…
ಹೀಗಂದವರು ಪ್ರೊಬೆಷನರಿ ಐಎಎಸ್ ಅಧಿಕಾರಿ ಗಾರ್ಗಿ ಜೈನ್. ಇನ್ನು ಕೆಲವು ವರ್ಷಗಳಲ್ಲಿ ಬಿ.ಸಿ.ರೋಡಿನ ಚಿತ್ರಣವೇ ಬದಲಾಗಲಿದೆ. ಇದರ ನೀಲನಕ್ಷೆ ತಯಾರಿಯೂ ನಡೆಯುತ್ತಿದೆ. ಇದು ಒಂದೆರಡು ದಿನಗಳಲ್ಲಿ ಸಾಧ್ಯವಿಲ್ಲ. ಆದರೆ ಕಳೆದ ಐದು ದಿನಗಳಿಂದ ನಾವು ಪ್ರಯತ್ನಶೀಲರಾಗಿದ್ದೇವೆ ಎಂದು “ಬಂಟ್ವಾಳ ನ್ಯೂಸ್’’ ಜೊತೆ ಹೇಳಿದ ಗಾರ್ಗಿ ಅವರನ್ನು ಈ ವ್ಯವಸ್ಥೆ ಅನುಷ್ಠಾನ ಉಸ್ತುವಾರಿಗಾಗಿಯೇ ನೇಮಿಸಿದ್ದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್.
ಬಿ.ಸಿ.ರೋಡಿನ ಚಿತ್ರಣ ಬದಲಾಗುತ್ತಿದೆಯೋ, ಇಲ್ಲವೋ ಬೇರೆ ಮಾತು. ಅಧಿಕಾರಿಗಳ ಮಾತಿನಲ್ಲಂತೂ ಆತ್ಮವಿಶ್ವಾಸ ಇತ್ತು. ಇಂಥದ್ದೊಂದು ಆಶಾಭಾವನೆ ಮೂಡಲು ಕಾರಣ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್. ಅಧಿಕಾರಿಗಳ ಈ ಹೇಳಿಕೆಗಳು ಹೊಸದಲ್ಲ, ಕಾರಣ, ಕೆಲವೇ ತಿಂಗಳಲ್ಲಿ ಅಧಿಕಾರಿಗಳು ಬದಲಾಗುತ್ತಾರೆ, ಸಮಸ್ಯೆಗಳು ಹಾಗೆಯೇ ಉಳಿಯುತ್ತದೆ!
ಹಲವು ವರ್ಷಗಳಿಂದ ಬಿ.ಸಿ.ರೋಡ್ ಭಾರಿ ಬದಲಾವಣೆ ಆಗುತ್ತಿದೆ ಎಂಬ ನಿರೀಕ್ಷೆ ಹೊತ್ತವರು ಇಲ್ಲೇ ಇದ್ದಾರೆ. ಮಕ್ಕಳು ಯುವಕರಾಗುತ್ತಿದ್ದಾರೆ, ಯುವಕರು ಮುದುಕರಾಗುತ್ತಿದ್ದಾರೆ. ಪ್ರತಿ ರಾತ್ರಿಯೂ ಬೆಂಗಳೂರು, ಮೈಸೂರಿಗೆ ಬಸ್ಸಿನಲ್ಲಿ ತೆರಳುವವರು ಬಿ.ಸಿ.ರೋಡಿನಲ್ಲೂ ಧೂಳು ತಿಂದುಕೊಂಡೇ ನಿಲ್ಲುತ್ತಾರೆ. ಅವರ ನಿರೀಕ್ಷೆಗಳು ಇನ್ನಾದರೂ ಈಡೇರಲಿ. ಸಕಾರಾತ್ಮಕ ಬದಲಾವಣೆ ಬಿ.ಸಿ.ರೋಡಿಗೆ ಬೇಕು. ಇದರಲ್ಲಿ ಯಾವುದೇ ರಾಜಕೀಯವೂ ಇರಬಾರದು ಎಂಬುದಷ್ಟೇ ಬಂಟ್ವಾಳ ನ್ಯೂಸ್ ಆಶಯ. ವಿವರಗಳಿಗೆ ಮುಂದೆ ಓದಿ.
