ಅಧಿಕಾರಿಗಳು ಮೂರುಗಂಟೆಯ ಸುಮಾರಿಗೆ ತಮ್ಮ ಇಲಾಖಾ ವಾಹನವೇರಿ ಸ್ಥಳದಿಂದ ನಿರ್ಗಮಿಸಲು ಮುಂದಾದರು. ಆ ಹೊತ್ತಿಗೆ ಏಕಾಏಕಿ ಓಡಿಹೋದ ಲಕ್ಷ್ಮೀ ಆ ಜೀಪನ್ನು ಅಡ್ಡಗಟ್ಟಿದಳು. ನೋಡಿದವರೆಲ್ಲಾ ನಿಬ್ಬೆರಗು..!
ವಲಸೆ ಕಾರ್ಮಿಕರಾಗಿದ್ದ ಅಪ್ಪ ಅಮ್ಮನ ಹಿಂದೆ ಸುತ್ತುತ್ತಾ.. ಅಂಬೆಗಾಲಿಡುತ್ತಿದ್ದ ತಂಗಿಯ ಆರೈಕೆ ಮಾಡುತ್ತಿದ್ದ ಆ ಅಕ್ಕನ ವಯಸ್ಸು ಇನ್ನೂ 10 ದಾಟಿಲ್ಲ.. ರಸ್ತೆ ಬದಿಯ ಜೋಪಡಿಗಳಲ್ಲಿ ದಿನಪೂರ್ತಿ ಕಳೆದು, ಹರಿದ ಸೀರೆಯಲ್ಲಿ ಮರಕ್ಕೆ ನೇತು ಹಾಕಿದ ತೊಟ್ಟಿಲಿನಲ್ಲಿ ತಂಗಿಯನ್ನು ಮಲಗಿಸುತ್ತಿದ್ದ ಆ ಹುಡುಗಿಗೆ ಬದುಕಿನ ಕನಸುಗಳೇನು ಎಂಬುದೇ ತಿಳಿದಿರಲಿಲ್ಲ.. ಸರ್ಕಾರೇತರ ಸಂಸ್ಥೆಯೊಂದು ಆಕೆಯನ್ನು ಬಿಜಾಪುರದ ಬಾಗೇವಾಡಿಯಲ್ಲಿರುವ ಕಸ್ತೂರ್ ಬಾ ವಸತಿ ಶಾಲೆಗೆ ಸೇರಿಸಿದ ಬಳಿಕ ಆಕೆಯ ಮನಸಿನಲ್ಲಿ ಭವಿಷ್ಯ-ಕನಸುಗಳ ಆಶಯ ಚಿಗುರತೊಡಗಿದೆ. ತನ್ನೊಳಗೆ ಅಡಗಿದ್ದ ನೋವು ದುಮ್ಮಾನಗಳೆಲ್ಲಾ ಮರೆತು ಉಲ್ಲಾಸದಿಂದ ಕಲಿಕೆಯಲ್ಲಿ ತೊಡಗಿದ್ದಾಳೆ. ಅಂದ ಹಾಗೆ ಅವಳ ಹೆಸರು ಲಕ್ಷ್ಮಿ.. ಮೂರ್‍ನಾಲ್ಕು ವರ್ಷದ ಹಿಂದೆ 7 ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.
ಬಿಜಾಪುರದ ಅವಳ ಶಾಲೆಗೆ ಭೇಟಿ ನೀಡಿದ್ದ ಸಂದರ್ಭ ಆಕೆಯ ಹಿಂದಿನ ಕಥೆ ಕೇಳಿ ನನಗೆ ತುಂಬಾ ನೋವಾಯಿತು. ಆಕೆ ಮಾತ್ರ ಅಲ್ಲ, ವಸತಿ ಶಾಲೆಗೆ ಸೇರ್ಪಡೆಗೊಂಡಿದ್ದ 128 ಮಕ್ಕಳ ಹಿಂದೆಯೂ ಹಲವು ನೋವಿನ ಕಥೆಗಳು ಇದ್ದವು.
ಲಕ್ಷ್ಮೀ ಯ ಕಥೆ ಕೇಳಿ..
