ಬಂಟ್ವಾಳ: ಬಿ.ಸಿ.ರೋಡಿನಿಂದ ಅಡ್ಡಹೊಳೆವರೆಗೆ ಸುಮಾರು 63 ಕಿ.ಮೀ. ರಸ್ತೆ 2350 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು ದೇಶದಲ್ಲೇ ಇಷ್ಟು ಉದ್ದದ ರಸ್ತೆ ಕಾಂಕ್ರೀಟ್ ಕಾಮಗಾರಿಯಾಗುವುದು ಇದೇ ಮೊದಲು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬುಧವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಅಹವಾಲು ಸ್ವೀಕರಿಸಿದ ಬಳಿಕ ಬಿ.ಸಿ.ರೋಡಿನಲ್ಲಿರುವ ಪಕ್ಷ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದರ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಎಲ್ ಅಂಡ್ ಟಿ ಕಾಮಗಾರಿ ನಡೆಸುತ್ತಿದೆ. ಬಾಳ್ತಿಲದಿಂದ ಕಲ್ಲಡ್ಕವರೆಗಿನ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಉಳಿದಿದ್ದು, ಇಲ್ಲಿ ಫ್ಲೈ ಓವರ್ ನಿರ್ಮಿಸಲಾಗುವುದು ಎಂದರು.
ಮೂಲ್ಕಿ-ಪೊಳಲಿ-ಬಿ.ಸಿ.ರೋಡ್-ಮೇಲ್ಕಾರ್ ರಸ್ತೆ ಅಗಲಗೊಳಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಗೊಂಡಿದ್ದು, ಡಿಪಿಎಆರ್ ಹಂತದಲ್ಲಿದೆ. ಇದರ ಶಿಲಾನ್ಯಾಸಕ್ಕೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಆಹ್ವಾನಿಸಲಾಗಿದೆ ಎಂದರು.