ಕಳೆದ ವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಬಂಟ್ವಾಳ ಪುರಸಭೆಯಲ್ಲಿ ಅಧಿಕಾರಿಗಳ ಸಭೆಯೊಂದನ್ನು ಕರೆದಿದ್ದರು. ಬಸ್ ಬೇ ನಿರ್ಮಾಣ, ಬಿ.ಸಿ.ರೋಡ್ ಪಾರ್ಕಿಂಗ್, ಸೆಟ್ ಬ್ಯಾಕ್, ಅನಧಿಕೃತ ಕಟ್ಟಡ ಸಹಿತ ವಿವಿಧ ವಿಚಾರಗಳು ಚರ್ಚೆಗೆ ಬಂದಿದ್ದವು. ಈ ಸಂದರ್ಭ ಜಿಲ್ಲಾಧಿಕಾರಿ ಅಲ್ಲೇ ಇದ್ದ ಪ್ರೊಬೆಷನರಿ ಐಎಎಸ್ ಗಾರ್ಗಿ ಜೈನ್ ಅವರಿಗೆ ಇಂದಿನಿಂದಲೇ ಈ ವಿಚಾರಗಳ ಬಗ್ಗೆ ಕಾರ್ಯಾಚರಣೆ ನಡೆಸಬೇಕು. ಯಾರ ಮುಲಾಜಿಗೂ ಒಳಗಾಗದೆ ಕ್ರಮ ಕೈಗೊಳ್ಳಬೇಕು. ಒಂದು ವಾರದೊಳಗೆ ಈ ಬಗ್ಗೆ ಸಂಪೂರ್ಣ ಪ್ರಗತಿ ವರದಿಯನ್ನು ನೀಡಬೇಕು ಎಂದು ಸೂಚನೆ ನೀಡಿದರು. ಅದರಂತೆ ನವೆಂಬರ್ 10ರಂದೇ ಕಾರ್ಯಾಚರಣೆ ಆರಂಭಗೊಂಡಿತು.
ಇದರ ಮೊದಲ ಇಂಪ್ಯಾಕ್ಟ್ ಆಗಿ ಕೈಕಂಬದಲ್ಲಿ ಬಸ್ ಬೇ ನಿರ್ಮಿಸಲು ಕಾರ್ಯಾಚರಣೆ ಆರಂಭಗೊಂಡಿದೆ. ಈಗಾಗಲೇ ಎರಡು ಜೆಸಿಬಿಗಳು ನೆಲ ಸಮತಟ್ಟು ಮಾಡುವ ಕಾರ್ಯ ನಡೆಸುತ್ತಿವೆ. ಕೈಕಂಬದ ಬಸ್ ನಿಲುಗಡೆಗೆ ಸರಿಯಾದ ಜಾಗ ಇಲ್ಲದ ಕಾರಣ, ವಾಹನ ದಟ್ಟಣೆ ಉಂಟಾಗುತ್ತಿತ್ತು.
ಇದೇ ರೀತಿ ಬಿ.ಸಿ.ರೋಡ್ ನ ವಿವಿಧ ಅಗತ್ಯ ಕಾರ್ಯಗಳನ್ನು ಕೈಗೊಳ್ಳಲು ರೂಪುರೇಷೆ ಮಾಡಲಾಗಿದೆ ಎಂದು ಗಾರ್ಗಿ ಬಂಟ್ವಾಳ ನ್ಯೂಸ್ ಗೆ ತಿಳಿಸಿದರು.
ಪ್ರಮುಖವಾಗಿ ಅನಧಿಕೃತ ಬಂಟಿಂಗ್ಸ್ ತೆರವು, ಸೆಟ್ ಬ್ಯಾಕ್ ತೆರವಿಗೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ನೀಡಿದರು.