ಬೀದಿ ಬದುಕಿನಿಂದ ಚೌಕಟ್ಟಿನ ಬದುಕಿಗೆ ಬಂದ ಲಕ್ಷ್ಮೀ ಸ್ವಲ್ಪ ಒರಟು ಸ್ವಭಾವದ ಹುಡುಗಿ ಎಂದು ಆಕೆಯ ಮಾತಿನ ಧಾಟಿಯಲ್ಲೇ ನನಗೆ ಅರ್ಥವಾಯಿತು. ಅವಳ ಜೊತೆ ಮಾತನಾಡಿದ ಬಳಿಕ ಆ ವಸತಿ ಶಾಲೆಯ ಮೇಲುಸ್ತುವಾರಿ ವಹಿಸಿದ್ದ ಸಂಸ್ಥೆಯ ಮುಖ್ಯಸ್ಥೆಯೊಬ್ಬರು ಲಕ್ಷ್ಮೀ ಎಷ್ಟು ಜೋರಿದ್ದಾಳೆ ಎಂದು ಉದಾಹರಣೆ ಸಹಿತ ವಿವರಿಸಿದರು. ಉದಾಹರಣೆ ಹೀಗಿತ್ತು..
ಅದೊಂದು ಸ್ಪರ್ಧಾ ಕಾರ್ಯಕ್ರಮ. ದಿನವಿಡೀ ನಡೆದಿದ್ದ ಸ್ಪರ್ಧಾ ಕಾರ್ಯಕ್ರಮಕ್ಕೆ ಈ ಅನಾಥ ಮಕ್ಕಳು, ಬಡಮಕ್ಕಳು,ವಲಸೆ ಕಾರ್ಮಿಕರ ಮಕ್ಕಳು ಕಲಿಯುತ್ತಿದ್ದ ವಸತಿ ಶಾಲೆಯ ಹೆಣ್ಮಕ್ಕಳನ್ನೂ ಆಹ್ವಾನಿಸಿ, ಸ್ಪರ್ಧೆ ಮಾಡಲಾಗಿತ್ತು. ಬೆಳಗ್ಗಿನಿಂದ ನಡೆದ ಸ್ಪರ್ಧೆ ಮೂರು ಗಂಟೆಯ ವೇಳೆಗೆ ಮುಕ್ತಾಯಗೊಂಡಿತು. ಹಲವು ಶಾಲೆಗಳ ವಿಜೇತ ಮಕ್ಕಳನ್ನು ವೇದಿಕೆಗೆ ಕರೆದು ಬಹುಮಾನ, ಸರ್ಟಿಫಿಕೇಟ್ ನೀಡುತ್ತಿದ್ದ ಅಧಿಕಾರಿಗಳು, ಮೂರುಗಂಟೆಯ ಸುಮಾರಿಗೆ ತಮ್ಮ ಇಲಾಖಾ ವಾಹನವೇರಿ ಸ್ಥಳದಿಂದ ನಿರ್ಗಮಿಸಲು ಮುಂದಾದರು. ಆ ಹೊತ್ತಿಗೆ ಏಕಾಏಕಿ ಓಡಿಹೋದ ಲಕ್ಷ್ಮೀ ಆ ಜೀಪನ್ನು ಅಡ್ಡಗಟ್ಟಿದಳು. ನೋಡಿದವರೆಲ್ಲಾ ನಿಬ್ಬೆರಗು..! ವಸತಿ ಶಾಲೆಯಿಂದ ಲಕ್ಷ್ಮೀಯನ್ನು ಕರೆದುಕೊಂಡು ಬಂದ ಶಿಕ್ಷಕಿಯರಿಗೂ ಒಂದು ತರಹದ ಮುಜುಗರ..
ಜೀಪನ್ನು ತಡೆದ ಲಕ್ಷ್ಮೀ ಹೇಳಿದಳು.. ಏನ್ರೀ ಸಾರ್.. ಯಾಕ್ ಈ ಬೇಧಭಾವ ಮಾಡ್ತೀರಾ ॒ನಾವು ಬಡಮಕ್ಳು ಅಂತಾನಾ.. ಅವ್ರಿಗೆಲ್ಲಾ ಬಹುಮಾನ ಕೊಟ್ರಿ.. ನಾವೂ ಗೆದ್ದಿಲ್ವಾ..ನಮ್ಗೆಲ್ಲಿ ಸರ್ಟಿಫಿಕೇಟ್..? ಅಂದಾಗ ಅಧಿಕಾರಿ, ಬಹುಮಾನ ಇತ್ತಮ್ಮಾ.. ಆದ್ರೆ ಇವಾಗ ಎಲ್ಲಾ ಕಳ್ದೋಯ್ತು… ನಾಳೆ ಕೊಡೋಣ.. ಎಂದು ಸಮಜಾಯಿಷಿ ನೀಡಿದ್ರು..
