ಫರಂಗಿಪೇಟೆ: ಫರಂಗಿಪೇಟೆ ಮೀನು ಮಾರುಕಟ್ಟೆಗೆ ಕೆಲವು ದಿನಗಳಿಂದ ತೆರವಿನ ಭೀತಿ. ಮಾರುಕಟ್ಟೆ ಅದೇ ಜಾಗದಲ್ಲಿ ಉಳಿಯುವಂತಾಗಲು ವ್ಯಾಪಾರಿಗಳು ವಿವಿಧ ಪ್ರಯತ್ನಗಳನ್ನು ಮಾಡುತ್ತಿದ್ದರೆ, ರೈಲ್ವೆ ಇಲಾಖೆ ತೆರವಿನ ಮುನ್ಸೂಚನೆ ನೀಡುತ್ತಿದೆ.
ಹಲವು ವರ್ಷಗಳಿಂದ ಫರಂಗಿಪೇಟೆ ಬಸ್ ನಿಲ್ದಾಣದ ಬಳಿ ಇದ್ದ ಮೀನು ಮಾರುಕಟ್ಟೆ ಮಂಗಳೂರು-ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಗೊಳ್ಳುವ ಸಮಯದಲ್ಲಿ ಕುಂಪನಮಜಲು ಕ್ರಾಸ್ ರಸ್ತೆಯ ಬಳಿಗೆ ಸ್ಥಳಾಂತರಗೊಂಡಿತ್ತು. ಪ್ರಸ್ತುತ ಮೀನು ಮಾರುಕಟ್ಟೆ ಇರುವ ಸ್ಥಳ ರೈಲ್ವೆ ಇಲಾಖೆಗೆ ಸೇರಿದ್ದಾಗಿದೆ. ಕೆಲವು ದಿನಗಳ ಹಿಂದೆ ಫರಂಗಿಪೇಟೆಯಲ್ಲಿ ಜನ ಸಂಪರ್ಕ ಸಭೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಮುಂದೆ ಮೀನು ಮಾರುಕಟ್ಟೆ ವಿಷಯ ಬಂದಿತ್ತು.
ತಕ್ಷಣ ಸ್ಪಂದಿಸಿದ ಎಸ್ಪಿ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಟ್ರಾಫಿಕ್ ಪೊಲೀಸರಿಗೆ ಆದೇಶ ನೀಡಿದ್ದರು.
ಜಿಲ್ಲಾ ಎಸ್ಪಿಯ ಆದೇಶದ ಹಿನ್ನೆಲೆಯಲ್ಲಿ ಫರಂಗಿಪೇಟೆಯಲ್ಲಿ ಕಾರ್ಯಾಚರಣೆ ನಡೆಸಿದ ಟ್ರಾಫಿಕ್ ಪೊಲೀಸರು ಮೀನು ಮಾರುಕಟ್ಟೆಯಿಂದ ಹೆದ್ದಾರಿ ಸಂಚಾರಕ್ಕೆ ಆಗುವ ಸಮಸ್ಯೆಯನ್ನು ಪರಿಶೀಲನೆ ನಡೆಸಿ ಮಾರುಕಟ್ಟೆಗೆ ಬರುವ ಗ್ರಾಹಕರ ವಾಹನಗಳು ನಿಲ್ಲಿಸಲು ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಮೀನು ವ್ಯಾಪಾರಿಗಳಿಗೆ ಸೂಚಿಸಿದ್ದರು. ಅದರಂತೆ ಮೀನು ವ್ಯಾಪಾರಿಗಳು ಒಟ್ಟು ಸೇರಿ ಮೀನು ಮಾರುಕಟ್ಟೆ ಇದ್ದ ಸ್ಥಳಕ್ಕೆ ಮಣ್ಣು ತುಂಬಿಸಿ ಹೆದ್ದಾರಿಯ ಮಟ್ಟಕ್ಕೆ ಸಮತಟ್ಟು ಮಾಡಿದ್ದಾರೆ. ಇದರಿಂದ ಗ್ರಾಹಕರಿಗೆ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಲು ಬೇಕಾದಷ್ಟು ಜಾಗದ ವ್ಯವಸ್ಥೆ ಆಗಿದೆ.
ಆದರೆ ಮಣ್ಣು ತುಂಬಿಸಿರುವ ಜಾಗ ರೈಲ್ವೆ ಇಲಾಖೆಗೆ ಸೇರಿದ್ದಾಗಿರುವುದರಿಂದ ವಿಷಯ ತಿಳಿದು ಪುತ್ತೂರು ವಿಭಾಗದ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.
