ಬಂಟ್ವಾಳ: ಚುನಾವಣಾ ಸಂದರ್ಭದಲ್ಲಿ ನಾವು ಜನರಿಗೆ ಸಾಕಷ್ಟು ಭರವಸೆಗಳನ್ನು ನೀಡಿರುತ್ತೇವೆ. ಆದರೆ ಅನುದಾನದ ಕೊರತೆಯಿಂದ ಅದನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಪರಿಸ್ಥಿತಿ ಈಗ ಸಮಾರಂಭದ ಅತಿಥಿಗಳಿಗಷ್ಟೆ ಸೀಮಿತ. ಜನರಿಂದ ಛೀಮಾರಿ ಹಾಕಿಕೊಳ್ಳುವಂಥಪರಿಸ್ಥಿತಿ ಎದುರಾಗಿದೆ ಎಂದು ಬುಧವಾರ ಬಂಟ್ವಾಳ ತಾಲೂಕು ಪಂಚಾಯತ್‌ನ ಎಸ್.ಜಿ.ಎಸ್.ವೈ.ಸಭಾಂಗಣದಲ್ಲಿ ನಡೆದ ರಾಜ್ಯದ ೪ನೇ ಹಣಕಾಸು ಆಯೋಗದ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳ ಸಮಾಲೋಚನಾ ಸಭೆಯಲ್ಲಿ ತಾ.ಪಂ.ಸದಸ್ಯರು ತಮ್ಮ ಅಳಲನ್ನು ತೋಡಿಕೊಂಡರು.
ನಾಲ್ಕನೇ ಹಣಕಾಸು ಆಯೋಗ ಅಧ್ಯಕ್ಷ ಸಿ.ಜಿ.ಚಿನ್ನಸ್ವಾಮಿ ಅನುಪಸ್ಥಿತಿಯಲ್ಲಿ ಸದಸ್ಯ ಎಚ್.ಡಿ.ಅಮರನಾಥ್ ಸಭೆ ಅಧ್ಯಕ್ಷತೆ ವಹಿಸಿ ಅಹವಾಲು ಆಲಿಸಿದರು.
ಸದಸ್ಯರಿಗೆ ತಲಾ 10 ಲಕ್ಷ ಅನುದಾನ ಒದಗಿಸುವುದು ಹಾಗೂ ಎಲ್ಲ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಆಯೋಗಕ್ಕೆ ಮನವಿ ಮಾಡಿದರು.
ತಾಲೂಕಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲು ಅಂತರ್ಜಲ ವೃದ್ಧಿಗೆ ಅನುದಾನ ಒದಗಿಸಬೇಕು. ಇಲ್ಲಿ ಪ್ರಸ್ತಾಪವಾದ ಸಮಸ್ಯೆಗಳನ್ನು ತಾವು ಕೇವಲ ತಮ್ಮ ಡೈರಿಯಲ್ಲಿ ಮಾತ್ರ ನಮೂದಿಸದೆ ತಾಲೂಕಿನ ಆಭಿವೃದ್ಧಿಯ ದೃಷ್ಟಿಯಿಂದ ಈ ಎಲ್ಲಾ ಬೇಡಿಕೆಗಳನ್ನು ಉಲ್ಲೇಖಿಸಿ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಸದಸ್ಯರು ಆಯೋಗದ ಪ್ರತಿನಿಧಿಗಳ ಗಮನ ಸೆಳೆದರು.
ಈಗ ಸಿಗುವ 2 ಲಕ್ಷ 85 ಸಾವಿರ ಕ್ಷೇತ್ರದ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಕಾಗುವುದಿಲ್ಲ ಈಗಾಗಲೇ ತಾಪಂ ಆಡಳಿತ ಅಧಿಕಾರಕ್ಕೆ ಬಂದು ವರ್ಷ ಸಮೀಪಿಸುತ್ತಿದೆ. ಅನುದಾನದ ಕೊರತೆಯಿಂದ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ ಎಂದು ಸದಸ್ಯರು ಆಯೋಗ ಪ್ರತಿನಿಧಿಗಳ ಮುಂದೆ ಅಹವಾಲು ಮಂಡಿಸಿದರು.
