ಬಂಟ್ವಾಳ: ಸಾಮಾಜಿಕ,ಸಾಂಸ್ಕೃತಿಕ,ಶಿಕ್ಷಣ,ಆರೋಗ್ಯ ಕ್ಷೇತ್ರಗಳಲ್ಲಿ ಕಳೆದ 36 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪುಂಜಾಲಕಟ್ಟೆಯ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ವತಿಯಿಂದ ತುಳು ಭಾಷೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆ ಸೇರಿದಂತೆ ಅವಿಭಜಿತ ದ.ಕ.ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆ ನಡೆಯಲಿದ್ದು ನಾಟಕ ಕೃತಿ ಮತ್ತು ತಂಡಗಳನ್ನು ಆಹ್ವಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಮೋಹನ್ ಸಾಲ್ಯಾನ್ ಅವರು ತಿಳಿಸಿದ್ದಾರೆ.
ಮಿತ್ರ ಮಂಡಳಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು 2017 ಜ.14ರಿಂದ ಜ.21ರವರೆಗೆ ನಾಟಕ ಸ್ಪರ್ಧೆ ಏರ್ಪಡಿಸಲಾಗಿದ್ದು ಆಸಕ್ತ ತಂಡಗಳು ನ.30ರೊಳಗಾಗಿ ಕೃತಿ ಕಳುಹಿಸಿ ಕೊಡುವಂತೆ ಅವರು ಕೋರಿದ್ದಾರೆ.
ಒಟ್ಟು 7 ನಾಟಕ ತಂಡಗಳನ್ನು ಸ್ಪರ್ಧೆಗೆ ಆಯ್ಕೆಗೊಳಿಸಲಾಗುತ್ತದೆ.ಈ ಮೊದಲು ನಾಟಕ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ಕೃತಿಗಳಿಗೆ ಅವಕಾಶವಿಲ್ಲ. ವಿಜೇತ ತಂಡಗಳಿಗೆ ಪ್ರಥಮ 30000 ರೂ.,ದ್ವಿತೀಯ 20000 ರೂ. ಮತ್ತು ತೃತೀಯ 15000 ರೂ.ಮೊತ್ತದ ನಗದು ಬಹುಮಾನ ಮತ್ತು ಶಾಶ್ವತ ಫಲಕ ಹಾಗೂ ವೈಯಕ್ತಿಕ ಬಹುಮಾನ ನೀಡಲಾಗುತ್ತದೆ. ಆಯ್ಕೆಯಾದ ತಂಡಗಳಿಗೆ 5 ಸಾವಿರ ರೂ.ಪ್ರಯಾಣ ಭತ್ಯೆ ನೀಡಲಾಗುವುದು. ಆಸಕ್ತ ತಂಡಗಳು 5 ಸಾವಿರ ರೂ.ಠೇವಣಿಯೊಂದಿಗೆ ನಾಟಕ ಕೃತಿಗಳನ್ನು ಮಿತ್ರ ಮಂಡಳಿಗೆ ಕಳುಹಿಸಿಕೊಡುವಂತೆ ಹಾಗೂ ವಿವರಗಳಿಗಾಗಿ 99018660337, 9449189506 ಸಂಪರ್ಕಿಸುವಂತೆ ಅವರು ವಿನಂತಿಸಿದರು.
ಶ್ರೀ ಮುರುಘೇಂದ್ರ ಮಿತ್ರ ಮಂಡಳಿ 1980ರಲ್ಲಿ ಸ್ಥಾಪನೆಯಾಗಿದ್ದು ವೈದ್ಯಕೀಯ,ಮದ್ಯವರ್ಜನ ,ಕೃಷಿ ಮಾಹಿತಿ,ರಕ್ತದಾನ ಶಿಬಿರಗಳು,ವಿದ್ಯಾರ್ಥಿ ವೇತನ,ಪುಸ್ತಕ ವಿತರಣೆ,ನಾಟಕ,ಯಕ್ಷಗಾನ,ನೃತ್ಯ ಮೊದಲಾದವುಗಳಿಗೆ ಕಲಾ ಪ್ರೋತ್ಸಾಹ ಇತ್ಯಾದಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ . ಇದೀಗ 3ನೇ ಬಾರಿ ನಾಟಕ ಸ್ಪರ್ಧೆ ಆಯೋಜಿಸಲಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಗೌರವಾಧ್ಯಕ್ಷ ಸಂತೋಷ್ ಮೂರ್ಜೆ,ಪದಾಧಿಕಾರಿಗಳಾದ ಕೆ.ವಿ.ರಾಜೇಂದ್ರ, ಕಾಂತಪ್ಪ ಟೈಲರ್, ಗಿರೀಶ್ ಅನಿಲಡೆ, ದಿನೇಶ್ ನಾಯಕ್,ರತ್ನದೇವ್ ಪುಂಜಾಲಕಟ್ಟೆ, ಮಂಜಪ್ಪ ಮೂಲ್ಯ,ಎಚ್ಕೆ ನಯನಾಡು,ರಘುರಾಮ ಶೆಟ್ಟಿ,ರಮೇಶ್ ಶೆಟ್ಟಿ,ವಿನೀತ್ ಮನ್ಯ,ಶಿವರಾಜ್ ಅತ್ತಾಜೆ,ಪ್ರವೀಣ್ ಶೆಟ್ಟಿ,ವಿಕ್ಟರ್ ಡಿಸೋಜ, , ದಿನಕರ್ ಶೆಟ್ಟಿ,ಫ್ರಾನ್ಸಿಸ್ ಡಿಸೋಜ, ಬಾಬು ನೀರಾರಿ ಮತ್ತಿತರರು ಉಪಸ್ಥಿತರಿದ್ದರು.