ಅಷ್ಟಕ್ಕೆ ಸುಮ್ಮನಾಗದ ಲಕ್ಷ್ಮೀ ಹೇಳಿದಳು. ನಾವೂ ಗೆದ್ದಿದ್ದೀವಿ.. ನಮ್ಗೆ ಬಹುಮಾನ ಕೊಡೋವರ್‍ಗೂ ಈ ಜಾಗಬಿಟ್ಟು ಕದಲಲ್ಲ ಎಂದು ಜೀಪಿಗೆ ಅಂಟಿಕೊಂಡು ನಿಂತಳು ಲಕ್ಷ್ಮೀ. ಕೊನೆ ಆಕೆಯ ಪ್ರತಿಭಟನೆಗೆ ಮಣಿದ ಅಧಿಕಾರಿಗಳು ಯಾರಿಗೋ ಫೋನ್ ಮಾಡಿದ್ರು, ಅಂತೂ ಇಂತೂ ಸಂಜೆ 6 ಗಂಟೆಯ ಸುಮಾರಿಗೆ ಈ ಮಕ್ಕಳ ಬಹುಮಾನಗಳು ಕೈ ಸೇರಿತು. ಅಷ್ಟು ಜೋರಿದ್ದಾಳೆ ಈ ಲಕ್ಷ್ಮೀ ಎಂದರು ಆ ಮೇಡಂ. ಆಗ ನಾನಂದೆ, ಇಲ್ಲ ಮೇಡಂ, ಅದನ್ನು ಜೋರು ಅಂತ ಹೇಳಬಾರದು. ಅಷ್ಟು ಜೋರು ಇಲ್ದಿದ್ರೆ ಅವ್ಳಿಗೆ ಬಹುಮಾನ ಸಿಕ್ತಿರ್‍ಲಿಲ್ಲ.. ಅವಳ ಜೊತೆ ಮತ್ತಷ್ಟು ಮಕ್ಳಿಗೆ ಅನ್ಯಾಯ ಆಗ್ತಿತ್ತು ಅಲ್ವಾ.. ಎಂದಾಗ ಹೌದೆಂದರು ಆ ಮೇಡಂ.
ಲಕ್ಷ್ಮೀಯ ಬದುಕಿನಲ್ಲಿ ಹೊಸ ಆಶಯಗಳನ್ನು ತುಂಬಿದ ಶಿಕ್ಷಣ ವ್ಯವಸ್ಥೆ ತನ್ನ ಹಕ್ಕುಗಳನ್ನು, ತಾನೇ ಕೇಳಿಕೊಳ್ಳಬೇಕು ಎಂಬುದನ್ನು ಕಲಿಸಿಕೊಟ್ಟಿದೆ. ಹಾಗಾಗಿಯೇ ಇಲ್ಲಿ ಲಕ್ಷ್ಮೀ ಅಧಿಕಾರಿಗಳಿಗೇ ಬುದ್ದಿ ಹೇಳುವ ಬುದ್ದಿವಂತಳಾದಳು. ಅಧಿಕಾರಿಗಳು ಇಲ್ಲಿ ತೋರಿದ ದಡ್ಡತನದ ಬೇಧಭಾವ ಅವರೇ ತಲೆತಗ್ಗಿಸುವಂತೆ ಮಾಡಿತು.
ಮೈ ರೋಮಾಂಚನಗೊಳ್ಳುವ ಇಂತಹ ಅದೆಷ್ಟೋ ಸನ್ನಿವೇಶಗಳು ನಡೆದಾಗ ನಾವು ಮಕ್ಕಳ ವರ್ತನೆಕಡೆಗೇ ಗಮನಹರಿಸಿ..ಶಿಸ್ತು-ಶಿಸ್ತು ಎಂದೆಲ್ಲಾ ಪಾಠ ಹೇಳುತ್ತೇವೆ. ಮಕ್ಕಳ ಬೇಡಿಕೆ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಬೇಡಿಕೆ ಏನೆಂಬುದನ್ನು ಕೇಳಿಕೊಂಡು ಅವರಿಗೂ ತಿಳುವಳಿಕೆ ಹೇಳಿ ಸಮಸ್ಯೆ ಪರಿಹರಿಸುವುದು ಸಮಯೋಚಿತ ಪ್ರಜ್ಞೆ. ಏನೇ ಇರಲಿ ಲಕ್ಷ್ಮೀ ಯಂತಹ ಮಕ್ಕಳ ಧ್ವನಿಗೆ ದೊಡ್ಡವರೂ ಧ್ವನಿಗೂಡಿಸೋಣ..ಬನ್ನಿ..
www.bantwalnews.com ಸಂಪಾದಕ: ಹರೀಶ ಮಾಂಬಾಡಿ. for advertisements pls contact: 9448548127