ಕನ್ಯಾನ: ಇಲ್ಲಿನ ಅಂಗಡಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ವ್ಯಕ್ತಿಯೋರ್ವರಿಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಾಗಿ ದೂರಲಾಗಿದೆ.
ಕನ್ಯಾನ ಗ್ರಾಮದ ಶಿರಂಕಲ್ಲು ನಿವಾಸಿ ಅಬೂಬಕ್ಕರ್(58) ಹಲ್ಲೆಗೊಳಗಾದ ವ್ಯಕ್ತಿ.
ಅವರೀಗ ಸಮುದಾಯಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕನ್ಯಾನದ ಚಂದ್ರಹಾಸ ಮತ್ತು ದಿನೇಶ ಅವರು ಬೈಕಿನಲ್ಲಿ ಅಂಗಡಿ ಸಮೀಪ ಆಗಮಿಸಿ, ಸಾಮಗ್ರಿ ಖರೀದಿ ನೆಪದಲ್ಲಿ ಮಾತನಾಡಿಸಿ, ಬಳಿಕ ಒಳನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಘಟನೆ ನಡೆದ ಕೂಡಲೇ ಸ್ಥಳದಲ್ಲಿ ಜನ ಸೇರಿದ ಸಂದರ್ಭ ಹಲ್ಲೆ ಮಾಡಿದವರುಪರಾರಿಯಾಗಿದ್ದಾರೆ. ಈ ಸಂದರ್ಭ ಕನ್ಯಾನ ಪೇಟೆಯಲ್ಲಿಯೂ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಬಹುದೆಂದು ಊಹಿಸಿದ ವಿಟ್ಲ ಪೊಲೀಸರು, ಅಂಗಡಿ ಮುಚ್ಚಿಸಿದರು.
ಕನ್ಯಾನ ಪಿಲಿಂಗುಳಿಯ ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಅದೇ ಗ್ರಾಮದ ಶಿರಂಕಲ್ಲು ನಿವಾಸಿ ಸಮೀರ್ ಅವರ ತಂದೆ ಹಲ್ಲೆಗೊಳಗಾದವರು.
ಘಟನೆ ಬಳಿಕ ಪರಿಸರದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು, ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು. ಪೊಲೀಸರು ಪರಿಸ್ಥಿತಿಯನ್ನು ರಾತ್ರಿ ವೇಳೆ ನಿಯಂತ್ರಣಕ್ಕೆ ತಂದಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಭೂಷಣ ಜಿ ಬೊರಸೆ, ಹೆಚ್ಚುವರಿ ಅಧೀಕ್ಷಕ ವೇದಮೂರ್ತಿ, ಬಂಟ್ವಾಳ ಸಹಾಯಕ ಅಧೀಕ್ಷಕ ರವೀಶ್ ಸಿ ಆರ್, ವೃತ್ತ ನಿರೀಕ್ಷಕ ಬಿ ಕೆ ಮಂಜಯ್ಯ, ಉಪನೀಕ್ಷಕ ಪ್ರಕಾಶ್ ದೇವಾಡಿಗ ಅವರು ಬೇಟಿ ನೀಡಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.