ಸುದ್ದಿಗಳು

ಭಾನುವಾರ ಬ್ಯಾಂಕ್ ವ್ಯವಹಾರ, ಗ್ರಾಹಕರಿಗೆ ಎಬಿವಿಪಿ ಸಹಕಾರ

ಬಂಟ್ವಾಳ: ಗ್ರಾಹಕರೇ ಗಾಬರಿಯಾಗಬೇಡಿ. ನಾವು ಹಳೇ ನೋಟುಗಳಾದ 500 ಮತ್ತು ಸಾವಿರ ರೂಪಾಯಿಗಳನ್ನು ಸ್ವೀಕರಿಸುತ್ತೇವೆ. ಅದೂ 30 ಡಿಸೆಂಬರ್ 2016ವರೆಗೆ. ನಮ್ಮ ಬ್ಯಾಂಕಿಗೆ ಐದಾರು ದಿನದ  ಬಳಿಕ ಭೇಟಿ ನೀಡಿ ಸಹಕರಿಸಿ.

ಹೀಗೆಂದು ಬ್ಯಾಂಕುಗಳು ನೋಟಿನ ಗೊಂದಲ ನಿವಾರಿಸಲು ಮೆಸೇಜುಗಳನ್ನು ಕಳಿಸುತ್ತಿದ್ದರೆ, ತಮಗೆ ಸಿಕ್ಕಿದ 500, 1000 ನೋಟುಗಳನ್ನು “ನಗದೀಕರಿಸಲು’’ ಬ್ಯಾಂಕುಗಳಲ್ಲಿ ಜನರು ಸಾಲುಗಟ್ಟಿ ನಿಲ್ಲುವುದು ನಿಂತಿಲ್ಲ.

ಬಿ.ಸಿ.ರೋಡಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂಭಾಗವಂತೂ ಬೆಳಗ್ಗೆ 9.30ಕ್ಕೆ ಉದ್ದದ ಕ್ಯೂ ಇತ್ತು. ಕ್ರಮೇಣ ಮಧ್ಯಾಹ್ನವಾಗುತ್ತಿದ್ದಂತೆ ಬ್ಯಾಂಕುಗಳಲ್ಲಿ ರಶ್ ಕಡಿಮೆಯಾಗತೊಡಗಿತು. ಮುಚ್ಚಿದ್ದ ಎಟಿಎಂಗಳು ತೆರೆದೊಡನೆ ಅಲ್ಲಿ ಜನ ಜಮಾಯಿಸತೊಡಗಿದರು.

ಎಬಿವಿಪಿ ನೆರವು

ನೋಟು ಲಭ್ಯತೆ ಬಗ್ಗೆ ಇರುವ ಗೊಂದಲ ನಿವಾರಣೆ ಹಾಗೂ ಜನರ ಸಮಸ್ಯೆ ನೀಗಿಸಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸುಮಾರು 50 ಕಾರ್ಯಕರ್ತರು ಬಂಟ್ವಾಳದ ವಿವಿಧ ಬ್ಯಾಂಕುಗಳ ಎದುರು ಸ್ವಯಂಪ್ರೇರಣೆಯಿಂದ ಹೆಲ್ಪ್ ಡೆಸ್ಕ್ ತೆರೆದರು.

ಈ ಸಂದರ್ಭ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಅಶ್ವತ್, ವಿಭಾಗ ಸಂಚಾಲಕ ಪ್ರಣಮ್ ರಾಜ್ ಅಜ್ಜಿಬೆಟ್ಟು, ಪರೀಕ್ಷೆಗಳು ಇದ್ದ ಕಾರಣ ನಾವು ನಿನ್ನೆ, ಮೊನ್ನೆ ಬರಲಾಗಲಿಲ್ಲ. ಇಂದು 50 ಕಾರ್ಯಕರ್ತರು ಇಲ್ಲಿ ಸಹಾಯಕ್ಕಾಗಿ ಬಂದಿದ್ದೇವೆ. ನಾಳೆ ಪರೀಕ್ಷೆ ಇಲ್ಲದವರು ಬಂದು ನೆರವಾಗುತ್ತೇವೆ ಎಂದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ವಿದ್ಯಾರ್ಥಿಗಳಿಗೆ ಕುರ್ಚಿ ಟೇಬಲ್ ವ್ಯವಸ್ಥೆಯನ್ನೂ ಮಾಡಲಾಯಿತು.

ತಾಲೂಕು ಸಂಚಾಲಕ ಪ್ರಮೋದ್, ಪ್ರಮುಖರಾದ ಆಶಿಷ್, ಕಾಜಲ್, ಕಾರ್ತಿಕ್, ರಶ್ಮಿ, ಅರ್ಜುನ್ ಪೈ ಮೊದಲಾದವರು ಹಾಜರಿದ್ದು, ಸಾಲಲ್ಲಿ ನಿಂತವರಿಗೆ ಮಾಹಿತಿ ಕೊಡುವುದು, ಅನಕ್ಷರಸ್ಥರಿಗೆ ಸಹಾಯ, ಹಿರಿಯ ನಾಗರಿಕರಿಗೆ ನೆರವು ನೀಡುವ ಕಾರ್ಯ ಮಾಡಿದರು.

Team bantwal news