ಬಂಟ್ವಾಳ: ಪಕ್ಷಬೇಧ ಮರೆತು ಸಂಘಟನೆ ಅಭಿವೃದ್ಧಿಗೊಂಡರೆ ಮಾತ್ರ ಯಶಸ್ಸು ಸಾಧ್ಯ ಎಂದು ಮಾಜಿ ಸಚಿವ, ವಿಧಾನಪರಿಷತ್ತು ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನರಿಕೊಂಬಿನ ಮೊಗರ್ನಾಡಿನಲ್ಲಿರುವ ಶ್ರೀ ಲಕ್ಷ್ಮೀ ಬಿಲ್ಡಿಂಗ್ ನಲ್ಲಿ ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿಯಮಿತ ಶಂಭೂರು ಇದರ ನೂತನ ಬ್ಯಾಂಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮೂರ್ತೆದಾರರ ಮುಂದಿನ ಪೀಳಿಗೆ ಸಬಲರಾಗ ಉತ್ತಮ ಉದ್ಯೋಗದೊಂದಿಗೆ ಪ್ರಗತಿಯತ್ತ ಸಾಗುವಂತಾಗಲು ಬ್ಯಾಂಕ್ ನೆರವಾಗಲಿ ಎಂದು ಆಶಿಸಿದ ಅವರು, ದೇವರಾಜ ಅರಸು, ಬಂಗಾರಪ್ಪ ಅವರು ಹಿಂದುಳಿದ ವರ್ಗಗಳ ಏಳಿಗೆಗೆ ಮಾಡಿದ ಕಾರ್ಯಗಳನ್ನು ಪ್ರಸ್ತಾಪಿಸಿದರು. ಶೇ.2 ಬಡ್ಡಿಯ ಸಾಲ ಘೋಷಣೆಯಾಗಿದ್ದು ಇನ್ನೂ ಅನುಷ್ಠಾನಗೊಂಡಿಲ್ಲ, ರಾಜ್ಯದ ಜನಸಂಖ್ಯೆಯಲ್ಲಿ 5ನೇ ಸ್ಥಾನದಲ್ಲಿರುವ ಈಡಿಗರು ಪ್ರಬಲರಾಗಬೇಕು, ಪಕ್ಷಬೇಧ ಮರೆತು ಒಟ್ಟಾಗಬೇಕು ಎಂದು ಕರೆಯಿತ್ತರು.
ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲ ಅಧ್ಯಕ್ಷ ಸಂಜೀವ ಪೂಜಾರಿ ವಹಿಸಿದ್ದರು. ಪುರೋಹಿತ ಕೇಶವ ಶಾಂತಿ ದೀಪ ಪ್ರಜ್ವಲನೆಗೈದರು. ಬಂದರು ಠಾಣೆ ವೃತ್ತನಿರೀಕ್ಷಕ ಶಾಂತಾರಾಮ ಕುಂದರ್ ಮತ್ತು ಉದ್ಯಮಿ ಭುವನೇಶ್ ಪಚ್ಚಿನಡ್ಕ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಪ್ರಕಾಶ್ ಕಾರಂತ ಭದ್ರತಾ ಕೊಠಡಿ ಉದ್ಘಾಟಿಸಿದರು. ನರಿಕೊಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶೋಧರ ಕರ್ಬೆಟ್ಟು ಸೇಫ್ ಲಾಕರ್ ಉದ್ಘಾಟಿಸಿದರು. ಪದ್ಮಶ್ರೀ ಎಲೆಕ್ಟ್ರಿಕಲ್ ಸರ್ವೀಸಸ್ ಬಿ.ಸಿ.ರೋಡಿನ ಮಾಲೀಕ, ಉದ್ಯಮಿ ಪದ್ಮನಾಭ ಮಯ್ಯ ಕಂಪ್ಯೂಟರ್ ಉದ್ಘಾಟಿಸಿದರು. ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಠೇವಣಿ ಪತ್ರ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಸಹಕಾರ ಭಾರತಿ ಬಂಟ್ವಾಳ ತಾಲೂಕು ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ನರಿಕೊಂಬು ಗ್ರಾಪಂ ಉಪಾಧ್ಯಕ್ಷೆ ರಾಜೀವಿ ಕೃಷ್ಣಪ್ಪ ಪೂಜಾರಿ, ಉದ್ಯಮಿ ಅಂಚನ್ ಗಾರ್ಮೆಂಟ್ಸ್ ಮಾಲೀಕ ಪ್ರಕಾಶ್ ಅಂಚನ್, ಕೃಷಿಕ ಶ್ರೀನಿವಾಸ ಪೂಜಾರಿ ರಾಯಸ, ಕೆದ್ದೇಲುಗುತ್ತು ಕೃಷಿಕ ಕೊರಗಪ್ಪ ಬಂಗೇರ, ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ವಾಮನ ಟೈಲರ್, ಪುದು ಮೂರ್ತೆದಾರರ ಸಹಕಾರ ಸಂಘ ಅಧ್ಯಕ್ಷ ಪುರುಷ ಎನ್. ಸಾಲಿಯಾನ್, ಬಿಲ್ಲವ ಮಹಾಮಂಡಲ ವಕ್ತಾರ ಹರಿಕೃಷ್ಣ ಬಂಟ್ವಾಳ, ಉದ್ಯಮಿ ಗೋಪಾಲ ಸುವರ್ಣ, ವಿಜಯಾ ಬ್ಯಾಂಕ್ ಮ್ಯಾನೇಜರ್ ಬೇಬಿ ಕುಂದರ್, ರಮೇಶ ಪೂಜಾರಿ, ಉಪಸ್ಥಿತರಿದ್ದು ಶುಭ ಹಾರೈಸಿದರು.
ಬ್ಯಾಂಕ್ ಅಧ್ಯಕ್ಷ ಪುರುಷೋತ್ತಮ ಸಾಲಿಯಾನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಮಾಧವ ಕೆ ವಂದಿಸಿದರು. ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.