ಇವಿಷ್ಟು ಮಾಹಿತಿ ಬಿ.ಸಿ.ರೋಡಿನ ಪ್ರಗತಿ ಬಗ್ಗೆ…
ಆದರೆ..,
ಫ್ಲೈ ಓವರ್ ನಿರ್ಮಾಣವಾದ ಮೇಲೆ ಬಿ.ಸಿ.ರೋಡಿನ ಚಿತ್ರಣವೇ ಬದಲಾಗುತ್ತದೆ.ಹತ್ತು ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಪೇಟೆಯಲ್ಲಿ ಬಸ್ಸಿಗೆ ಕಾಯುವ ಮಂದಿ ಮಾತನಾಡಿದ್ದು ಈಗಷ್ಟೇ ಕೇಳಿದಂತಿದೆ.ಅಂದೂ ಇಂಥದ್ದೇ ಚಿಂತನೆಗಳು ಮೂಡಿದ್ದವು. ಭಾರೀ ಬದಲಾವಣೆಯ ನಿರೀಕ್ಷೆಯಲ್ಲಿ ಬಿ.ಸಿ.ರೋಡಿನ ಜನರೂ ಇದ್ದರು.
ನಿಜವಾಗಿಯೂ ಬಿ.ಸಿ.ರೋಡ್ ಬದಲಾಯಿತಾ?
ಹಾಗೆ ಸುಮ್ಮನೆ ತಲಪಾಡಿಯಿಂದ ಪಾಣೆಮಂಗಳೂರು ಹಳೇ ಟೋಲ್ ಗೇಟ್ ಕಡೆಗೆ ರೌಂಡ್ ಬನ್ನಿ. ಬೆಳಗ್ಗೆ 9ರಿಂದ 11ವರೆಗೆ ಹೋದರೆ ಒಳ್ಳೆಯದು.
ನೀವು ಹತ್ತು ವರ್ಷಗಳ ಹಿಂದೆ ಕಂಡ ಬಿ.ಸಿ.ರೋಡಿಗೂ, ಇಂದಿನ ಬಿ.ಸಿ.ರೋಡಿಗೂ ಸಾಮ್ಯತೆ ಇಲ್ಲ. ಆದರೆ ಜನರಿಗೆ ಇದರಿಂದ ಏನಾದರೂ ಅನುಕೂಲ ಆಗಿದೆಯಾ?ಹೇಳಿಕೊಳ್ಳಲು ಒಂದು ಫ್ಲೈಓವರ್ ನಿರ್ಮಾಣಗೊಂಡಿದೆ. ಕೈಕಂಬ ಜಂಕ್ಷನ್ ನಲ್ಲಿ ವಾಹನಗಳ ದಟ್ಟಣೆ ಜಾಸ್ತಿಯಾಗುತ್ತಿದೆ. ರಸ್ತೆಯ ಎಡ, ಬಲದಲ್ಲಿ ಬಹುಮಹಡಿ ಕಟ್ಟಡಗಳು ತಲೆ ಎತ್ತಿವೆ.ಇಡೀ ಬಿ.ಸಿ.ರೋಡು ನಿಂತಿರುವುದೇ ತಾಲೂಕಿನ ಇತರ ಭಾಗಗಳಿಂದ ಬರುವ ನಾಗರಿಕರ ವ್ಯವಹಾರಕ್ಕೆ ಹೊಂದಿಕೊಂಡು.ಹೀಗಾಗಿ ಹೊರಗಿನಿಂದ ಬರುವವರಿಗೆ ಅನುಕೂಲವಾಗುವ ಒಂದಾದರೂ ವ್ಯವಸ್ಥೆ ಇಲ್ಲಿದೆಯಾ ಎಂದು ನೋಡಿದರೆ ಉತ್ತರಿಸಲು ಕಷ್ಟ.
