ವಿಟ್ಲ ಕಾಲೇಜು ಅಭಿವೃದ್ಧಿ ಸಮಿತಿಯಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಖಡಕ್ ಸೂಚನೆ
ವಿಟ್ಲ: ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸತತ ಮೂರು ಬಾರಿ ತಪ್ಪು ಮಾಡಿದಾಗ ಅವರಿಗೆ ಟಿ.ಸಿ ಕೊಟ್ಟು ಕಳುಸುವಂತೆ ತನ್ನ ಕ್ಷೇತ್ರದ ಕಾಲೇಜುಗಳ ಪ್ರಾಂಶುಪಾಲಕರಿಗೆ ಸೂಚಿಸಿದ್ದೇನೆ ಎಂದು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಶನಿವಾರ ವಿಟ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳನ್ನು ತಯಾರು ಮಾಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಕಾರ್ಯ ನಡೆಯಬೇಕು. ಕಾಲೇಜುಗಳಲ್ಲಿ ಶಿಸ್ತು ಉಂಟಾಗಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ಒಂದೇ ದೃಷ್ಟಿಯಲ್ಲಿ ನೋಡಿದಾಗ ಯಾವುದೇ ಗೊಂದಲ ಉಂಟಾಗುವುದಿಲ್ಲ. ಕಾಲೇಜು ಅಭಿವೃದ್ಧಿಗೆ ಶಾಲಾ ಅಭಿವೃದ್ಧಿಗಾಗಿ ಸ್ಥಳೀಯ ಪಟ್ಟಣ ಪಂಚಾಯಿತಿ ಕೈಜೋಡಿಸಬೇಕೆಂದು ಕರೆ ನೀಡಿದರು.
ಕಾಲೇಜು ಪ್ರಾಂಶುಪಾಲ ಶಂಕರ್ ಪಾಟಾಲಿ ಅವರು ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳಾದ ಶೌಚಾಲಯ, ಕಟ್ಟಡ ದುರಸ್ತಿ, ಕಾಲೇಜು ಕ್ರೀಡಾಂಗಣ, ಹೂದೋಟ, ಕಮಾನು ನಿರ್ಮಾಣ, ಆವರಣ ಗೋಡೆ, ಕಾಲೇಜು ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ, ಸಿಬ್ಬಂದಿ ವೇತನ ಪರಿಷ್ಕರಣೆಗಳ ಬಗ್ಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೆರ ಮಾತನಾಡಿ ಕಾಲೇಜಿಗೆ ಅನುದಾನ ನೀಡುವ ಬಗ್ಗೆ ಭರವಸೆ ನೀಡಿದರು. ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ರಾಮಚಂದ್ರ, ಉಪನ್ಯಾಸಕಿ ಶೈಲಜಾ, ರಾಮ, ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.