ಬಂಟ್ವಾಳ: ಆಕಾಂಕ್ಷಾ ಸಂಸ್ಥೆಯು ಜ್ಞಾನದ ಜೊತೆ ಸಾಮಾಜಿಕ ಕಳಕಳಿ, ಕೌಶಲಾಭಿವೃದ್ಧಿ ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುತ್ತಿದೆ. ಸಂದರ್ಭಕ್ಕನುಗುಣವಾಗಿ ಈ ಜೀವನ ಕೌಶಲಗಳನ್ನು ಅಭಿವೃದ್ಧಿ ಪಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಖೆಯು ಉಪನಿರ್ದೇಶಕರಾದ ವಾಲ್ಟರ್ ಡಿ ಮೆಲ್ಲೊ ಹೇಳಿದರು.
ಬೊಂಡಾಲ ಜಗ್ಗನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ, ಶಂಭೂರು ಇಲ್ಲಿ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬಂಟ್ವಾಳ, ರೋಟರಿ ಕ್ಲಬ್, ಬಂಟ್ವಾಳ ಇವರ ಆಶ್ರಯದಲ್ಲಿ ನಡೆದ ಎರಡು ದಿನಗಳ “ಪ್ರೇರಣಾ-2016 ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ, ಶಾಲಾ ಸಂಚಾಲಕರಾದ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಯವರು ಮಾತನಾಡಿ, ಆಕಾಂಕ್ಷಾ ಟ್ರಸ್ಟ್ ಒಂದು ಸಮಾನ ಮನಸ್ಕರ ತಂಡ, ಇದರ ಹೆಸರೇ ಸೂಚಿಸುವಂತೆ ಇದು ವಿದ್ಯಾರ್ಥಿಗಳಲ್ಲಿ ಬಹಳಷ್ಟು ಆಕಾಂಕ್ಷೆಯನ್ನು ಮೂಡಿಸುವ ತಂಡವಾಗಿದೆ ಹಾಗೂ ಈ “ಪ್ರೇರಣಾ” ಕಾರ್ಯಾಗಾರವು ಎಲ್ಲಾ ಮಕ್ಕಳಲ್ಲಿಯೂ ಪ್ರೇರಣೆಯನ್ನು ತುಂಬಲಿ ಎಂದರು.
ರೋಟರಿ ಕ್ಲಬ್ ಬಂಟ್ವಾಳ ಇದರ ಅಧ್ಯಕ್ಷರಾದ ರಿತೇಶ್ ಬಾಳಿಗ, ಶಂಭೂರು ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ನಾಟಿ ಕೃಷ್ಣರಾಜ ಶೆಟ್ಟಿ, ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಶ್ರೀಶ ಭಟ್ , ಶ್ರೀಕಾಂತ್ ಉಪಸ್ಥಿತರಿದ್ದರು. ಶಂಭೂರು ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಂಭೂರು ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಕಮಲಾಕ್ಷ ಇವರು ಸ್ವಾಗತಿಸಿದರು. ಆಕಾಂಕ್ಷ ಟ್ರಸ್ಟ್ ಸದಸ್ಯೆ ನಿವೇದಿತ ಇವರು ಕಾರ್ಯಕ್ರಮ ನಿರೂಪಿಸಿದರು. ಒಟ್ಟು32 ಶಾಲೆಯ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಕಾರ್ಯಾಗಾರದ ಪ್ರಯೋಜನವನ್ನು ಪಡೆದರು.