ಈಗ ಹೀಗಿದೆ
ಹೋಟೆಲುಗಳು, ಕಚೇರಿಗಳು, ನೆಲ ಅಂತಸ್ತಿನಲ್ಲೂ ವ್ಯವಹಾರ ಮಾಡಿಕೊಂಡಿರುವ ಬಹುಮಹಡಿ ಕಟ್ಟಡಗಳು ಇವೆಯೇ ಹೊರತು, ಬಿ.ಸಿ.ರೋಡಿಗೆ ಬರುವ ಹಾಗೂ ಅಲ್ಲಿಂದ ತೆರಳುವ ಸಾರ್ವಜನಿಕರಿಗೆ ನಿಲ್ಲಲ್ಲು ಸರಿಯಾದ ಬಸ್ ತಂಗುದಾಣವೇ ಇಲ್ಲ.
ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ನಿರ್ಮಾಣದ ಹಂತದಲ್ಲಿದೆ. ಗ್ರಾಮೀಣ ಭಾಗಗಳಿಗೆ ತೆರಳುವ ಖಾಸಗಿ ಬಸ್ ನಿಲುಗಡೆಗೆ ಜಾಗವೇನೋ ಇದೆ. ಆದರೆ ಪ್ರಯಾಣಿಕರಿಗೆ ನಿಲ್ಲಲು ಗರಿಷ್ಠ ಆದ್ಯತೆ ಅಲ್ಲಿಲ್ಲ.
ಹೀಗಾಗಿ ಪುತ್ತೂರು, ಬೆಂಗಳೂರು, ಮೈಸೂರು, ಮಡಿಕೇರಿಗಳಿಗೆ ತೆರಳುವ ಪ್ರಯಾಣಿಕರು ಏನು ಮಾಡಬೇಕು?
ಬಿ.ಸಿ.ರೋಡಿನ ವಾಸುದೇವ ಪ್ಲಾಜಾ ಬಳಿ ಹೊರ ಬಿಸಿಲಿನಲ್ಲಿ ನಿಲ್ಲಬೇಕು.
ನಿಮ್ಮಲ್ಲಿ ದೊಡ್ಡ ಸೂಟ್ ಕೇಸ್, ಬ್ಯಾಗ್ ಏನಾದರೂ ಇದ್ದರೆ ಬಹಳ ಕಷ್ಟ. ಅಲ್ಲೇ ಎದುರು ಆಟೋರಿಕ್ಷಾಗಳು ಸಾಲಾಗಿ ನಿಲ್ಲುತ್ತವೆ. ಅವುಗಳ ಮಧ್ಯೆ ಬಸ್ಸು ಬಂತಾ ಎಂದು ಕಣ್ರೆಪ್ಪೆ ಮಿಟುಕಿಸದೆ ನೋಡುತ್ತಾ ಇರಬೇಕು. ಬಸ್ಸು ಕೆಲವೊಮ್ಮೆ ಹಳೇ ಸತ್ಯನಾರಾಯಣ ಲಂಚ್ ಹೋಮ್ ಇದ್ದಲ್ಲಿ ಬಂದು ನಿಲ್ಲುತ್ತದೆ. ಇಲ್ಲವಾದರೆ ನೇರ ಮುಂದೆ ಸಾಗುತ್ತದೆ. ಆಗ ನೀವು ಬ್ಯಾಗು ಹಿಡಿದುಕೊಂಡು ಬಸ್ಸಿನ ಬಳಿ ಧಾವಿಸಬೇಕು. ಬೇಗ, ಬೇಗ ಎಂಬ ಕಂಡಕ್ಟರ್ ಬೈಗುಳವನ್ನು ಸಹಿಸಿಕೊಂಡು ಬಸ್ಸು ಹತ್ತಬೇಕು.
ಮಂಗಳೂರಿಗೆ ತೆರಳುವ ಬಸ್ ಪ್ರಯಾಣಿಕರೂ ಬಿಸಿಲಿನ ಝಳಕ್ಕೆ ಕೊಡೆ ಹಿಡಿದುಕೊಳ್ಳಬೇಕಾಗುತ್ತದೆ. ಅಲ್ಲೂ ಸಮಸ್ಯೆ. ಇಲ್ಲೂ ಸಮಸ್ಯೆ.