ಆಯೋಗದ ಸದಸ್ಯರಾದ ತಮಗೆ ವೇತನ ಜೊತೆಗೆ ವಿವಿಧ ಭತ್ತ್ಯೆಗಳನ್ನು ನೀಡಲಾಗುತ್ತಿದೆ. ಆದರೆ ನಾವು ಜನರ ಮಧ್ಯದಲ್ಲೇ ಇದ್ದು ಕೆಲಸ ಮಾಡಬೇಕಾಗಿರುವುದರಿಂದ ನಮಗೆ ಕೇವಲ ಒಂದೂವರೆ ಸಾವಿರ ರೂಗಳಷ್ಟೇ ಗೌರವ ಧನ ನೀಡಲಾಗುತ್ತಿದೆ. ಇದನ್ನೂ ಕನಿಷ್ಠ 5ರಿಂದ 8 ಸಾವಿರದವರೆಗೆ ಏರಿಸಬೇಕು ಎಂದು ಹಿರಿಯ ಸದಸ್ಯ ಉಸ್ಮಾನ್ ಕರೋಪಾಡಿ ಆಯೋಗದ ಪ್ರತಿನಿಧಿಗಳ ಮುಂದೆ ವಾದಿಸಿದರು.
ಪ್ರಸ್ತುತ ಮಳೆ ಪ್ರಮಾಣ ಕಡಿಮೆ ಆಗಿರುವುದರಿಂದ ಈ ಬಾರಿ ನವೆಂಬರ್ ತಿಂಗಳಿಂದಲೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಬೋರ್ ವೆಲ್ ಕೊರೆಯುವಂತಿಲ್ಲ. ಹೀಗಾಗಿ ಅಲ್ಲಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುವ ಮೂಲಕ ಅಂತರ್ಜಲ ವೃದ್ಧಿಗೆ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗೆ ಪೂರಕವಾಗಲಿದೆ. ಈ ಹಿನ್ನೆಲೆಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಒದಗಿಸಲು ಶಿಫಾರಸು ಮಾಡಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದಾ ಒತ್ತಾಯಿಸಿದರು.
ಬಂಟ್ವಾಳಕ್ಕೆ ಅಭಿವೃದ್ಧಿಗೆ ಪೂರಕವಾಗಿ ಅನುದಾನವನ್ನು ಬೇಗ ಒದಗಿಸಿಕೊಡಬೇಕೆಂದು ಉಪಾಧ್ಯಕ್ಷ ಅಬ್ಬಾಸ್ ಆಲಿ ತಿಳಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಮಾತನಾಡಿ, ಜನರ ಬೇಡಿಕೆ ಈಡೇರಿಸಲು ತಾಪಂ ಸದಸ್ಯರಿಗೆ ಹೆಚ್ಚುವರಿ ಅನುದಾನ ಒದಗಿಸಬೇಕು ಹಾಗೂ ಎಲ್ಲಾ ಸದಸ್ಯರ ಗೌರವಧನ ಹೆಚ್ಚಳಮಾಡಬೇಕೆಂದು ತಿಳಿಸಿದರು.
ತಾಲೂಕಿನಲ್ಲಿ ಗಣಿಗಾರಿಕೆ ನಡೆಯುವುದರಿಂದ ಎಲ್ಲಾ ಪಂಚಾಯತ್‌ಗಳ ರಸ್ತೆಗಳು ಸಂಪೂರ್ಣ ಹದಗೆಡುತ್ತದೆ ಹಾಗೂ ಮಳೆಗಾಲದಲ್ಲಿ ಕಲ್ಲಿನ ಕೋರೆಗಳಲ್ಲಿ ನೀರು ನಿಂತು ದುರ್ಘಟನೆ ನಡೆದರೆ ಸಾರ್ವಜನಿಕರು ಪಂಚಾಯತ್‌ಗೆ ಬಂದು ದೂರು ನೀಡುತ್ತಾರೆ ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ತುಂಬೆ ಪಿಡಿಒ ಗಮನಸೆಳೆದರು.
4ನೇ ಹಣಕಾಸು ಆಯೋಗದ ಸದಸ್ಯರಾದ ಡಾ. ಶಶಿಧರ್, ಸಮಾಲೋಚಕರಾದ ಸುಪ್ರಸನ್ನಾ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಜಾಫರ್ ಶರೀಫ್, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ ಸ್ವಾಗತಿಸಿ ವಂದಿಸಿದರು.