ಎರಡು ದಿನಗಳಲ್ಲೇ ರೈಲ್ವೆ ಜಾಗದಿಂದ ಮಾರುಕಟ್ಟೆ ತೆರವುಗೊಳಿಸುವಂತೆ ಸೂಚಿಸಿ ತೆರಳಿದ್ದರು. ಎರಡು ದಿನಗಳ ಬಳಿಕ ಸಿಬ್ಬಂದಿ ಜೊತೆಯಲ್ಲಿ ಮತ್ತೆ ಆಗಮಿಸಿದ ರೈಲ್ವೆ ಅಧಿಕಾರಿಗಳು ಮಾರುಕಟ್ಟೆಯ ತೆರವು ಕಾರ್ಯಾಚರಣೆಗೆ ಮುಂದಾಗಿದ್ದರು. ಈ ಸಂದರ್ಭ ಸ್ಥಳೀಯ ಪ್ರಮುಖರು ಸ್ಥಳಕ್ಕಾಗಮಿಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮೀನು ವ್ಯಾಪಾರಿಗಳಿಗೆ ಪರ್ಪಾಯ ವ್ಯವಸ್ಥೆ ಆಗುವವರೆಗೆ ತೆರವುಗೊಳಿಸಕೂಡದು ಎಂದು ಎಚ್ಚರಿಸಿದ್ದಾರೆ. ಸ್ಥಳೀಯರ ತೀವ್ರ ವಿರೋಧದಿಂದಾಗಿ ರೈಲ್ವೆ ಅಧಿಕಾರಿಗಳು ಅಂದು ವಾಪಸ್ ಹೋಗಿದ್ದಾರೆ. ಆದರೆ ಇನ್ನು ಯಾವ ಸಂದರ್ಭದಲ್ಲೂ ಬೇಕಾದರೂ ರೈಲ್ವೆ ಅಧಿಕಾರಿಗಳು ಬಂದು ಮಾರುಕಟ್ಟೆಯನ್ನು ತೆರವುಗೊಳಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅದಕ್ಕೂ ಮೊದಲು ಸ್ಥಳೀಯ ಪಂಚಾಯತ್ ಅದೇ ಸ್ಥಳದಲ್ಲಿ ಮೀನು ಮಾರುಕಟ್ಟೆಯನ್ನು ಉಳಿಸುವ ಅಥವಾ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂಬುದು ಮೀನು ವ್ಯಾಪಾರಿಗಳ ಆಗ್ರಹ.
ಮೀನು ಮಾರುಕಟ್ಟೆಗೆ ಸ್ಥಳ ಒದಗಿಸಲು ಫರಂಗಿಪೇಟೆಯಲ್ಲಿ ಸರಕಾರಿ ಜಾಗ ಇಲ್ಲ. ಪ್ರಸ್ತುತ ಮಾರುಕಟ್ಟೆ ರೈಲ್ವೆ ಇಲಾಖೆಗೆ ಸೇರಿದ್ದ ಜಾಗದಲ್ಲಿದ್ದು ಆ ಜಾಗವನ್ನು 25 ವರ್ಷ ಲೀಝ್‌ಗೆ ನೀಡುವಂತೆ ಗ್ರಾಪಂನಲ್ಲಿ ನಿರ್ಣಯ ಅಂಗೀಕರಿಸಿ ರೈಲ್ವೆ ಇಲಾಖೆಗೆ ನೀಡಲಾಗಿತ್ತು. ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಕೆಲವು ದಿನಗಳ ಹಿಂದೆ ರೈಲ್ವೆ ಅಧಿಕಾರಿಗಳು ಮೀನು ಮಾರುಕಟ್ಟೆ ತೆರವುಗೊಳಿಸಲು ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಸಚಿವ ಯು.ಟಿ.ಖಾದರ್‌ರನ್ನು ಭೇಟಿ ಮಾಡಿ ವಿಷಯ ತಿಳಿಸಲಾಗಿತ್ತು.
ಸಚಿವರು ರಾಷ್ಟ್ರೀಯ ಹೆದ್ದಾರಿ, ಜಿಲ್ಲಾ ಪೊಲೀಸ್ ಇಲಾಖೆ, ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಮೀನು ಮಾರುಕಟ್ಟೆ ತೆರವುಗೊಳಿಸದಂತೆ ಸೂಚಿಸಿದ್ದು, ಮೀನು ವ್ಯಾಪಾರಿಗಳಿಗೆ ಪೂರಕವಾಗಿ ವ್ಯವಸ್ಥೆ ಮಾಡಲು ಮೂರು ಇಲಾಖೆಯ ಅಧಿಕಾರಿಗಳ ಸಭೆ ಕರೆಯುವ ನಿರೀಕ್ಷೆ ಇದೆ.