ಎಲ್ಲಿದೆ ಪಾರ್ಕಿಂಗ್
ಇಡೀ ಬಿ.ಸಿ.ರೋಡ್ ಪೇಟೆಯಲ್ಲಿ ವಾಹನ ನಿಲುಗಡೆಗೆ ಅವಕಾಶವೇ ಸಿಗುವುದಿಲ್ಲ. ದೂರದಿಂದ ದ್ವಿಚಕ್ರ ಹಾಗೂ ಕಾರಿನಲ್ಲಿ ಬರುವ ನಾಗರಿಕರಿಗೆ ನಿಲುಗಡೆಗೆ ಜಾಗವೇ ಇಲ್ಲ. ಹೀಗಾಗಿ ಯಾವುದಾದರೂ ಅಂಗಡಿಯ ಎದುರೋ, ಕಚೇರಿ ಎದುರೋ ನಿಲ್ಲಿಸಬೇಕಾಗುತ್ತದೆ. ಪುರಸಭೆ ಪೇ ಪಾರ್ಕಿಂಗ್ ಮಾಡುವ ಬಗ್ಗೆ ಯೋಚಿಸಲು ಇದು ಸಕಾಲ.
ಮಲ್ಟಿಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಏರ್ಪಡಿಸಿದರೂ ಅಡ್ಡಿ ಇಲ್ಲ.
ಬಿ.ಸಿರೋಡಿನ ಸರ್ವೀಸ್ ರಸ್ತೆಯಂತೂ ಕಿತ್ತು ಹೋಗಿದೆ. ಒಳರಸ್ತೆಗಳೂ ಹದಗೆಡುವ ಹಂತದಲ್ಲಿದೆ.
ನೋಡಲು ಮೆಗಾಸಿಟಿಯ ಹೊರವಲಯದಂತಿರುವ ಬಿ.ಸಿ.ರೋಡ್ ಪೇಟೆ ಬದಲಾವಣೆಯಾಗಬೇಕಾದರೆ ಜನಪ್ರತಿನಿಧಿಗಳು, ನಾಗರಿಕರ ಸಮನ್ವಯತೆಯೂ ಮುಖ್ಯ.
ಹೀಗಾಗಿ ಜಿಲ್ಲಾಧಿಕಾರಿ ಮೀಟಿಂಗ್ ನಡೆಸಿದ ಮೇಲೆ ನಡೆಯುತ್ತಿರುವ ಪ್ರಕ್ರಿಯೆಗಳನ್ನು ಗಮನಿಸಿದಾಗ ಇದನ್ನು
ಉತ್ತಮ ಆರಂಭ ಎನ್ನಬಹುದೇ? ಅಥವಾ ಮಾಮೂಲು ಪ್ರಕ್ರಿಯೆ ಇರಬಹುದೇ?
ನೀವೇ ನಿರ್ಣಯಿಸಬೇಕು.
ಬಿ.ಸಿ.ರೋಡಿಗಂತೂ ಬೇಕು ತುರ್ತು ಪರಿಹಾರ.
ಚಿತ್ರಗಳು: ಕಿಶೋರ್ ಪೆರಾಜೆ , ನಮ್ಮ ಸ್ಟುಡಿಯೋ.
ಬಿ.ಸಿ.ರೋಡಿನ ಅಭಿವೃದ್ಧಿ, ಜಿಲ್ಲಾಧಿಕಾರಿ ಕೈಗೊಂಡ ಕ್ರಮ ಅನುಷ್ಠಾನಗೊಳ್ಳಲು ಸಾರ್ವಜನಿಕರ ಪಾತ್ರವೂ ಮುಖ್ಯ. ಈ ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವಾಟ್ಸಾಪ್ ಮೂಲಕ ನಿಮ್ಮ ಹೆಸರು, ವಿಳಾಸ ಮುಖೇನ ಕಳುಹಿಸಲು ಅವಕಾಶ. ವೈಯಕ್ತಿಕ ನಿಂದನೆಗೆ ಅವಕಾಶವಿಲ್ಲ. 9448548127ಗೆ ಸಂದೇಶ ಕಳುಹಿಸಿ.