ಬಂಟ್ವಾಳ: ಬೆಳಗ್ಗೆ 11 ಗಂಟೆ ಆಗುತ್ತಿದ್ದಂತೆ ಯಾವ ಬ್ಯಾಂಕುಗಳಲ್ಲೂ ಚೇಂಜ್ ಕೊಡಲು ನೋಟಿಲ್ಲ. ನೂರು ರೂಪಾಯಿ ನೋಟಿದೆಯೇ ಎಂದು ಜನರಿಂದ ಎಲ್ಲೆಡೆ ಹುಡುಕಾಟ. ಇದು ಬಿ.ಸಿ.ರೋಡ್ ಸಹಿತ ತಾಲೂಕಿನ ವಿವಿಧ ಬ್ಯಾಂಕುಗಳಲ್ಲಿ ಶನಿವಾರ ಬೆಳಗ್ಗೆ ಕಂಡು ಬಂದ ದೃಶ್ಯ.
500, 1000 ನೋಟು ಬದಲಾಯಿಸಲು ಶನಿವಾರವೂ ಗ್ರಾಹಕರು ಬ್ಯಾಂಕುಗಳ ಮುಂದೆ ಜಮಾಯಿಸಿದರು. ಬಿ.ಸಿ.ರೋಡಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕ ಬ್ಯಾಂಕ್, ಅಂಚೆ ಕಚೇರಿ ಸೇರಿದಂತೆ ವಿವಿಧ ವಿತ್ತೀಯ ಸಂಸ್ಥೆಗಳಲ್ಲಿ ಸಾಲುಗಟ್ಟಿ ಜನರು ನಿಂತಿದ್ದರು.
ಎಟಿಎಂಗಳಲ್ಲಿ ಜನರಿಗೆ ಬೇಕಾಗುವಷ್ಟು ಹಣವನ್ನು ತುಂಬಿಸದೇ ಇರುವ ಕಾರಣ ಚಿಲ್ಲರೆಗಾಗಿ ಪರದಾಡಬೇಕಾಯಿತು. ಬಂಟ್ವಾಳದಲ್ಲಿರುವ ಎಟಿಎಂಗಳು ಕಾರ್ಯಾಚರಿಸಲೇ ಇಲ್ಲ. ಬಿ.ಸಿ.ರೋಡಿನ ಕೆಲ ಎಟಿಎಂಗಳ ಮುಂದೆ ಹಣ ಪಡೆಯಲು ಹಾಗೂ ತುಂಬಸಲು ಜನರು ಸರತಿಯಲ್ಲಿ ನಿಂತಿದ್ದರು. ಬ್ಯಾಂಕ್ ಸಿಬ್ಬಂದಿ ಸಾಲಿನಲ್ಲಿ ನಿಂತವರಿಗೆ ನೀರು ಕೊಟ್ಟು ಉಪಚರಿಸುತ್ತಿರುವ ದೃಶ್ಯ ಕಂಡುಬಂತು.
ವಿಶೇಷ ಎಂದರೆ ಗಾರೆ, ಕೂಲಿ ಕಾರ್ಮಿಕರ ಸಹಿತ ವಿವಿಧ ಕಾರ್ಮಿಕ ವರ್ಗಕ್ಕೆ ಶನಿವಾರ ಸಂಬಳ ಪಾವತಿ ದಿನವಾಗಿರುವ ಕಾರಣ, ಅವರ ಮಾಲೀಕರು ನೋಟು ಬದಲಾಯಿಸಲು ಹರಸಾಹಸಪಟ್ಟರು.
ತರಕಾರಿ ಮಾರುಕಟ್ಟೆ ಸಹಿತ ವ್ಯಾಪಾರ ಮಳಿಗೆಗಳಲ್ಲಿ ವ್ಯವಹಾರವು ನಿರೀಕ್ಷಿತ ಪ್ರಮಾಣದಲ್ಲಿ ಇರಲಿಲ್ಲ.
ಬ್ಯಾಂಕುಗಳು ಭಾನುವಾರವೂ ತೆರೆದಿರುವ ಕಾರಣ ಜನಸಾಮಾನ್ಯರು ನಿಟ್ಟುಸಿರುಬಿಡುವಂತಾಗಿದೆ.
ಶುಭ ಕಾರ್ಯಗಳಿಗೆ 500 ಮತ್ತು 1000 ರೂ ನೋಟುಗಳೇ ಹೆಚ್ಚು ಚಲಾವಣೆಯಲ್ಲಿರುತ್ತದೆ. ಈ ನೋಟು ನಿಷೇಧವಾಗಿರುವ ಕಾರಣ ಮದುವೆ ಇನ್ನಿತರ ಶುಭ ಕಾರ್ಯಗಳ ಆಯೋಜಕರು ಪರದಾಡುವಂತಾಗಿದೆ.